ವೃದ್ಧಾಪ್ಯ ಶಾಪವಲ್ಲ

ಅಜ್ಜನ ಕೋಲಿದು ನನ್ನಯ ಕುದುರೆ
ಹೆಜ್ಜೆಗು ಹೆಜ್ಜೆಗು ಕುಣಿಯುವ ಕುದುರೆ…
ಅಜ್ಜನ ಆಸರೆಯ ಕೋಲು ಅಂದು ಮಕ್ಕಳ ಆಟದ ಕೋಲಾಗಿತ್ತು. `ಕಾಲು ಮಧ್ಯದಲ್ಲಿ ಕೋಲನ್ನಿಟ್ಟುಕೊಂಡು ಓಡುತ್ತಾ, ಆಡುತ್ತಿದ್ದ ನಮ್ಮ ಬಾಲ್ಯದ ಈ ಕೋಲಿನ ಹಾಡು, ಅಜ್ಜನ ಜೊತೆಗಿನ ಅವಿನಾಭಾವ ಸಂಬಂಧವನ್ನು ಹೇಳುತ್ತಿತ್ತು.
`ಅಜ್ಜಿಯಿಲ್ಲದ ಮನೆ , ಮಜ್ಜಿಗೆಯಿಲ್ಲದ ಊಟ’… ಎರಡೂ ಪೂರ್ಣವಲ್ಲ.

ಸೊಸೆಯಂದಿರರನ್ನು, ಮಕ್ಕಳನ್ನು ಗದರುತ್ತಾ, ಮೊಮ್ಮಕ್ಕಳನ್ನು ಪ್ರೀತಿಯಿಂದ ಬೈಯುತ್ತಾ, ಕುಠಾಣಿಯಲ್ಲಿ ಎಲೆ ಅಡಿಕೆ ಕುಟ್ಟುತ್ತಾ, ಮನೆಯ ಹಿರಿತನದ ಪ್ರತೀಕವಾಗಿ ಕುಳಿತಿರುತ್ತಿದ್ದ ಅಜ್ಜಿ ಇಂದು ನೆನಪು ಮಾತ್ರ.

ಬೇಸಿಗೆ ರಜೆ, ದಸರಾ ರಜೆಗಳಲ್ಲಿ ಅಂದು ಬಾಲ್ಯದಲ್ಲಿ ಬೇರೆ ಬೇರೆ ಊರುಗಳಿಂದ ತಮ್ಮ ತಮ್ಮ ತಂದೆ-ತಾಯಿ ಊರಿಗೆ ಬರುತ್ತಿದ್ದ ಮೊಮ್ಮಕ್ಕಳ ಅಂದಿನ ಸಂತಸ – ಸಂಭ್ರಮ ಇಂದು ಕಣ್ಣರೆಯಾಗಿದೆ. ಆ ವಿಷಯದಲ್ಲಿ ಅಂದಿನ ಮಕ್ಕಳಾದ ನಾವೇ ಅದೃಷ್ಟವಂತರು ! ಆ ಭಾಗ್ಯ ಇಂದಿನ ಮಕ್ಕಳಿಗಿಲ್ಲ. ರಜೆ ಮುಗಿಸಿ ಬರುವಾಗ, `ಮುಂದಿನ ರಜೆಗೆ ನೀವು ಬಂದಾಗ ನಾನು ಇರ್ತೀನೋ, ಇಲ್ಲೋ?!’ ಎಂಬ ಪ್ರತಿವರ್ಷದ ಅಳು ಮಿಶ್ರಿತ ಮಾತಿನಲ್ಲಿ ಮೊಮ್ಮಕ್ಕಳನ್ನು ಬೀಳ್ಕೊಡುತ್ತಿದ್ದ… ಹೀಗೆ ಹೇಳ್ತಾ 15 ವರ್ಷದವರೆಗೆ ನಾವು ದೊಡ್ಡವರಾಗುವವರೆಗೆ ಜೀವಿಸಿದ್ದ ನಮ್ಮ ಅಜ್ಜಿ ತಾತಂದಿರ ಚಿತ್ರಣ ಇಂದು ಕಣ್ಮರೆಯಾಗಿದೆ.

