ದಾವಣಗೆರೆ, ಅ.1- ನಗರದ ಬಾಪೂಜಿ ಇಂಜಿನಿ ಯರಿಂಗ್ ಮತ್ತು ತಾಂತ್ರಿಕ ಮಹಾ ವಿದ್ಯಾಲಯದ ಮಾಹಿತಿ ತಂತ್ರಜ್ಞಾನ ವಿಭಾಗದ 8ನೇ ಸೆಮಿಸ್ಟರ್ ವಿದ್ಯಾರ್ಥಿ ಗಳಾದ ಗಗನ್ ಶೆಟ್ಟಿ, ಅಮಿತ್ ವೆರ್ಣೇಕರ್, ನಿಖಿಲ್ ಹಾಗೂ ದಿವ್ಯ ಪಾಲಂಕರ್ ಅವರುಗಳು ಬೋಧಕರಾದ ಚಂದನ್ ವಿ. ಮತ್ತು ಶೇಖ್ ಇಮ್ರಾನ್ ಅವರ ಮಾರ್ಗದರ್ಶನದಲ್ಲಿ ತ್ಯಾಜ್ಯ ವಿಲೇವಾರಿಯ ಬಗ್ಗೆ ಹೊಸ ಆವಿಷ್ಕಾರವನ್ನು ಅಂತಿಮ ವರ್ಷದ ಪ್ರಾಜೆಕ್ಟ್ಗಾಗಿ ಮಾಡಿದ್ದು, ಪ್ರತಿ ಮನೆ ಮತ್ತು ಗಲ್ಲಿಗಳಿಂದ ಘನ ತ್ಯಾಜ್ಯ ಶೇಖರಣೆ ಮಾಡಿ ಸಾಗಿಸುವ ಕಾರ್ಯದವರೆಗೆ ಮನುಷ್ಯನ ನೆರವಿಲ್ಲದೇ ಕೆಲಸ ಮಾಡುವ `ರೋಬಾಟ್’ ನಿರ್ಮಿಸಿರುತ್ತಾರೆ. ಈ ರೋಬಾಟ್ ವಿವಿಧ ಸೆನ್ಸರ್ ಮತ್ತು ಕ್ಯಾಮರಾಗಳನ್ನು ಹೊಂದಿದ್ದು ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಈ ರೋಬಾಟ್ ಕೆಲಸ ನಿರ್ವಹಿಸುತ್ತದೆ. ಈ ಪ್ರಾಜೆಕ್ಟ್, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಿಂದ ಪ್ರತಿವರ್ಷ ಕೊಡಲ್ಪಡುವ `ವರ್ಷದ ಅತ್ಯುತ್ತಮ ಪ್ರಾಜೆಕ್ಟ್’ ಪ್ರಶಸ್ತಿಗೆ ಆಯ್ಕೆಯಾಗಿರುತ್ತದೆ.
ವಿದ್ಯಾರ್ಥಿ-ವಿದ್ಯಾರ್ಥಿನಿಯರ ಈ ಸಾಧನೆಯನ್ನು ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಶಾಮನೂರು ಶಿವಶಂಕರಪ್ಪ, ಜಂಟಿ ಕಾರ್ಯದರ್ಶಿ ಎಸ್.ಎಸ್. ಮಲ್ಲಿಕಾರ್ಜುನ್, ಬಿಐಇಟಿ ಪ್ರಾಂಶುಪಾಲ ಡಾ. ಎಚ್.ಬಿ. ಅರವಿಂದ್, ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಐ.ಎಸ್ ವಿಭಾಗದ ಮುಖ್ಯಸ್ಥರಾದ ಡಾ. ಪೂರ್ಣಿಮಾ, ಸಂಶೋಧನಾ ಡೀನ್ ಡಾ. ರಂಗಸ್ವಾಮಿ ಅಭಿನಂದಿಸಿದ್ದಾರೆ.