ಭರತ ಭೂಮಿಯ ವಾಮನ ಮೂರ್ತಿ
ಭುವನದಿ ಹರಡಿದೆ ತ್ರಿವಿಕ್ರಮ ಕೀರ್ತಿ
ವಾರಣಾಸಿ ರಾಮನಗರದಿ ಜನಿಸಿದೆ
ಮೌಢ್ಯತೆ ಜಾತಿ ನಾಮವ ಕಿತ್ತೆಸೆದೆ.
ಸ್ವಾತಂತ್ರ್ಯ ಸಂಗ್ರಾಮದಿ ದೇಶಭಕ್ತಿ ತೋರಿದೆ
ಸಾಮಾಜಿಕ ಸಮಾನತೆಯ ದೇಶಕೆ ಸಾರಿದೆ
ಲೋಕಮಾನ್ಯರ ಅಸಾಮಾನ್ಯ ಶಿಷ್ಯನೆನಿದಿದೆ
ಮಹಾತ್ಮರ ಸತ್ಯಾಗ್ರಹಕ್ಕೆ ಬೆನ್ನೆಲುಬಾದೆ.
ವರದಕ್ಷಿಣೆ ಬೇಡವೇ ಬೇಡವೆಂದ ಹಠವಾದಿ
ಮಾವನ ಒತ್ತಾಯಕ್ಕೆ ಮಣಿದು ಪಡೆದೆ ಖಾದಿ
ಉದ್ಯೋಗದಿ ಸ್ತ್ರೀಯರೂ ಸಮಾನರೆಂದ ಛಲವಾದಿ
ನಿಸ್ವಾರ್ಥ ಸೇವೆಯಿಂದ ಪಡೆದೆ ಪ್ರಧಾನಿ ಗಾದಿ.
ಜೈ ಜವಾನ್ ಜೈ ಕಿಸಾನ್ ತಾರಕ ಮಂತ್ರವು
ಸೈನಿಕ ಕೃಷಿಕರಿಗೆ ತುಂಬಿತು ಆತ್ಮಬಲವು
ಶತ್ರುಗಳ ಗಡಿದಾಟದಂತೆ ಗುಡುಗಿದ ಗುಂಡು
ದಶದಿಕ್ಕಿನಲ್ಲಿ ಸೇನೆಗೆ ಬಲ ತುಂಬಿದ ಗಂಡು.
ರಾಜಕೀಯ ರಂಗದಿ ಅಜಾತಶತ್ರುವೆನಿಸಿದೆ
ರಾಜತಾಂತ್ರಿಕದಿ ಚಾಣಕ್ಯನಂತೆ ಪ್ರಜ್ವಲಿಸಿದೆ
ಸ್ನೇಹಕ್ಕೆ ಸಿದ್ಧ, ಸಮರಕ್ಕೂ ಬದ್ಧನೆಂದ ಧೀಮಂತ
ವಿಶ್ವಕ್ಕೆ ಭಾರತವೇ ಮಿತ್ರನೆಂದ ಶಾಂತಿದೂತ.
ಶಿವಮೂರ್ತಿ.ಹೆಚ್., ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಸಿಯಲ್
ಸ್ಕೂಲ್, ಅನುಭವ ಮಂಟಪ, ದಾವಣಗೆರೆ.
[email protected]