ದಾವಣಗೆರೆ,ಅ.1- ದೇಶದಲ್ಲಿ ಉದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಯುವಜನರು ಕೆಲಸವಿಲ್ಲದೆ ಕೂತಿದ್ದಾರೆ. ಪ್ರಧಾನಿ ಮೋದಿಯವರು ಉದ್ಯೋಗ ಸೃಷ್ಟಿಸುವುದಾಗಿ ನೀಡಿದ ಭರವಸೆ ಇನ್ನೂ ಭರವಸೆಯಾಗಿಯೇ ಇದೆ ಎಂದು ಜೆಡಿಎಸ್ ಯುವ ರೈತ ದಳದ ರಾಜ್ಯಾಧ್ಯಕ್ಷರಾದ ಚೈತ್ರಾ ಗೌಡ ಆರೋಪಿಸಿದರು.
ನಗರದ ಶ್ರೀ ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮೀಜಿ ಹಿರೇಮಠದಲ್ಲಿ ಮೊನ್ನೆ ನಡೆದ ಜೆಡಿಎಸ್ ಮಹಿಳಾ ರೈತ ಮೋರ್ಚಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಬಿಜೆಪಿ ನೂರಾರು ಸುಳ್ಳುಗಳನ್ನು ಹೇಳಿ ಅಧಿಕಾರಕ್ಕೆ ಬಂದಿದೆ. ರಾಜ್ಯದ ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಆಡಳಿತಾವಧಿಯಲ್ಲಿ ಸಾವಿರಾರು ಹುದ್ದೆಗೆ ನೇಮಕಾತಿ ಮಾಡಲು ಆದೇಶ ಮಾಡಿದ್ದು, ಪ್ರಕ್ರಿಯೆ ಕೂಡ ಮುಕ್ತಾಯ ಹಂತದಲ್ಲಿತ್ತು. ನಂತರ ಬಂದ ಬಿಜೆಪಿ ಸರ್ಕಾರ ಹುದ್ದೆಗಳ ನೇಮಕಾತಿಯನ್ನೇ ರದ್ದು ಮಾಡಿ ಹೊಸದಾಗಿ ನೇಮಕಾತಿ ಮಾಡುತ್ತೇವೆ ಎಂದು ಹೇಳುತ್ತಿದೆ. ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿದ್ದಾರೆ. ಈಗ ಮತ್ತೆ ಪರೀಕ್ಷೆ ಬರೆಯಬೇಕಾಗಿದೆ ಎಂದರು.
ಜೆಡಿಎಸ್ ಯುವ ಮುಖಂಡ ಶ್ರೀಧರ್ ಪಾಟೀಲ್, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಟಿ. ಮಹಮ್ಮದ್ ಗೌಸ್ ಮಾತನಾಡಿದರು.
ಜೆಡಿಎಸ್ ಬೀಡಿ ಕಾರ್ಮಿಕರ ವಿಭಾಗದ ರಾಜ್ಯಾಧ್ಯಕ್ಷ ಎಂ. ರಾಜಾಸಾಬ್, ಪಕ್ಷದ ವಕ್ತಾರ ಗೋಣಿವಾಡ ಮಂಜುನಾಥ್,ಯುವ ಮುಖಂಡ ಮಂಜುನಾಥ್, ಎಂ.ಎಸ್. ಅರುಣ್, ಶಿವಯ್ಯ, ವಿಜಯಕುಮಾರ್, ವಿನೋಬನಗರದ ಸದ್ದಾಂ, ಶ್ರೀನಾಥ್, ಚೇತನ್, ಸಿದ್ದು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.