ಗಾಂಧೀಜಿಯವರ ಬದಲಾವಣೆ ತತ್ವದಿಂದ ಸುಧಾರಣೆ

ಗಾಂಧೀಜಿ-ಶಾಸ್ತ್ರೀಜಿ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ದಾವಣಗೆರೆ, ಅ. 2- ಗಾಂಧೀಜಿಯವರ ತತ್ವಗಳು, ಮೌಲ್ಯಗಳು ಎಂದಿಗೂ ಆದರ್ಶಪ್ರಾಯ. ಸತ್ಯ, ಅಹಿಂಸೆ, ಧರ್ಮದ ಮಾರ್ಗದಲ್ಲಿ ನಡೆಯುವ ಪ್ರಯತ್ನವನ್ನು ನಾವೆಲ್ಲರೂ ಮಾಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಕರೆ ನೀಡಿದರು.

ಇಲ್ಲಿನ ಮಹಾನಗರಪಾಲಿಕೆ ಆವರಣದಲ್ಲಿ  ಜಿಲ್ಲಾಡಳಿತದಿಂದ ಇಂದು ಏರ್ಪಡಿಸಲಾಗಿದ್ದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮತ್ತೊಬ್ಬರಲ್ಲಿ ಕಾಣ ಬಯಸುವ ಬದಲಾವಣೆ ಮೊದಲು ನಿನ್ನಲ್ಲಿ ಆಗಲಿ’ ಎಂಬ ಗಾಂಧೀಜಿಯವರ ತತ್ವವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸಮಾಜದಲ್ಲಿ ಶಾಂತಿ, ನೆಮ್ಮದಿ ಮತ್ತು ಸುಧಾರಣೆ ಸಾಧ್ಯವಾಗಲಿದೆ ಎಂದು ಅಭಿಪ್ರಾಯಿಸಿದರು.

ಪಾಲಿಕೆ ಮಹಾಪೌರರಾದ ಬಿ.ಜಿ.ಅಜಯಕುಮಾರ್ ಮಾತನಾಡಿ, ಗಾಂಧೀಜಿಯವರ ಮುಖ್ಯವಾದ ತತ್ವಗಳಾದ ಸತ್ಯ, ಅಹಿಂಸೆ, ನ್ಯಾಯದ ಹಾದಿಯಲ್ಲಿ ನಡೆಯಬೇಕಿದ್ದು,
ಇಂತಹ ಹಿರಿಯರ ಮಾರ್ಗದಲ್ಲಿ ನಡೆದರೆ ದೇಶ ಸಮೃದ್ದಿಯಾಗುತ್ತದೆ. 

ಮನುಕುಲಕ್ಕೆ ಒಳಿತಾಗಲು ಏನೇನು ಅಂಶಗಳು ಬೇಕೋ ಅವೆಲ್ಲವೂ ಅವರ ನಡೆಯಲ್ಲಿವೆ. ನಾವೆಲ್ಲಾ ಗಾಂಧೀಜಿ ಯವರಂತಹ ಹಿರಿಯರ ಮಾರ್ಗದಲ್ಲಿ ಸಾಗಬೇಕು ಎಂದರು.

ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ,  ಗಾಂಧೀಜಿಗೂ ಪಾಲಿಕೆ ಮುಂದಿರುವ ಗಾಂಧಿ ಸ್ಮಾರಕಕ್ಕೂ ನಂಟಿದೆ. 1942 ರ ಆಗಸ್ಟ್ 9 ರಂದು ಗಾಂಧೀಜಿ ಕರೆ ನೀಡಿದ್ದ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿಯ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆ ವೇಳೆ 6 ಜನ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ಗುಂಡಿಗೆ ಬಲಿದಾನ ವಾದ ಸ್ಮರಣಾರ್ಥ ಇಲ್ಲಿ ಗಾಂಧಿ ಸ್ಮಾರಕವನ್ನು ಸ್ಥಾಪಿಸಲಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಗಾಂಧೀಜಿ ಅವರ ಮೌಲ್ಯಗಳು, ತತ್ವಾದರ್ಶಗಳನ್ನು ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ನಮ್ಮ ವೈಯಕ್ತಿಕ ಮತ್ತು ವೃತ್ತಿ ಜೀವನ ಆದರ್ಶಪ್ರಾಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರೌಢಶಾಲಾ ಶಿಕ್ಷಕರು ಗಾಂಧೀಜಿಯವರಿಗೆ ಪ್ರಿಯವಾಗಿದ್ದ ವೈಷ್ಣವಜನತೋ, ರಘುಪತಿ ರಾಜಾರಾಂ ಸೇರಿದಂತೆ ಇತರೆ ಗೀತೆಗಳ ಸುಶ್ರಾವ್ಯ ಗಾಯನ ಪ್ರಸ್ತುತಪಡಿಸಿದರು. 

ಸರ್ವಧರ್ಮ ಪ್ರಾರ್ಥನೆ ಮಾಡಿದರು. ಉಪವಿಭಾಗಾಧಿ ಕಾರಿ ಶ್ರೀಮತಿ ಮಮತಾ ಹೊಸಗೌಡರ್ ಸ್ವಾಗತಿಸಿದರು. ಸಂಗೀತ ಶಿಕ್ಷಕ ಅಜಯ್ ನಾರಾಯಣ್ ಪ್ರಾರ್ಥಿಸಿದರು. ಶಿಕ್ಷಣ ಸಂಯೋಜಕ ಕೆ.ಜಿ.ಗೌಡ್ರು ನಿರೂಪಿಸಿದರು. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ ವಂದಿಸಿದರು.

ಪಾಲಿಕೆ ಉಪ ಮೇಯರ್ ಶ್ರೀಮತಿ ಸೌಮ್ಯ ನರೇಂದ್ರಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಎಸ್.ಟಿ. ವೀರೇಶ್, ಪ್ರಸನ್ನ ಕುಮಾರ್, ಸದಸ್ಯ ಶಿವನಗೌಡ ಪಾಟೀಲ, ಪಾಲಿಕೆ ವಿರೋಧ ಪಕ್ಷದ ನಾಯಕ ನಾಗರಾಜ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ,  ದೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಶ್ರೀಮತಿ  ನಜ್ಮಾ, ವಿಶೇಷ ಭೂಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್, ದಾವಣಗೆರೆ ತಹಶೀಲ್ದಾರ್ ಗಿರೀಶ್ ಇತರೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

error: Content is protected !!