ಹಿಂದೆ ನಮ್ಮಲ್ಲಿ `ಒಟ್ಟು ಕುಟುಂಬ ಪದ್ಧತಿ’ ಅಂದರೆ ತಾತ-ಮಗ-ಮೊಮ್ಮಗ ಮೂರು ತಲೆಮಾರುಗಳು ಒಂದೇ ಸೂರಿನಡಿಯಲ್ಲಿ ವಾಸಿಸುತ್ತಿದ್ದರು. ಹಿರಿಯ ತಲೆಮಾರು ತನ್ನ ಮುಂದಿನವರಿಗೆ ಜೀವನಾನುಭವಗಳ ಸುಖ-ದುಃಖ, ನೋವು-ನಲಿವು, ಲಾಭ-ನಷ್ಟ ಎಲ್ಲವುಗಳ ಕುರಿತು ಹೇಳುತ್ತಾ, ತಿದ್ದುತ್ತಾ, ಮುಂದಿನವರ ಬದುಕು ಹಸನಾಗಲು ಶ್ರಮಿಸುತ್ತಿದ್ದರು. ಜೊತೆಗೆ ಆ ವಯೋಮಾನದಲ್ಲಿ ಕಿರಿಯರ ಜೊತೆಗಿನ ಒಡನಾಟವು ಅವರ ಮುಪ್ಪನ್ನೂ ಮರೆಯಿಸಿ, ಸಂತಸದಿಂದ ಒಗ್ಗೂಡಿ ಬದುಕಿ ತಮ್ಮ ವಯಸ್ಸನ್ನೂ ಮರೆತು ಲವಲವಿಕೆಯಿಂದ ಇದ್ದ ಕಾರಣವಾಗಿ ಅವರಿಗದು ಶಾಪವೆನಿಸುತ್ತಿರಲಿಲ್ಲ.

ಇಂದು ಆ ಒಟ್ಟು ಕುಟುಂಬ ತುಂಡಾಗಿ `ಒಂಟಿ ಕುಟುಂಬ’ಗಳೇ ತುಂಬಿಕೊಂಡು ಅದರಲ್ಲೂ ಸದಸ್ಯರ ಸಂಖ್ಯೆ ಕಡಿಮೆಯಾಗುತ್ತಾ ಅಪ್ಪ-ಅಮ್ಮ, ಮಗ/ಮಗಳು ಇಷ್ಟೇ ಇರುವ ಸಂಖ್ಯೆ ಹೆಚ್ಚಿದೆ. ಪಾಶ್ಚಾತ್ಯ ಸಂಸ್ಕೃತಿಯ ಪರಿಣಾಮ ಕುಟುಂಬ ವ್ಯವಸ್ಥೆಯ ಮೇಲೂ ಬಿದ್ದು, ಕ್ಷುಲ್ಲಕ ಕಾರಣಗಳಿಗಾಗಿ ಆ ತುಂಡು ಕುಟುಂಬವೇ ಛಿದ್ರವಾಗಿ ಅಪ್ಪ-ಅಮ್ಮಂದಿರೇ ದೂರವಾಗಿ ನಮ್ಮ ಕುಟುಂಬ ವ್ಯವಸ್ಥೆಯೇ ಅಲ್ಲಾಡುತ್ತಿದೆ. ಅವರ ತಪ್ಪು ತಿದ್ದಲು, ಮಾರ್ಗದರ್ಶನ ನೀಡಲು, ಸಲಹೆ ಕೊಡಲು ಇಂದು ನಮ್ಮಲ್ಲಿ ವೃದ್ದರಿಲ್ಲ. ಅವರಿರುವುದು ವೃದ್ಧಾಶ್ರಮಗಳಲ್ಲಿ ! ಅಲ್ಲದೇ ಉದ್ಯೋಗ, ವಿದ್ಯಾಭ್ಯಾಸ ಇನ್ನೂ ಹಲವು ಕಾರಣಗಳಿಂದಾಗಿ ಇರುವ ಒಂದೆರಡು ಮಕ್ಕಳು – ಮೊಮ್ಮಕ್ಕಳು ದೇಶ-ವಿದೇಶಗಳಲ್ಲಿ ನೆಲೆಯೂರುತ್ತಿದ್ದಾರೆ. ಈ ಬದಲಾವಣೆಗಳಿಂದ ವೃದ್ಧರ ಮನಸ್ಸು ಬಿಕೋ ಎನ್ನುತ್ತಿದೆ. 

