ಹಾ..ಮೂರು, ಮೂರು… ಇಲ್ಲ ನಾಲ್ಕು ನಾನೇ ನೋಡಿದ್ದೇನೆ…. ಈಗಂತ ಮಕ್ಕಳು ಕಿರುಚಾಡೋದನ್ನು ನೋಡಿ ಆಚೆ ಬಂದರೆ ಬಿಸಿಲೋ ಬಿಸಿಲು ಯಾರೂ ಇಲ್ಲ…
ವಾಪಸ್ ಒಳಗಡೆ ಹೋಗಲು ಬಾಗಿಲ ಬಳಿ ಬಂದೆ ಮತ್ತೆ ಚೌಕ… ಚೌಕ …ಅಂತ ಕಿರುಚಿದ್ದು ನೋಡಿ ಹೊರಬಂದೆ. ನೋಡಿದರೆ ಎದುರು ಮನೆಯ ಅಂಗಳದಲ್ಲಿ ಮೂರ್ನಾಲ್ಕು ಮಕ್ಕಳು ಚೌಕಾಬಾರ ಆಡುತ್ತಾ ಕುಳಿತಿದ್ದರು. ಎಲಾ ಇವರ ಇದ್ದಕ್ಕಿದ್ದಂತೆ ಚೌಕಾಬಾರ ಆಟ ಈಗಿನವರಿಗೆ ಹೇಗೆ ನೆನಪಾಯಿತಪ್ಪಾ ಅಂತ ಕುತೂಹಲದಿಂದ ಮನೆ ಬಾಗಿಲು ಮರೆಮಾಡಿ ಅತ್ತ ನಡೆದೆ.
ಪರೀಕ್ಷೆಗೆಂದು ಹೊರತೆಗೆದಿದ್ದ ಕಾರ್ಬೋರ್ಡ್ ಶೀಟ್ ಕೆಲಸವಿಲ್ಲದೆ ಕುಳಿತಿದ್ದನ್ನು ನಮ್ಮ ಮಕ್ಕಳು ಚೌಕಾಬಾರಕ್ಕೆ ಬಳಸಿಕೊಂಡು, ಸೀಮೆಸುಣ್ಣದಿಂದ ಚೌಕಗಳನ್ನು ಬರೆದು ಕವಡೆ ಕುಲುಕಿ ಹಾಕುತ್ತಿದ್ದನ್ನು ನೋಡಿ ಹಾಗೇ ನಮ್ಮ ಕಾಲಕ್ಕೆ ಜಾರಿದೆ…
ನಮ್ಮ ಕಾಲದಲ್ಲಿ ಈಗಿನಂತೆ ಟಿವಿ, ಮೊಬೈಲ್, ಕಂಪ್ಯೂಟರ್ ಇರಲಿಲ್ಲ. ರಜೆ ಬಂತೆಂದರೆ ಅಮ್ಮ ಅಜ್ಜಿ ಊರಿಗೆ ಕರೆದುಕೊಂಡು ಹೋಗುವವರೆಗೆ ನಮ್ಮ ರಸ್ತೆಯ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದದ್ದೆ ಈ ಆಟಗಳಿಂದ. ಪುಟ್ಟ ಮಕ್ಕಳು ಐದು ಮನೆ ಚೌಕ ಆಡಿದರೆ, ಸ್ವಲ್ಪ ದೊಡ್ಡವರು 7 ಮನೆ, ನಂತರದವರು 9,12 ಹೀಗೆ ಚೌಕಗಳನ್ನು ಸಿಮೆಂಟ್ ನೆಲದ ಮೇಲೆ ಬಳಪದಿಂದ ಬರೆದುಕೊಂಡು ಆಡುತ್ತಿದ್ದೆವು.
ಎಷ್ಟು ಎಂಜಾಯ್ ಮಾಡ್ತಾ ಇದ್ವೀ ಆಗ….ಬೆಳಿಗ್ಗೆ ಎದ್ದೇಳುವುದೇ ನಿಧಾನ. ನಂತರ ಗೆಳತಿಯರೊಂದಿಗೆ ಐಸ್ಪೈಸ್, ನದಿ-ದಡ ಆಡುವಷ್ಟರಲ್ಲಿ ಅಮ್ಮ ತಿಂಡಿಗೆ ಕರೆಯುತ್ತಿದ್ದರು. ತಿಂಡಿ ತಿಂದು ರೆಡಿಯಾಗಿ ಹೊರಗೆ ಕಾಲಿಟ್ಟೆವೆಂದರೆ ಮುಗೀತು. ಇನ್ನು ಊಟಕ್ಕೆ ಬುಲಾವ್ ಬರುವವರೆಗೂ ಮನೆಯ ಮುಂದಿನ ಜಗುಲಿ ಮೇಲೆ ನಮ್ಮ ಆಟೋಟಗಳು ಸಾಂಗವಾಗಿ ನಡೆಯುತ್ತಿತ್ತು.
