ವಿವಾಹದಲ್ಲಿ ವ್ಯವಹಾರ ಇದ್ದರೆ ಅದು ವಿವಾದ

ಮುರುಘಾ ಮಠದಲ್ಲಿನ 31ನೇ ವರ್ಷದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಶರಣರು

ಚಿತ್ರದುರ್ಗ, ಅ.5 – ಸಂಸಾರ ಸಸಾರವಾಗಬೇಕೆಂದರೆ ಅದಕ್ಕೊಂದು ಅರ್ಥ ಬೇಕು. ಯಾರ ವಿವಾಹದಲ್ಲಿ ವ್ಯವಹಾರ ಇರುತ್ತದೆಯೋ ಅದು ವಿವಾದವಾಗುತ್ತದೆ. ಸಂಸಾರದ ಭಾರ ತಿಳಿಯಾಗಬೇಕಾದರೆ ಆದರ್ಶದ ಸ್ಪರ್ಶವಾಗಬೇಕು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

ಶ್ರೀ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠ ಮತ್ತು ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಸಹಯೋಗದಲ್ಲಿ ನಡೆದ ಮೂವತ್ತನೇ ವರ್ಷದ ಹತ್ತನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಶರಣರು ಆಶೀರ್ವಚನ ನೀಡಿದರು.

ಸಂಸಾರ ಬಹಳ ಭಾರ. ಅನೇಕ ತೊಡಕುಗಳು, ತೊಂದರೆಗಳು, ತಾಪತ್ರಯಗಳು ಎದುರಾಗುತ್ತವೆ. ಮಾನವನ ಬದುಕಿನಲ್ಲಿ ತೊಂದರೆಗಳು ಸಾಮಾನ್ಯ. ಸಂಸಾರವೆಂಬ ಹೆಣ ಬಿದ್ದರೆ, ತಿನಲು ನಾಯಿಗಳು ನೋಡಾ? ಇಂದು ಸಂಸಾರದಲ್ಲಿಯೂ ಅನೇಕ ರೀತಿಯ ಬಂಡಾಟ ಇದೆ. ಆಗ ಸಂಸಾರ ಭಾರವಾಗುತ್ತದೆ. ಸಂಸಾರಕ್ಕೆ ಮತ್ತೊಂದು ಹೆಸರು ಪ್ರಪಂಚ.  12ನೇ ಶತಮಾನದ ಶರಣರು ಆದರ್ಶಕ್ಕೆ ಹತ್ತಿರವಿದ್ದರು. ಆದರೆ, 21ನೇ ಶತಮಾನದ ಜನರು ಆದರ್ಶದಿಂದ ದೂರ ಉಳಿಯುತ್ತಿದ್ದಾರೆ. ಕಾಲ ಬದಲಾವಣೆ ಆಗುತ್ತಿಲ್ಲ. ಮಾನವ ಬದಲಾಗುತ್ತಿದ್ದಾನೆ. ನಮ್ಮೊಳಗೆ ಪಾರಮಾರ್ಥ ಅಳವಡಿಸಿಕೊಳ್ಳಬೇಕು ಎಂದು ಶರಣರು ಕರೆ ನೀಡಿದರು.

ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಸಂಸಾರ ಎನ್ನುವುದು ಬಹುತೇಕರಿಗೆ ಚೆನ್ನಾಗಿಲ್ಲ ಅನ್ನಿಸುತ್ತಿದೆ. ಅಂದರೆ ತೇಲಲೀಯದು ಗುಂಡು, ಮುಳುಗಲೀಯದು ಬೆಂಡು ಎನ್ನುವ ಹಾಗೆ ಸಂಸಾರ. ಸಂಸಾರದಲ್ಲಿ ಸವಾಲುಗಳಿವೆಯೇ ಎಂಬುದನ್ನು ಗಮನಿಸಬೇಕು. ನಮ್ಮ ಬದುಕನ್ನು ಸರಿ ಮಾಡಿಕೊಳ್ಳಬೇಕು. ಸಂಸಾರದಲ್ಲಿ ಸದ್ಗತಿ ಇದೆ. ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ನಡೆಯಬೇಕು ಎಂದು ತಿಳಿಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಯೋಗೇಶ್ ಮಾತನಾಡಿ, ಸಮಾಜಕ್ಕೆ ಸಂಸ್ಕೃತಿ ಎನ್ನುವುದು ಶಾಶ್ವತ. ಸಂಸ್ಕೃತಿಯನ್ನು ಪೋಷಣೆ ಮಾಡುವುದರಲ್ಲಿ  ಮುರುಘಾ ಮಠದ ಕಾರ್ಯಗಳು ಇತರರಿಗೆ ಮಾದರಿಯಾಗಿವೆ ಎಂದರು.

ಇದೇ ಸಂದರ್ಭದಲ್ಲಿ 5 ಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟರು. ವೀರಶೈವ ಸಮಾಜದ ಅಧ್ಯಕ್ಷ ಎನ್.ಜಯಣ್ಣ ವೇದಿಕೆಯಲ್ಲಿದ್ದರು. ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹ ಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಪೈಲ್ವಾನ್ ತಿಪ್ಪೇಸ್ವಾಮಿ, ಎನ್. ತಿಪ್ಪಣ್ಣ ಮೊದಲಾದವರಿದ್ದರು.

ಎಂ. ವೀರಭದ್ರಪ್ಪ ಸ್ವಾಗತಿಸಿದರು. ಜ್ಞಾನಮೂರ್ತಿ ನಿರೂಪಿಸಿದರು.

error: Content is protected !!