ಇದರ ಜೊತೆಗೆ ದೇಹದ ಅಂಗಾಂಗಗಳ ಶಿಥಿಲತೆ, ಸವಕಳಿಗಳೇ ಮುಪ್ಪಿನ ಲಕ್ಷಣಗಳಾಗಿವೆ. ಜೀವನದ ಹಂತದಲ್ಲಿ ವೃದ್ಧಾಪ್ಯ ಹೇಗೆ ನಿಶ್ಚಿತವೋ ಹಾಗೇ ವೃದ್ಧಾಪ್ಯದಲ್ಲಿ ಮುಪ್ಪಿನ ಬದಲಾವಣೆಗಳು ಖಚಿತ. ದೇಹದ ಅಂಗಾಂಗಳಲ್ಲಿನ ಪರಿವರ್ತನೆಗಳಿಂದಾಗಿ, ವೃದ್ಧರಲ್ಲಿ ಆಯಾಸ, ನಿಶ್ಯಕ್ತಿ, ತಲೆಸುತ್ತು, ಉಬ್ಬಸ, ಮಲ ಮೂತ್ರ ವಿಸರ್ಜನೆಯಲ್ಲಿ ತೊಡಕು, ಅನಿಯಂತ್ರಿತ ಮಲ ಮೂತ್ರ ವಿಸರ್ಜನೆ, ಕೀಲು ನೋವು, ನಿದ್ರಾಹೀನತೆ, ಚಲನೆಯ ಗತಿಯಲ್ಲಿ ಮಂದತ್ವ, ಅಜೀರ್ಣ, ಪದೇ ಪದೇ ಸೋಂಕು ಜಾಡ್ಯಗಳಿಗೆ ತುತ್ತಾಗುವುದು, ಮೂಳೆ ಮುರಿಯುವಿಕೆ ಇವೆಲ್ಲಾ ತೊಂದರೆಗಳು ಸಾಮಾನ್ಯವಾಗಿರುತ್ತವೆ. ಇದರ ಜೊತೆಗೆ, ಮೆದುಳಿನ ನರಕೋಶಗಳ ಸಂಕುಚಿತತೆ, ಮರೆವು, ಆಲೋಚನೆ, ನಿರ್ಧಾರ, ಚುರುಕುತನ, ಇವೆಲ್ಲಾ ಕಡಿಮೆಯಾಗುತ್ತಾ ಹೋಗುತ್ತವೆ. ಈ ದೈಹಿಕ, ಮಾನಸಿಕ ಬದಲಾವಣೆಗಳೊಂದಿಗೆ ಹೃದ್ರೋಗ, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕ್ಯಾನ್ಸರ್, ಪಾರ್ಶ್ವವಾಯು, ಶ್ವಾಸಕೋಶ ತೊಂದರೆ, ಉಬ್ಬಸ, ಮನೋ ವೈಖಲ್ಯತೆ, ಒಂದಲ್ಲಾ ಒಂದು ಉಪಟಳಗಳು ಇದ್ದೇ ಇರುತ್ತವೆ. 