ಒಂದಾ… ಎರಡಾ…ಈಗಿನಂತೆ ಆಗ ಯಾವುದೇ ಎಲೆಕ್ಟ್ರಾನಿಕ್ಸ್ ಗೊಂಬೆಗಳು, ಗ್ಯಾಜೆಟ್ಗಳು ಇರಲಿಲ್ಲ. ಬಿಸಿಲು ಸುಡುವ ವೇಳೆ ಅಮ್ಮಂದಿರು ಬೈಯುತ್ತಾರೆ ಎಂಬ ಕಾರಣಕ್ಕೆ ಮನೆಯ ಅಂಗಳದಲ್ಲೇ ಕುಳಿತು ಆಡುವ ಆಟಗಳಾದ ಚೌಕಾಬಾರ, ಪಗಡೆ, ಚದುರಂಗ, ಅಳಿಗುಳಿ ಮನೆ, ಕಲ್ಲಾಟ ಆಡಿದರೆ, ಸ್ವಲ್ಪ ಬಿಸಿಲು ಕಡಿಮೆ ಆದ ಮೇಲೆ ಕುಂಟಾಟ, ಜೂಟಾಟ, ಐಸ್-ಪೈಸ್, ಚಿನ್ನಿದಾಂಡು, ಐ ಆಮ್ ರೈಟ್ ಆಟಗಳನ್ನು ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಆಡುತ್ತಿದ್ದೆವು. ಲಗೋರಿ, ಗೋಲಿ ಆಟಗಳನ್ನು ಗಂಡು ಮಕ್ಕಳು ಸೇರಿ ಆಡುತ್ತಿದ್ದರು.
ನಾವಾಡುತ್ತಿದ್ದ ಆಟಗಳಲ್ಲಿ ಏನಿತ್ತು ಏನಿಲ್ಲಾ ಹೇಳಿ. ಗಣಿತ ಇತ್ತು, ಜಾಣ್ಮೆ ಇತ್ತು, ಸ್ಮರಣ ಶಕ್ತಿ ವೃದ್ಧಿಸುವ ಚಾಕಚಕ್ಯತೆ ಇತ್ತು. ವಿಜ್ಞಾನವಿತ್ತು. ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಬೇಕಾದ ಶಕ್ತಿ ದೊರಕುತಿತ್ತು. ಅದೃಷ್ಟದ ದಾಳಗಳಿತ್ತು. ಎದುರಾಳಿಗಳನ್ನು ಜಾಲಕ್ಕೆ ಸಿಲುಕಿಸುವ ತಂತ್ರಗಾರಿಕೆ ಇತ್ತು. ಒಟ್ಟಾರೆ ಜೀವನ ಪಾಠದ ಪಠ್ಯವೇ ಆಗಿತ್ತು ಅಂದಿನ ಆಟಗಳು. ಆದರೆ ಅವೆಲ್ಲಾ ಇಂದಿನವರ ಪಾಲಿಗೆ ಇಲ್ಲವಾಗಿತ್ತು. ಕೊರೊನಾ ದಯೆಯಿಂದ ಕೆಲ ಆಟಗಳು ಮಕ್ಕಳಿಗೆ ಪರಿಚಯವಾಗುತ್ತಿದೆ.
ಈಗ ಸಡನ್ನಾಗಿ ಇದೇನಪ್ಪಾ ನಮ್ಮ ಕಾಲದ ಆಟ ಬಂತು ಎಂದು ಆಶ್ಚರ್ಯವಾಯಿತು. ಮಕ್ಕಳನ್ನೇ ಕೇಳಿದೆ.. ಏನ್ರೋ ಇದು ಚೌಕಾಭಾರ ಆಡ್ತಿದ್ದೀರಾ ಎಂದದ್ದೇ ತಡ ಬಾಗಿಲ ಬಳಿ ಇದ್ದ ಅಜ್ಜಿ ಇಣುಕಿ ನೋಡಿ ತನ್ನ ಹಲ್ಲಿಲ್ಲದ ಬೊಚ್ಚು ಬಾಯಿಂದ ನಕ್ಕು.. ನಾನೇ ಹೇಳಿದೆ ಕಣವ್ವಾ…ಎಂದು ಅಜ್ಜಿ ಹೊರಬಂತು. ಅಪ್ಪ-ಅಮ್ಮಂದಿರು ಮನೆಯಲ್ಲಿಯೇ ಇರೋದ್ರಿಂದ ಮೊಬೈಲ್ ಇವರ ಕೈಗೆ ಸಿಕ್ತಿಲ್ಲ…ಟಿ.ವಿ. ಜೋರಾಗಿ ಹಾಕಿಕೊಂಡು ಕುಳಿತಿದ್ವು…ಕರೆಂಟ್ ಹೋಗಿದ್ದೇ ತಡ ಗಲಾಟೆ ಶುರು ಮಾಡಿದ್ವು.. ಹೊರಗೆ ಏನಾರಿ ಬಿಸ್ಲು. ಅದೇನೋ ಹೊರ ಹೋಗುವಂತಿಲ್ಲವಲ್ಲ… ಅದಕ್ಕೆ ನೆರಳಲ್ಲಿ ಕುಳಿತು ಈ ಆಟ ಆಡ್ರೋ ಅಂತ ನಾನೇ ಹೇಳಿಕೊಟ್ಟೆ ಎಂದು ನಕ್ಕರು.
