ದೇವರು ಓಕೆ…ಮೂಢನಂಬಿಕೆ ಯಾಕೆ…?

ಇವತ್ತು ಬೆಳಿಗ್ಗೆ ಎದ್ದ ಕೂಡಲೇ ಮುಖ ತೊಳೆದು, ಹಾಲು ತರಲೆಂದು ಹಾಲಿನ ಡೈರಿ ಕಡೆಗೆ ಹೆಜ್ಜೆ ಹಾಕಿದೆ.

ಅದಾಗಲೇ ಹಲವರ ಮನೆಯಲ್ಲಿ ಬಾಗಿಲ ಮುಂದೆ ಗುಡಿಸಿ, ನೀರು ಹಾಕಿ, ರಂಗೋಲಿ ಬಿಡಿಸಿದ್ದರು. ಅಭ್ಯಾಸದಂತೆ ಎಲ್ಲರ ಮನೆಯ ಮುಂದಿನ ರಂಗೋಲಿಯನ್ನು ನೋಡುತ್ತಾ ಹೊರಟವಳಿಗೆ ರಂಗೋಲಿ ಮಧ್ಯೆ ದೀಪ ಹಚ್ಚಿಟ್ಟಿರುವ ದೃಶ್ಯ ಕಂಡು ಬಂತು…

ಅರೇ ಇದೇನಾಶ್ಚರ್ಯ….ಬೆಳಗಿನ ವೇಳೆ ದೀಪ ಹಚ್ಚಿಟ್ಟಿದ್ದಾರಲ್ಲ ಅಂತ ಮುಂದೆ ಸಾಗಿದೆ. ಅವರ ಪಕ್ಕದ ಮನೆಯಲ್ಲೂ ರಂಗೋಲಿ ಮಧ್ಯೆ ದೀಪ ಬೆಳಗುತ್ತಿತ್ತು. ಇದೇನಪ್ಪಾ ಹೊಸ ವಿಷಯದಂತಿದೆ ಅಂದುಕೊಳ್ಳುತ್ತಾ, ಮುಖ್ಯರಸ್ತೆಯಲ್ಲಿದ್ದ ನಂದಿನಿ ಪಾರ್ಲರ್‌ಗೆ ಹೋಗಿ ಹಾಲಿನ ಪಾಕೆಟ್ ತೆಗೆದುಕೊಂಡು ವಾಪಸ್ ಅದೇ ದಾರಿಯಲ್ಲಿ ಬಂದೆ, ನೋಡಿದರೆ ಆ ಮನೆಯ ಪಕ್ಕದ ರಸ್ತೆಯ ಮನೆಯವರು ದೀಪ ಬೆಳಗಿದ್ದರು.

ಯೋಚಿಸುತ್ತಾ ಹೆಜ್ಜೆ ಇಟ್ಟವಳಿಗೆ ನಮ್ಮ ಮನೆಯ ಎದುರು ಮನೆಯಲ್ಲಿ ನೋಡಿದರೆ 9 ದೀಪಗಳನ್ನು ಹಚ್ಚಿಟ್ಟಿದ್ದರು. ಮೈಸೂರು ಕಡೆಯಿಂದ ಬಂದ ನನಗೆ ಈ ಊರಿನಲ್ಲಿ ಚಂದ್ರ ನೋಡಿದ ಮಾರನೆಯ ದಿನವೇನಾದರೂ ಹೀಗೆ ದೀಪ ಹಚ್ಚಿ ಇಡುತ್ತಾರೆಯೇ.. ಎಂಬ ಅನುಮಾನ ಮೂಡಿಬಂತು.

ನಮ್ಮ ಮನೆಯ ಪಕ್ಕದ ಆಂಟಿ ಹೊರ ಬಂದರು. ತಕ್ಷಣ“ ಆಂಟಿ ಏನಿದು ಅವರ ಮನೆಯಲ್ಲಿ ದೀಪ ಹಚ್ಚಿದ್ದಾರಲ್ಲ ಎಂದು ಕೇಳಿದೆ. ಅಯ್ಯೋ  ರಾತ್ರಿ 11.30ರೆಗೆ ಫೋನ್ ಬಂದಿತ್ತು. ಮನೆ ಮುಂದೆ ದೀಪ ಹಚ್ಚಿಟ್ಟರೆ ಒಳ್ಳೆಯದೆಂದು ಅದಕ್ಕೆ ನಾವೂ ಹಚ್ಚಿದೆವು. ಅವರಿಗೆ ಈಗ ತಿಳಿಯಿತಂತೆ ಅದಕ್ಕೆ ಹಚ್ಚಿಟ್ಟಿದ್ದಾರೆ ”ಎಂದರು.