ಯಾವಾಗ ದೈಹಿಕವಾಗಿ ಅಶಕ್ತರಾಗುತ್ತಾ ಹೋಗುವರೋ, ಆಗ ಮಾನಸಿಕವಾಗಿಯೂ ಜರ್ಜರಿತರಾಗುವರು. ಹತಾಶೆ, ಖಿನ್ನತೆ, ಉತ್ಸಾಹಹೀನತೆ, ಗಾಬರಿ, ದುಃಖ, ಕೋಪ, ವ್ಯಥೆ, ಸಾಯುವ ಭಯ, ಆತ್ಮಹತ್ಯೆಯ ಆಲೋಚನೆ, ಸಿಡಿ ಮಿಡಿಗೊಳ್ಳುವುದು, ಅಂತರ್ಮುಖತ್ವ, ಬದಲಾದಂತಹ ಸಾಮಾಜಿಕ ವಾತಾವರಣ, ವ್ಯವಸ್ಥೆ, ಮೌಲ್ಯದ ಬಗ್ಗೆ ಕಿಡಿಕಾರುವಿಕೆ, ಹಠ, ನಿರುತ್ಸಾಹ, ಅನುಮಾನಗಳು, ಒಂದಲ್ಲಾ ಒಂದು ರೀತಿಯಲ್ಲಿ ಬೇರೂರುತ್ತವೆ.

ವೃದ್ಧಾಪ್ಯದಲ್ಲಿ ಸಾಮಾಜಿಕ ಸಂಬಂಧಿ ಬದಲಾವಣೆಗಳು, ಅಂದರೆ ಉದ್ಯೋಗ – ಆದಾಯ ಇಲ್ಲವಾಗುವುದು, ಸಂಗಾತಿ, ಸ್ನೇಹಿತರ ಸಾವು, ಕುಟುಂಬದಲ್ಲಿನ ಸಾವು, ನೋವು, ಭವಿಷ್ಯದ ಅನಿರ್ದಿಷ್ಟತೆ, ಒಂಟಿತನ, ಸಾವಿನ ಭಯ, ಸಮಾಜದಲ್ಲಿನ ಅಧಿಕಾರದ ಸ್ಥಾನಮಾನಗಳು, ಆಸ್ತಿ, ಪ್ರೀತಿ ಕಡಿಮೆಯಾಗುವುದು, (ಕೆಲವೊಮ್ಮೆ ಇಲ್ಲವಾಗುವುದು) ಈ ಎಲ್ಲಾ ಕಾರಣಗಳಿಂದಾಗಿ, ಒಂಟಿತನ, ನಿಷ್ಪ್ರಯೋಜಕತೆಯ ಭಾವ ಕಾಡುತ್ತದೆ. ಮನೆಯವರು ತೋರಿಸುವ ಉದಾಸೀನತೆ, ತಿರಸ್ಕಾರಗಳಿಂದಾಗಿ ಪರಾವಲಂಬಿತನದಿಂದಾಗಿ ಬಾಳು ಗೋಳಾದಂತೆ ಎನಿಸುತ್ತದೆ. ಬದುಕು ಬೇಸರವಾಗಿ ನಿರಾಸೆ, ನೀರಸತೆ, ಭ್ರಮನಿರಸನ ಉಂಟಾಗುತ್ತದೆ.

ಇಲ್ಲಿಯ ತನ್ನ ಜೀವನದಲ್ಲಿ ದುಡಿದಿದ್ದೀರಿ, ಗಳಿಸಿದ್ದೀರಿ ಜವಾಬ್ದಾರಿಗಳನ್ನು ಪೂರೈಸಿಕೊಂಡಿದ್ದೀರಿ. ಇನ್ನು ಮುಂದಿನ ನಿಮ್ಮ ಜೀವನವನ್ನು ನೀವು ಅನುಭವಿಸಿ.