ನಾವಾಡುತ್ತಿದ್ದ ಆಟಗಳಲ್ಲಿ ಏನಿತ್ತು ಏನಿಲ್ಲಾ ಹೇಳಿ …ಗಣಿತ ಇತ್ತು, ಜಾಣ್ಮೆ ಇತ್ತು, ಸ್ಮರಣ ಶಕ್ತಿ ವೃದ್ಧಿಸುವ ಚಾಕಚಕ್ಯತೆ ಇತ್ತು. ವಿಜ್ಞಾನವಿತ್ತು. ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಬೇಕಾದ ಶಕ್ತಿ ದೊರಕುತಿತ್ತು. ಅದೃಷ್ಟದ ದಾಳಗಳಿತ್ತು. ಎದುರಾಳಿಗಳನ್ನು ಜಾಲಕ್ಕೆ ಸಿಲುಕಿಸುವ ತಂತ್ರಗಾರಿಕೆ ಇತ್ತು. ಒಟ್ಟಾರೆ ಜೀವನ ಪಾಠದ ಪಠ್ಯವೇ ಆಗಿತ್ತು ಅಂದಿನ ಆಟಗಳು. ಆದರೆ ಅವೆಲ್ಲಾ ಇಂದಿನವರ ಪಾಲಿಗೆ ಇಲ್ಲವಾಗಿತ್ತು.
ಅದರಲ್ಲೂ ಟಿವಿ, ಮೊಬೈಲ್, ಟ್ಯಾಬ್, ಕಂಪ್ಯೂಟರ್ ಬಂದ ಮೇಲಂತೂ ಪೂರ್ತಿ ನಮ್ಮ ಸಾಂಪ್ರದಾಯಿಕ ಆಟಗಳು ಕಣ್ಮರೆಯಾಗಿ ಬಿಟ್ಟವು. ವರ್ಷಕ್ಕೊಮ್ಮೆ ಬೆಂಗಳೂರಿನಲ್ಲೋ, ಮೈಸೂರಿನಲ್ಲೋ ಸಾಂಪ್ರದಾಯಿಕ ಆಟಗಳ ಸಾಮಾಗ್ರಿ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಗಳನ್ನು ನಡೆಸಲಾಗುವಷ್ಟಕ್ಕೇ ಸೀಮಿತವಾಗಿ ಬಿಟ್ಟಿತ್ತು.
ಆದರೆ ಕೊರೊನಾ ದಯೆಯಿಂದ ಅಟ್ಟ ಸೇರಿದ್ದ ಪಗಡೆ, ಕವಡೆಗಳೆಲ್ಲವು ಧೂಳು ಕೊಡವಿ ಹೊರಬರುವಂತಾಗಿದೆ. ಮನೆಯಲ್ಲಿರುವ ಎಲ್ಲ ಸದಸ್ಯರು ಒಟ್ಟಾಗಿ ಕುಳಿತು ಆಡುವ ಆಟಗಳಿಗೆ ಹೆಚ್ಚು ಆದ್ಯತೆ ಕೊಡಲಾಗುತ್ತಿದೆ. ಚೆಸ್, ಕೇರಂ ಸಹ ಆಟದ ಭಾಗವಾಗಿ ಬೇಸರವನ್ನು ಹೊಡೆದೋಡಿಸುತ್ತಿದೆ. ಓಲ್ಡ್ ಈಸ್ ಗೋಲ್ಡ್ ಎನ್ನುವ ನಾಣ್ಣುಡಿಯಂತೆ ನಮ್ಮ ಸಾಂಪ್ರದಾಯಿಕ ಆಟಗಳು ಮಕ್ಕಳಿಗೆ ಪರಿಚಯ ವಾಗುತ್ತಿದ್ದು, ಈಗಿನವರ ಪಾಲಿಗೆ ಇವು ಹೊಸ ಆಟವಾಗಿರುವುದರಿಂದ ಸಂತಸ ತರುತ್ತಿದೆ. ಸಂಭವಾಮಿ ಯುಗೇ ಯುಗೇ….ಅಲ್ಲವೇ…
ದೇವಿಕ ಸುನೀಲ್
[email protected]