`ಜನ ಮರುಳೋ ಜಾತ್ರೆ ಮರುಳೋ’ ಎಂಬ ನಾಣ್ಣುಡಿಯಂತೆ ಜಿಲ್ಲೆಯ ಹೊನ್ನಾಳಿ, ಚನ್ನಗಿರಿ, ಜಗಳೂರು, ಹರಿಹರ ಹಾಗೂ ಹಿರೇಕೆರೂರು ತಾಲ್ಲೂಕುಗಳಲ್ಲಿ ಹಾಗೂ ಹಾವೇರಿ, ಬಳ್ಳಾರಿ ಜಿಲ್ಲೆ ಸೇರಿದಂತೆ ನಮ್ಮ ದಾವಣಗೆರೆಯಲ್ಲೂ ಕೂಡ ಹೆಂಗಳೆಯರು ನಿದ್ದೆ ಬಿಟ್ಟು, ರಾತ್ರಿಯೇ ಮನೆಯೆಲ್ಲಾ ಗುಡಿಸಿ, ಸಾರಿಸಿಕೊಂಡು, ಮಡಿಯುಟ್ಟು ಮನೆಯ ಮುಂದೆ ರಂಗೋಲಿ ಹಾಕಿ ಅದರ ಮಧ್ಯೆ ದೀಪದಲ್ಲಿ ಕಡ್ಲೇಬತ್ತಿ ಬೆಳಗಿದ್ದಾರೆ. ಸಂದೇಶ ನಿಧಾನವಾಗಿ ತಲುಪಿದವರು ಶುಕ್ರವಾರ ಬೆಳಿಗ್ಗೆಯೇ ಎದ್ದು ದೀಪ ಬೆಳಗಿದ್ದಾರೆ ಎಂದು ತಿಳಿಯಿತು.

ಮನೆಗೆ ಹೋಗಿ ಅಭ್ಯಾಸದಂತೆ ಹಾಗೆ ವಾಟ್ಸಾಪ್ ಆನ್ ಮಾಡಿ ಕುಳಿತವಳಿಗೆ ಒಂದು ಮೆಸೇಜ್ ಕಾಣಿಸಿತು. ಧರ್ಮಸ್ಥಳದಲ್ಲಿ ದೇವರ ನಂದಾದೀಪ ಆರಿ ಹೋಗಿದೆ. ಎಲ್ಲರೂ ತಮ್ಮ ಮನೆಯಲ್ಲಿ ದೀಪಗಳನ್ನು ಬೆಳಗಿ ಎಂಬ ಮೆಸೇಜ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಸುದ್ದಿ ಸುಳ್ಳು ಸುದ್ದಿಯಾಗಿದೆ ಎಂದು ಧರ್ಮಸ್ಥಳದ ವೀರೇಂದ್ರ ಹೆಗಡೆ ಅಭಿಮಾನಿಗಳ ಬಳಗದಿಂದ ಎಂದು ಇರುವ ಮೆಸೇಜ್  ಬಂದಿತ್ತು. ಸ್ವಲ್ಪ ಸಮಯದ ನಂತರ ಧರ್ಮಸ್ಥಳದಲ್ಲಿ ನಂದಾ ದೀಪ ಆರಿದೆ ಎಂಬ ಸುದ್ದಿ ಸುಳ್ಳು. ಇಂತಹ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಬರೆದಿರುವ ವೀರೇಂದ್ರ   ಹೆಗಡೆ ಸಹಿ ಇರುವಂತಹ ಪತ್ರ ಗ್ರೂಪ್‌ಗಳಲ್ಲಿ ಫಾರ್ವರ್ಡ್ ಆಗುತ್ತಿತ್ತು.