– ಹಿರಿಯರಾದವರು ಅವಕಾಶ ಸಿಕ್ಕಾಗೆಲ್ಲಾ ನಿಮ್ಮ ಹಳೇ ಸ್ನೇಹಿತರ ಗುಂಪು, ಪ್ರೀತಿ ಪಾತ್ರರನ್ನು ಭೇಟಿಯಾಗಿರಿ.
– ಅತಿಮುಖ್ಯವಾಗಿ – ಬ್ಯಾಂಕುಗಳಲ್ಲಿ ಇಟ್ಟ ನಿಮ್ಮ ಹಣ
-ನಿಮ್ಮದೇ ಆಸ್ತಿ, ನಿಮ್ಮದೇ ಹೊಲ, ಮನೆ. ಆ ಕಾರಣವಾಗಿಯೇ ಖರ್ಚು ಮಾಡುವ ಅವಕಾಶ ಸಿಕ್ಕರೆ ಖಂಡಿತಾ ಅನುಭವಿಸಿ.
– ನಾಳೆಯ ಬಗ್ಗೆ ಯೋಚಿಸಬೇಡಿ.
– ನಿಮ್ಮ ಆರೋಗ್ಯಕ್ಕೆ ಒಳಿತೆನಿಸಿದ ಆಹಾರವನ್ನು ತಿನ್ನಿ, ಖುಷಿಯಿಂದಿರಿ.
– ಬಡವ ಶ್ರೀಮಂತ ಯಾರೊಬ್ಬರಿಗೂ ಅನಾರೋಗ್ಯ  ತಪ್ಪಿದ್ದಲ್ಲ. ಪ್ರತಿಯೊಬ್ಬರಿಗೂ ಹುಟ್ಟು, ವಯಸ್ಸು, ಅನಾರೋಗ್ಯ, ಸಾವು ಎಲ್ಲವೂ ಎಲ್ಲರಿಗೂ ಅನಿವಾರ್ಯ ಇದೇ ಜೀವನ.
– ನೀವು ಅನಾರೋಗ್ಯವಾಗಿರುವಾಗ ಭಯಬೇಡ, ಬೇಸರವೂ ಬೇಡ.
– ನೀವೇ ಪರಿಹರಿಸಬೇಕಾದ ಇತ್ಯಾರ್ಥವಾಗಬೇಕಾದ ಸಮಸ್ಯೆಗಳಿದ್ದರೆ ಬೇಗ ಇತ್ಯರ್ಥಗೊಳಿಸಿ ನಿರಾಳರಾಗಿರಿ.
– ನೀವು ಮಾಡುವ ಚಿಂತೆ ನಿಮ್ಮ ಆರೋಗ್ಯ ಸರಿಪಡಿಸುವುದೇ?
– ನೀವು ಮಾಡುವ ಚಿಂತೆ ಆಯುಷವನ್ನು ಹೆಚ್ಚಿಸುವುದೇ?
– ನೀವು ಮಾಡುವ ಚಿಂತೆ ನಿಮಗೆ ಸಂತೋಷ ತರುವುದೇ?
– ಒಂದು ವೇಳೆ ಹಾಗಾಗುವುದಿದ್ದರೆ ಚಿಂತಿಸಿ, ಇಲ್ಲ ಬೇಡ.
– ನಿಮ್ಮ ದೇಹಾರೋಗ್ಯ ಹಾಗೂ ದೇಹಸ್ಥಿತಿಯನ್ನು ಕಾಪಾಡಿಕೊಳ್ಳಿ.
– ನಿಮ್ಮ ಅರ್ಜಿತ ಹಣ ಆಸ್ತಿಯನ್ನು ನಿಮ್ಮ ಕೈಯಲ್ಲಿ  ಇಟ್ಟುಕೊಳ್ಳಿ. ನಿಮ್ಮ ಸಂಗಾತಿಗಳು ಸ್ನೇಹಿತರೊಂದಿಗೆ ಪ್ರತಿ ಕ್ಷಣವೂ ಸುಂದರವಾಗಿ, ಸಂತೋಷವಾಗಿ ಕಳೆಯಲು ಪ್ರಯತ್ನಿಸಿ.
– ಸದಾ ಹಸನ್ಮುಖರಾಗಿರಿ, ಒಳಿತನ್ನು ಯೋಚಿಸಿ.
– ಹರಿಯುವ ನೀರಿಗೆ ಹೇಗೆ ಹಿಂದಕ್ಕೆ ಬರಲು ಸಾಧ್ಯವಿಲ್ಲವೋ  ಹಾಗೆಯೇ ಕಳೆದು ಹೋದ ವಯಸ್ಸು, ಜೀವನ.
-ವೃದ್ಧರೇ, ನೀವು, ಕೇವಲ ವಯೋವೃದ್ಧರಲ್ಲ, `ಹಿರಿಯ ನಾಗರಿಕರು’. ನಿಮಗಿದೋ ಗೌರವ.

