ಕರೂರು ಜವಳಿ ಪಾರ್ಕ್‌ನಲ್ಲಿ ಬೇರೆ ಉದ್ಯಮ ಬೇಡ

ದಾವಣಗೆರೆ, ಅ. 1 – ನಗರದ ಕರೂರು ಕೈಗಾರಿಕಾ ಪ್ರದೇಶದಲ್ಲಿರುವ ಜವಳಿ ಪಾರ್ಕ್‌ನಲ್ಲಿ ಬೇರೆ ಉದ್ಯಮಗಳಿಗೆ ಅವಕಾಶ ನೀಡುವ ಬದಲು, ಉದ್ದೇಶಿತ ಜವಳಿ ಪಾರ್ಕ್ ಆಗಿಯೇ ಮುಂದುವರೆಸಬೇಕೆಂದು ಏಕಗವಾಕ್ಷಿ ಸಭೆಯಲ್ಲಿ ಒತ್ತಾಯ ವ್ಯಕ್ತವಾಗಿದೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಈ ಒತ್ತಾಯ ವ್ಯಕ್ತವಾಗಿದೆ.

ದಾವಣಗೆರೆ ರೆಡಿಮೇಡ್ ಗಾರ್ಮೆಂಟ್ಸ್ ಅಸೋಸಿಯೇಷನ್‍ನ ಮಂಜುನಾಥ್ ಮಾತನಾಡಿ,
ಕರೂರು ಕೈಗಾರಿಕಾ ಪ್ರದೇಶದಲ್ಲಿ ಟೆಕ್ಸ್‌ಟೈಲ್ ಘಟಕಗಳೊಂದಿಗೆ ಇತರೆ ಕೈಗಾರಿಕೆ ಉತ್ಪಾದನೆ ಚಟುವಟಿಕೆ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

 ದಾವಣಗೆರೆ ಟೆಕ್ಸ್‌ಟೈಲ್ಸ್ ಪಾರ್ಕ್ ಮತ್ತು ದಾವಣಗೆರೆ ಗಾರ್ಮೆಂಟ್ಸ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಸದಸ್ಯ ಶೇಷಾಚಲ ಮಾತನಾಡಿ, ರಾಜ್ಯದಲ್ಲಿ ಕೇವಲ ಮೂರು ಜವಳಿ ಪಾರ್ಕ್‍ಗಳಿದ್ದು ಅದರಲ್ಲಿ ದಾವಣಗೆರೆ ಒಂದಾಗಿದೆ. ಹಿಂದೊಮ್ಮೆ ಜವಳಿ ಉದ್ಯಮಕ್ಕಾಗಿ ನಗರ ಕರ್ನಾಟಕದ ಮಾಂಚೆಸ್ಟರ್ ಎಂಬ ಹೆಸರು ಪಡೆದಿತ್ತು. ಮತ್ತೆ ನಗರದಲ್ಲಿ ಜವಳಿ ವಲಯ ಬೆಳೆಯಬೇಕು. ಇಲ್ಲಿ ಬೇರೆ ಕೈಗಾರಿಕಾ ಚಟುವಟಿಕೆಗಳಿಗೆ ಅವಕಾಶ ಕೊಡಬಾರದೆಂದು ಆಗ್ರಹಿಸಿದರು.

ಜವಳಿ ಉದ್ಯಮಿ ಹಾಲೇಶ್ ಗೌಡ್ರು ಮಾತನಾಡಿ, ಜಿಲ್ಲೆಯಲ್ಲಿ ಕೃಷಿ ಬಿಟ್ಟರೆ ಜವಳಿಯೇ ಆದ್ಯತಾ ವಲಯ. ಇತರೆ ಕೈಗಾರಿಕೆಗಳಿಗೆ ಬೇರೆಡೆ ವ್ಯವಸ್ಥೆ ಮಾಡಿಕೊಳ್ಳಬಹುದು. ಜವಳಿ ಪಾರ್ಕ್‍ಗೆಂದೇ ಮೀಸಲಾದ ಪ್ರದೇಶದಲ್ಲಿ ಬೇರೆ ಕಾರ್ಖಾನೆಗಳು ಬೇಡ ಎಂದರು.

ಜವಳಿ ಮತ್ತು ಕೈಮಗ್ಗ ಇಲಾಖೆ ಉಪ ನಿರ್ದೇಶಕ ಸುರೇಶ್ ಎನ್ ತಡಕನಹಳ್ಳಿ ಮಾತನಾಡಿ, ಕರೂರು ಕೈಗಾರಿಕಾ ಪ್ರದೇಶದಲ್ಲಿ 44 ಜವಳಿ ಘಟಕಗಳನ್ನು ಸ್ಥಾಪಿಸಲಾಗಿದೆ. ನೂತನ ಜವಳಿ ನೀತಿಯಡಿ 39 ಜನರಿಗೆ ಸಹಾಯ ಧನ ನೀಡಿದ್ದೇವೆ. ಈ ಪ್ರದೇಶ ಜವಳಿ ಹಬ್ ಆದರೆ ಉತ್ತಮ ಎಂದರು.

ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಎರಡೂ ಕಡೆಯ ನಿಲುವುಗಳನ್ನು ಆಲಿಸಿದ್ದೇನೆ. ಜವಳಿ ಪಾರ್ಕ್‍ಗೆ ಸಂಬಂಧಿಸಿದಂತೆ ಪರಿಶೀಲಿಸಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು.

ಹರಿಹರ ತಾಲ್ಲೂಕು ಸಾರಥಿ-ಕುರುಬರಹಳ್ಳಿ ಕೈಗಾರಿಕಾ ವಸಾಹತುವಿನಲ್ಲಿ ಖಾಲಿ ಇರುವ ನಿವೇಶನಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಲಾದ ಅರ್ಜಿಗಳನ್ನು ನಿಯಮಾನುಸಾರ ಹಂಚಿಕೆ ಮಾಡಲು ಜಿಲ್ಲಾಧಿಕಾರಿಗಳು ಅನುಮೋದನೆ ನೀಡಿದರು. ಹೊಸ ಕೈಗಾರಿಕೆಗಳ ಪ್ರಸ್ತಾವನೆಗಳನ್ನು ಹಾಗೂ ಭೂ ಪರಿವರ್ತನೆಗಾಗಿ ಬಂದ ಪ್ರಸ್ತಾವನೆಗಳಿಗೂ ಅನುಮೋದನೆ ನೀಡಲಾಯಿತು.

ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಜಯಪ್ರಕಾಶ್,  ಜಿ.ಪಂ ಉಪ ಕಾರ್ಯದರ್ಶಿ ಆನಂದ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಗ್ರಾಮೀಣ ಕೈಗಾರಿಕೆಯ ಉಪ ನಿರ್ದೇಶಕ ಮನ್ಸೂರ್, ಕೆ.ಎಸ್.ಎಸ್.ಡಿ.ಸಿ ಸಹಾಯಕ ವ್ಯವಸ್ಥಾಪಕರಾದ ರಂಗಸ್ವಾಮಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ  ಸುಶ್ರುತ್ ಡಿ. ಶಾಸ್ತ್ರಿ ಹಾಗೂ ಇತರೆ ಕೈಗಾರಿಕೋದ್ಯಮಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!