ಓಹೋ.. ಇದು ಯಾರೋ ಕಿಡಿಗೇಡಿಗಳು ಹಬ್ಬಿಸಿರುವ ಸುಳ್ಳು ಸುದ್ದಿಯಾಗಿದೆ ಎಂಬುದು ಮನದಟ್ಟಾಯಿತು. ಕೊರೊನಾ ಸೋಂಕು ಹರಡದಿರಲಿ ಎಂದು ರಜೆ ನೀಡಿ ಮನೆಯಲ್ಲಿ ಕೂರಿಸಿದ್ದರೆ, ಕೊರೊನಾಗಿಂತ ವೇಗವಾಗಿ ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದರಲ್ಲಿ ನಿಸ್ಸೀಮರಾಗಿದ್ದಾರಲ್ಲ ಎನಿಸಿತು. ಇಂತಹ ಸುದ್ದಿಗಳನ್ನು ಆಗಾಗ ಹರಡಿ, ಜನರ ನಂಬಿಕೆಗಳ ಜೊತೆಗೆ ಚೆಲ್ಲಾಟವಾಡುವ ವಿಕೃತ ಮನಸ್ಸುಗಳು ನಮ್ಮ, ನಿಮ್ಮ ನಡುವೆ ಇರುತ್ತಾರೆ. ಇಂತಹದ್ದನ್ನೆಲ್ಲಾ ನಾವುಗಳು ಅಲಕ್ಷಿಸಬೇಕಿದೆ. 

ನಮ್ಮವರು ಅಷ್ಟೇ… ಯಾವುದೇ ಮೆಸೇಜ್ ಬಂದರೆ ಸಾಕು. ಅದು ನಿಜವೇ, ಸುಳ್ಳೇ ಎಂದು ವಿಮರ್ಶಿಸದೆ ಪಟ್ಟನೆ ದಬ್ಬಿಬಿಡುವುದು ಎಷ್ಟು ಸರಿ. ಸಾಮಾಜಿಕ ಜಾಲತಾಣ ಬರುವ ಮುಂಚಿನಿಂದಲೂ ಗಣೇಶ ಹಾಲು ಕುಡಿಯುತ್ತಾನೆ, ಮನೆಯಲ್ಲಿ ಗಂಡು ಮಕ್ಕಳಿರುವವರು ಅವರಿಗೆ ಕೆಡುಕಾಗದಿರಲೆಂದು ವಸ್ತ್ರವನ್ನು ದಾನ ನೀಡಬೇಕು, ಅಣ್ಣ ತಮ್ಮಂದಿರು ಇರುವ ಸೋದರಿಯರು ಅವರ ಆಯುಸ್ಸು ವೃದ್ಧಿಯಾಗಲೆಂದು ಕೋರಿ ಬೆಳ್ಳಿ ಕಡಗ ಅಥವಾ ಬೆಳ್ಳಿ ಬಳೆ ದಾನ ನೀಡಬೇಕು. ಮುತ್ತೈದೆತನ ಉಳಿಯಬೇಕೆಂದರೆ, ಹಸಿರು ಕಣ ದಾನ ನೀಡಬೇಕು ಇಂತಹ ಊಹಾಪೋಹಗಳು ಆಗಾಗ ತೇಲಿ ಬರುತ್ತಲೇ ಇದೆ. ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ವೇಗವಾಗಿ ಬರುತ್ತಿದೆ ಅಷ್ಟೇ.  ಜನರು ಅಷ್ಟೇ ಈಗಲೂ ಹಾಗೇ ಬೇಸ್ತು ಬೀಳುತ್ತಲೇ ಇದ್ದಾರೆ.

ಜೊತೆಗೆ ಆಗಾಗ ಹನುಮಂತನ ಹೆಸರು, ಸಾಯಿಬಾಬಾ, ರಾಮನ ಹೆಸರನ್ನು ಇಷ್ಟು ಜನರಿಗೆ ಕಳುಹಿಸಿ, ನಿಮಗೆ 10 ನಿಮಿಷದಲ್ಲಿ ಒಳ್ಳೆ ಸುದ್ದಿ ಬರುತ್ತದೆ. ಇಲ್ಲವಾದರೆ ಕೆಡುಕಾಗುತ್ತದೆ ಎಂದು ವಾಟ್ಸಾಪ್‌ಗೆ ಮೆಸೇಜ್ ಬರುತ್ತಿರುತ್ತದೆ. ಒಳ್ಳೆ ಸುದ್ದಿ ಬರುತ್ತದೆ ಎಂದರೆ ಹೋಗಲಿ ಎನ್ನಬಹುದು. ಆದರೆ ಕೆಡುಕಾಗುತ್ತದೆ ಎನ್ನುವುದು ದೇವರ ಮೇಲಿನ ಅಪನಂಬಿಕೆಗೆ ಕಾರಣವಾಗುತ್ತದೆ ಅಲ್ಲವೇ. ನಾನು ಇವರಿಗೆಲ್ಲಾ ಹೇಳುವುದು ಒಂದೇ `ದೇವರು ಓಕೆ. ಇಂತಹ ಮೂಢನಂಬಿಕೆಗಳು ಯಾಕೆ?’ ಎಂದು ಮೆಸೇಜ್ ಹಾಕಿ, ಅವರ ಮೆಸೇಜ್ ಅನ್ನು ಡಿಲಿಟ್ ಮಾಡಿ ಬಿಡುತ್ತೇನೆ.