`ಮಾನವ ಜನ್ಮ ದೊಡ್ಡದು’ ಈ ಮಾನವ ಜನ್ಮದಲ್ಲಿ ಬಾಲ್ಯ, ಯೌವ್ವನ, ವೃದ್ಧಾಪ್ಯ (ಮುಪ್ಪು) ಎಂಬ ಮೂರು ಮುಖ್ಯ ಹಂತ ಗಳಿವೆ. ಮೊದಲೆರಡು ಹಂತಗಳನ್ನು ಸಂತಸದಿಂದ ಅನು ಭವಿಸುವ ಮನುಷ್ಯ, ವೃದ್ಧಾಪ್ಯವನ್ನು ಸಹಜವಾಗಿ ಸ್ವೀಕರಿಸಲಾರ, ಇದೂ ಕೂಡಾ ಅನಿವಾರ್ಯದ ಹಂತ. ಜೀವನದ ಪೂರ್ಣಾವಧಿಯ ಒಂದು ಪರಿಪಕ್ವ ಹಂತ ಇದಾಗಿದೆ. ಕಳೆದ ಬದುಕಿನ ಅನುಭವಗಳ ಪಕ್ವತೆ ತುಂಬಿರುತ್ತದೆ.

ವಯಸ್ಸಾದವರು ಮನೆಗೆ ಆಲದ ಮರವಿದ್ದಂತೆ. ತನ್ನ ಬಿಳಲುಗಳಾದ ಮಕ್ಕಳು ಮೊಮ್ಮಕ್ಕಳ ಮುಖಾಂತರ ವಂಶವರಡಿ ನಿಂತಿರುವ, ಆಶ್ರಯ ನೀಡಿರುವ ಜೀವನವೇ ಹೊರತು ಹೊರೆಯಲ್ಲ. 1990 ರಿಂದ `General Assembly of the united Nations’ ಸಂಸ್ಥೆಯು ಪ್ರತಿ ವರ್ಷವೂ ಆಗಸ್ಟ್ 21 ರಂದು ವೃದ್ಧರನ್ನು ಗೌರವಿಸುವ ಸಲುವಾಗಿ `National senior citizens day’ ಆಚರಿಸುವಂತೆ ಘೋಷಿಸಿದ್ದಾರೆ. ಈ ಆಚರಣೆಯ ಮೂಲಕ ಅವರ ಸ್ಥಿತಿಗತಿಗಳನ್ನು ಅರ್ಥಮಾಡಿಕೊಂಡು ನಮಗೆ ಬದುಕು ಕಟ್ಟಿಕೊಟ್ಟ ಅವರಿಗೆ ನಾವು ಊರುಗೋಲಾಗಿ, ಅರವತ್ತರ ನಂತರ ಮತ್ತೆ ಬಾಲ್ಯ ಬರುವ ಅವರ ಮುಂದಿನ ಜೀವನಕ್ಕೆ ಆಸರೆಯಾಗುವುದು ನಮ್ಮ ಕರ್ತವ್ಯ. ಈ ವರ್ಷ 2020 ಅಕ್ಟೋಬರ್ 1 ರಂದು `International day for older person’ ದಿನಾಚರಣೆಯನ್ನು ಆಚರಿಸುವಂತೆ ಎಲ್ಲಾ ರಾಷ್ಟ್ರಗಳಿಗೆ ಕರೆ ನೀಡಿದೆ.
ಹಿರಿಯ ನಾಗರಿಕರೇ ನಿಮಗಿದೋ ಗೌರವ.


ವೃದ್ಧಾಪ್ಯ ಶಾಪವಲ್ಲ - Janathavani

ಡಾ|| ಜಿ.ಆಶಾ, ಸಹಾಯಕ ಪ್ರಾಧ್ಯಾಪಕರು,
ಕೆ.ಎಲ್.ಇ ಸಂಸ್ಥೆಯ ಎಸ್.ನಿಜಲಿಂಗಪ್ಪ ಮಹಾವಿದ್ಯಾಲಯ, ರಾಜಾಜಿನಗರ, ಬೆಂಗಳೂರು.
[email protected]

error: Content is protected !!