ಗ್ರಾಮ ಸ್ವರಾಜ್ಯ ಜಾಗೃತಿಗಾಗಿ ಮಹಿಮಾ ಪಟೇಲ್‌ ಪಾದಯಾತ್ರೆ

ಚನ್ನಗಿರಿ, ಅ. 2 – ಗ್ರಾಮ ಸ್ವರಾಜ್ಯದ ಬಗ್ಗೆ ಗ್ರಾಮೀಣರಲ್ಲಿ ಜಾಗೃತಿ ಮೂಡಿಸಲು, ಗ್ರಾಮಗಳಲ್ಲಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಉದ್ಯೋಗ ಸೃಷ್ಟಿ, ಕೃಷಿ ಆಧಾರಿತ ಸಂಸ್ಕರಣಾ ಘಟಕಗಳ ಸ್ಥಾಪನೆ, ಸಹಜ ಬೇಸಾಯ, ಪಶು ಸಂಗೋಪನೆ, ಮಿಶ್ರ ಬೆಳೆ ಬಗ್ಗೆ ಜಾಗೃತಿ, ಪಂಚಾಯಿತಿಗಳಲ್ಲಿ ಸ್ವಾಲಂಬನೆಗೆ ಒತ್ತು ಎಂಬ ಧ್ಯೇಯೋದ್ದೇಶಗಳೊಂದಿಗೆ ಮಾಜಿ ಶಾಸಕ ಮಹಿಮಾ ಪಟೇಲ್‌ ಅವರು ಬೆಂಗಳೂರಿನಿಂದ ಕೂಡಲ ಸಂಗಮಕ್ಕೆ ಇಂದು ಪಾದಯಾತ್ರೆ ಆರಂಭಿಸಿದ್ದಾರೆ.

ಈ ಪಾದಯಾತ್ರೆಯು ಸುಮಾರು 2,000 ಕಿ.ಮೀ. ದೂರದ್ದು, ನಾಲ್ಕೈದು ಹಂತಗಳಲ್ಲಿ ನಡೆಯಲಿದೆ. ಮೊದಲ ಭಾಗವಾಗಿ ಬೆಂಗಳೂರಿನಲ್ಲಿ ಇಂದು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜೆಡಿಯು ಕಚೇರಿಯಿಂದ ಪಾದಯಾತ್ರೆ ಆರಂಭವಾಯಿತು. ಪ್ರತಿದಿನ 20 ಕಿ.ಮೀ ಕ್ರಮಿಸಿ, ಮಧ್ಯೆ ಮಠ ಮತ್ತು ಹಿತೈಷಿಗಳ ಮನೆಗಳಲ್ಲಿ ತಂಗಿ, ಮಾರನೇ ದಿನ ಯಾತ್ರೆ ಪುನರಾರಂಭಿಸಲಾಗುವುದು. ಆರಂಭದಲ್ಲಿ 10 ಮಂದಿ ಇದರಲ್ಲಿದ್ದು, ನಂತರ ಸ್ನೇಹಿತರು, ಕಾರ್ಯಕರ್ತರು, ಹಿತೈಷಿಗಳು, ಬಂಧು – ಮಿತ್ರರು ಸೇರಲಿದ್ದಾರೆ ಎಂದು ಮಹಿಮಾ ಪಟೇಲ್ ತಿಳಿಸಿದ್ದಾರೆ.

ಮೊದಲು ಬೆಂಗಳೂರಿನಿಂದ ಕಾರಿಗನೂರು, ನಂತರ ನವೆಂಬರ್ ಕೊನೆಯ ವಾರದಲ್ಲಿ ಕಾರಿಗನೂರಿನಿಂದ ಹೊರಟು ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಪುಣ್ಯಸ್ಮರಣೆಯ ದಿನವಾದ ಡಿಸೆಂಬರ್ 12ರಂದು ಕೂಡಲಸಂಗಮ ತಲುಪಲಿದೆ. 2021ರಲ್ಲಿ ಬೀದರ್‌ನಿಂದ ಚಾಮರಾಜನಗರಕ್ಕೆ ಈ ಪಾದಯಾತ್ರೆ ನಡೆಸಲು ಉದ್ದೇಶಿಸಲಾಗಿದೆ. ಇದೊಂದು ಸೌಹಾರ್ದಯುತ ಕಾರ್ಯವೇ ಹೊರತು ಯಾವುದೇ ಸರ್ಕಾರ ಮತ್ತು ಪಕ್ಷಗಳ ವಿರುದ್ಧದ ನಡೆ ಅಲ್ಲ ಎಂದೂ ಮಹಿಮಾ ಸ್ಪಷ್ಟಪಡಿಸಿದ್ದಾರೆ.

error: Content is protected !!