ದೇವರು ಎಂಬುದು ನಂಬಿಕೆಯ ವಿಚಾರ. ಅದನ್ನು ಹೀಗೆ ಬಳಸಿ ಹಾಳುಮಾಡುವುದು ಎಷ್ಟು ಸರಿ? ದೇವರನ್ನು ಭಕ್ತಿಯ ಹೆಸರಲ್ಲಿ ಭಯ ಪಡಿಸುವುದು ಸರಿಯೇ…ಯಾವುದೇ ದೇವರು ಹೀಗೆ ಮಾಡಿ ಎಂದು ಹೇಳುವುದಿಲ್ಲ. ನಾನೂ ಸಹ ಆಸ್ತಿಕಳೆ. ದೇವರನ್ನು ನಂಬುತ್ತೇನೆ. ಆದರೆ ಭಯ ಬಿತ್ತಿ ದೇವರನ್ನು ತೋರಿಸುವ ಇಂತಹ  ಸಂದೇಶಗಳನ್ನು ನಂಬುವುದಿಲ್ಲ. ಬಸವಣ್ಣ ಹೇಳಿದಂತೆ ಕಾಯಕದಲ್ಲಿ ದೇವರನ್ನು ಕಾಣುವ. ನಾವು ಮಾಡುವ ಸಾಮಾಜಿಕ ಕಳಕಳಿಯ ಕೆಲಸಗಳಲ್ಲಿ ದೇವರನ್ನು ಕಾಣೋಣ. 

ಸಾಧ್ಯವಾದರೆ ಕೊರೊನಾ ತಂದಿಟ್ಟ ಸಂಕಷ್ಟದಿಂದ ನೊಂದು ಬೇಯುತ್ತಿರುವ ಬಡ ವ್ಯಾಪಾರಿಗಳು, ಕೂಲಿ ಕಾರ್ಮಿಕರಿಗೆ ಒಪ್ಪೊತ್ತಿನ ಊಟ ನೀಡುವ ಉತ್ತಮ ಕೆಲಸದ ಮೂಲಕ ದೇವರನ್ನು ಕಾಣೋಣ. ಮನೆಯಲ್ಲಿಯೇ ಇರುವ ಹಿರಿಯ ತಂದೆ-ತಾಯಿ, ಅತ್ತೆ-ಮಾವಂದಿರ ಸೇವೆ ಮಾಡುವ ಮೂಲಕವೊ..ಅಥವಾ ಇನ್ಯಾವುದೋ ರೀತಿಯಲ್ಲಿ ಸಮಾಜಕ್ಕೆ ಸಹಾಯ ಹಸ್ತ ಚಾಚುವಲ್ಲಿ ಮುಂದಾಗೋಣ. ಏನೂ ಸಾಧ್ಯವಿಲ್ಲ ಎಂದರೆ ತೆಪ್ಪಗೆ ಮನೆಯಲ್ಲಿ ಕುಳಿತುಕೊಳ್ಳೋಣ. ಅದು ಬಿಟ್ಟು ಇಂತಹ ಗಾಳಿಸುದ್ದಿ ಹಬ್ಬಿಸುವ ಕೆಲಸಗಳನ್ನು ಮಾಡುವುದು ಬೇಡ ಅಲ್ಲವೇ…

ಕೊರೊನಾ ಆತಂಕದ ದಿನಗಳು ಎಂದು ಮುಗಿಯವುದೊ ಯಾರಿಗೂ  ಗೊತ್ತಿಲ್ಲ. ಇಂತಹ ಸಂದೇಶಗಳು ಇನ್ನೂ ಹೆಚ್ಚಬಹುದು. ನಾವುಗಳು ಇದಕ್ಕೆಲ್ಲಾ ಬಲಿಯಾಗಬಾರದಷ್ಟೇ ಎಂಬುದು ನಮ್ಮ ಕಳಕಳಿಯಾಗಿದೆ. ಹುಷಾರಾಗಿರಿ…


ದೇವಿಕ ಸುನೀಲ್
[email protected]

 

error: Content is protected !!