ಜೆಡಿಎಸ್ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆ
ದಾವಣಗೆರೆ, ಅ. 2 – ಪದವೀಧರ ಕ್ಷೇತ್ರದ ಚುನಾವಣೆಗೆ ಅವಧಿ ಕಡಿಮೆ ಇದ್ದು, ತ್ವರಿತವಾಗಿ ಹೆಚ್ಚು ಮತದಾರರನ್ನು ತಲುಪಬೇಕಿದೆ ಎಂದು ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಆರ್. ಚೌಡರೆಡ್ಡಿ ತೂಪಲ್ಲಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ನಗರದ ಹಿರೇಮಠದಲ್ಲಿ ಇಂದು ಆಯೋಜಿಸಲಾಗಿದ್ದ ಜೆಡಿಎಸ್ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಇದೇ ದಿನಾಂಕ 28ರಂದು ಚುನಾವಣೆ ನಡೆಯಲಿದೆ. ಕ್ಷೇತ್ರದಲ್ಲಿ 32 ತಾಲ್ಲೂಕುಗಳಿವೆ. ದಿನಕ್ಕೊಂದು ತಾಲ್ಲೂಕು ಭೇಟಿ ನೀಡಿದರೂ ಸಮಯ ಸಾಲದು. ಕಾರ್ಯಕರ್ತರು ಹೆಚ್ಚು ಚುರುಕಾಗಿ ಕೆಲಸ ಮಾಡಬೇಕಿದೆ ಎಂದರು.
ವಿಧಾನ ಪರಿಷತ್‌ನ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ಸಾಧಿಸಿದರೆ, ರಾಜ್ಯದಲ್ಲಿ ಪಕ್ಷ ಮುಂಚೂಣಿಗೆ ಬರಲಿದೆ. ಹೀಗಾಗಿ ಚುನಾವಣೆಯನ್ನು ಲಘುವಾಗಿ ಭಾವಿಸಬಾರದು ಎಂದು ಹೇಳಿದರು.
ಕ್ಷೇತ್ರದಲ್ಲಿ ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ದಾವಣಗೆರೆ, ಹರಿಹರ ಹಾಗೂ ಜಗಳೂರು ತಾಲ್ಲೂಕುಗಳು ಆಗ್ನೇಯ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ಇಲ್ಲಿ 19,759 ಮತದಾರರಿದ್ದು, ಅವರೆಲ್ಲರನ್ನೂ ತಲುಪಬೇಕು ಎಂದು ತಿಳಿಸಿದರು.
ಅಭ್ಯರ್ಥಿಯ ಆತ್ಮಾವಲೋಕನ ಮಾಡಿಸಿದ ಸಭೆ
ಅಭ್ಯರ್ಥಿಯ ಪ್ರಚಾರಕ್ಕಾಗಿ ಕರೆಯಲಾಗಿದ್ದ ಜೆಡಿಎಸ್ ಪಕ್ಷದ ಸಭೆಯು, ಅಭ್ಯರ್ಥಿ ಆರ್. ಚೌಡರೆಡ್ಡಿ ತೂಪಲ್ಲಿ ಅವರ ಆತ್ಮಾವಲೋಕನಕ್ಕೆ ದಾರಿ ಮಾಡಿ, ಅವರು ತಮ್ಮಿಂದ ತಪ್ಪಾಗಿದೆ ಎಂದು ಹೇಳಿದ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಕಾನೂನು ವಿಭಾಗದ ಅಧ್ಯಕ್ಷ ಯೋಗೀಶ್, ಹರಿಹರದಲ್ಲಿ ವಕೀಲರ ಭವನಕ್ಕಾಗಿ ಅನುದಾನ ಕೇಳಿದ್ದೆವು. ಆದರೆ, ಅನುದಾನ ನೀಡಲಿಲ್ಲ. ಕನಿಷ್ಠ ಗೆದ್ದ ನಂತರ ಅಭಿನಂದನೆ ಸ್ವೀಕರಿಸಲೂ ಬರಲಿಲ್ಲ ಎಂದು ಆಕ್ಷೇಪಿಸಿದರು.
ಹರಿಹರದ ಮುಖಂಡ ಎ.ಕೆ. ನಾಗಪ್ಪ ಮಾತನಾಡಿ, ನಮಗೆ ಅನುದಾನ ಬೇಕಿಲ್ಲ. ಅನುದಾನ ತರುವ ಸಾಮರ್ಥ್ಯ ನಮಗಿದೆ. ಚೌಡರೆಡ್ಡಿ ತೂಪಲ್ಲಿ ಅವರು ಕನಿಷ್ಠ ಕೈ ಮುಗಿಯುತ್ತಾ ಹೋಗಲಾದರೂ ಇಲ್ಲಿಗೆ ಬರಬೇಕು ಎಂದರು.
ಜೆಡಿಎಸ್ ಅಭ್ಯರ್ಥಿ ಚೌಡರೆಡ್ಡಿ ತೂಪಲ್ಲಿ ಮಾತನಾಡಿ, ನಾನು ನನ್ನಿಂದ ಆದ ತಪ್ಪು ಒಪ್ಪಿಕೊಂಡಿದ್ದೇನೆ. ವಕೀಲರ ಸಂಘಕ್ಕೆ ಅನುದಾನ ಕೊಡಿಸಲು ಆಗಿಲ್ಲ. ವರ್ಷಕ್ಕೆ ನಮಗೆ ಕೇವಲ 2 ಕೋಟಿ ರೂ. ಅನುದಾನ ಸಿಗುತ್ತದೆ. ಒಂದು ತಾಲ್ಲೂಕಿಗೆ 6.5 ಲಕ್ಷ ರೂ. ಮಾತ್ರ ಕೊಡಲು ಸಾಧ್ಯ. ದಾವಣಗೆರೆಯಲ್ಲಿ ಶಿವಶಂಕರ್ ಅವರು ಹೇಳಿದ ಕಡೆ ಅನುದಾನ ನೀಡಿದ್ದೇನೆ. ಅವರ ಅನುಮತಿ ಇಲ್ಲದೆ ಜಿಲ್ಲೆಯಲ್ಲಿ ಹೆಜ್ಜೆಯನ್ನೂ ಇಟ್ಟಿಲ್ಲ ಎಂದರು.
ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮಾತನಾಡಿ, ದಾವಣಗೆರೆಯಲ್ಲಿ ನನ್ನ ಅನುಮತಿ ಇಲ್ಲದೆ ಹೆಜ್ಜೆ ಇಟ್ಟಿಲ್ಲ ಎಂದು ಚೌಡರೆಡ್ಡಿ ತೂಪಲ್ಲಿ ಹೇಳಿದ್ದಾರೆ. ಈ ಜಿಲ್ಲೆ ನನ್ನ ಜಾಗೀರು ಅಲ್ಲ. ಗೌರವ ಕೊಟ್ಟರೆ ಸಾಕು. ಅವರು ಅನುದಾನವನ್ನು ಸಮರ್ಪಕವಾಗಿ ಹಂಚಬೇಕು, ಕಾರ್ಯಕರ್ತರ ಸಂಪರ್ಕದಲ್ಲಿ ಇರಬೇಕು ಎಂದು ಕಿವಿಮಾತು ಹೇಳಿದರು.
ದಾವಣಗೆರೆ ಜಿಲ್ಲೆಯಲ್ಲಿ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅವರ ಮಾರ್ಗದರ್ಶನದಲ್ಲಿ ನಾನು ಕಾರ್ಯ ನಿರ್ವಹಿಸುತ್ತಾ ಬಂದಿದ್ದು, ಈ ಬಾರಿಯೂ ಅವರ ಮಾರ್ಗದರ್ಶನದಂತೆ ಮುಂದುವರೆಯುತ್ತೇನೆ ಎಂದೂ ತಿಳಿಸಿದರು.
ಜೆಡಿಎಸ್ ಎಸ್‌ಟಿ ಮೋರ್ಚಾ ಅಧ್ಯಕ್ಷ ಹೊದಿಗೆರೆ ರಮೇಶ್ ಮಾತನಾಡಿ, ಪದವೀಧರ ಮತದಾರರು ಜೆಡಿಎಸ್ ಅನ್ನು ಹೆಚ್ಚಾಗಿ ಕೈ ಹಿಡಿಯುತ್ತಾ ಬಂದಿದ್ದಾರೆ. ಈ ಬಾರಿಯ ವಾತಾವರಣ ನಮ್ಮ ಪರ ಇದೆ ಎಂದರು.
ಬಿಜೆಪಿ ಎಲ್ಲಾ ರೀತಿ ಸ್ವಾತಂತ್ರ್ಯ ಹರಣ ಮಾಡುತ್ತಿದೆ. ಇದು ಪ್ರಜಾಪ್ರಭುತ್ವವೇ? ಎಂಬ ಪ್ರಶ್ನೆ ಹುಟ್ಟುತ್ತಿದೆ. ನಿರುದ್ಯೋಗಿಗಳನ್ನು ತಿರಸ್ಕರಿಸಿರುವ ಬಿಜೆಪಿ, ಚುನಾವಣೆ ಮುಂಚಿನ ಎಲ್ಲಾ ಭರವಸೆಗಳನ್ನು ಬಾಕಿ ಉಳಿಸಿದೆ ಎಂದು ಟೀಕಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ನೋಂದಣಿಯಾಗಿರುವ ಮತದಾರರಲ್ಲಿ ಪಕ್ಷದ ಸಿಂಹಪಾಲಿದೆ. ನಮ್ಮ ಪಕ್ಷದ ಅಭ್ಯರ್ಥಿ ಗಟ್ಟಿ ಇದ್ದಾರೆ ಎಂದು ಹೇಳಿದರು.
ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದ ಇತಿಹಾಸವಿಲ್ಲ. ಈ ಬಾರಿಯೂ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಸ್ಪರ್ಧೆ ಇದ್ದು, ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸ ಇದೆ ಎಂದರು.
ವೇದಿಕೆಯ ಮೇಲೆ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಗಣೇಶ್ ದಾಸಕರಿಯಪ್ಪ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಶೀಲಾ ಕುಮಾರ್, ಮುಖಂಡರಾದ ಕಲ್ಲೇರುದ್ರೇಶ್, ಸಿ. ಅಂಜಿನಪ್ಪ ಕಡತಿ, ಎ.ಕೆ. ನಾಗಪ್ಪ, ಎಸ್. ಓಂಕಾರಪ್ಪ, ಎಂ.ಎನ್. ನಾಗರಾಜ್, ಅಮಾನುಲ್ಲಾ ಖಾನ್, ಪಾಲಿಕೆ ಸದಸ್ಯ ದಾದಾಪೀರ್, ಯೋಗೀಶ್, ಧನಂಜಯ, ಬಂಡೇರ ತಿಮ್ಮಣ್ಣ, ಸುನಂದಮ್ಮ, ಸಂಗನಗೌಡ್ರು ಮತ್ತಿತರರು ಉಪಸ್ಥಿತರಿದ್ದರು.