ಪ್ರವಾಸ – ಪ್ರಯಾಸ…

ದೇಶ ಸುತ್ತಬೇಕು ಕೋಶ ಓದಬೇಕು ಎಂಬ ನಾಣ್ಣುಡಿ ಇದೆ. ಅಂತೆಯೇ ದೇಶ ಸುತ್ತಿ ಅನುಭವ ಪಡೆಯಲು ಹಾಗೂ ಮಕ್ಕಳ ಜೊತೆ ಇರಲು ನಾನು ಮತ್ತು ನನ್ನ ಪತಿ ಡಾ|| ಕೆ.ಪಿ.ಬಸವರಾಜು ಅಮೆರಿಕ ಪ್ರವಾಸ ಹೊರಟೆವು. ಫೆಬ್ರವರಿ 11 ರಂದು ಬೆಂಗಳೂರಿನಿಂದ ಪ್ಯಾರಿಸ್ ಮೂಲಕ 24 ಗಂಟೆಗಳ ದೀರ್ಘ ಪ್ರಯಾಣದ ನಂತರ ಆರಿಜೋನ ಸ್ಟೇಟ್‌ನ ಟ್ಯೂಸಾನ್ ನಗರ ತಲುಪಿದಾಗ ರಾತ್ರಿ 10 ಗಂಟೆ, ಮಕ್ಕಳನ್ನು ನೋಡಿದ ಸಂತಸದಲ್ಲಿ ಪ್ರಯಾಣದ ಆಯಾಸವೆಲ್ಲ ಮರೆತುಹೋಯಿತು. ಟ್ಯೂಸಾನ್‌ನ -4, -5 ಡಿಗ್ರಿ ಚಳಿಯ ವಾತಾವರಣಕ್ಕೆ ಹೊಂದಿಕೊಳ್ಳಲು ನಮಗೆ ಸ್ವಲ್ಪ ಸಮಯ ಬೇಕಾಯಿತು.

ಒಂದು ದಿನದ ವಿಶ್ರಾಂತಿಯ ನಂತರ ಅಮೆರಿಕಾದಲ್ಲೇ ಅತೀ ದೊಡ್ಡ `ಜೆಮ್ಸ್ ಅಂಡ್ ಜ್ಯೂಯಲರಿ’ ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿದೆವು. ಅಲ್ಲಿನ ದೊಡ್ಡ ದೊಡ್ಡ ಜೆಮ್ಸ್ ಸ್ಟೋನ್‌ಗಳು ಮತ್ತು ಜ್ಯೂಯಲರಿಗಳು ಬೆರಗುಗೊಳಿಸುವಂತಿದ್ದವು. 

ನಮ್ಮ ಪ್ರವಾಸಗಳೆಲ್ಲವನ್ನು ವಾರದ ಕೊನೆಯಲ್ಲಿ ರೂಪಿಸಿಕೊಳ್ಳುತ್ತಿದ್ದೆವು. ಲಾಸ್ ಏಂಜಲೀಸ್‌ನಲ್ಲಿರುವ ಅಕ್ಕನ ಮಗಳ ಮನೆಯನ್ನು ತಲುಪಿದೆವು. ಆ ದಿನಗಳಲ್ಲಿ ಕೊರೊನಾ ಮಹಾಮಾರಿಯು ಅಮೆರಿಕವನ್ನು ಪ್ರವೇಶಿಸಿರಲಿಲ್ಲ. ನಗರದ ಸುಂದರ ತಾಣಗಳಾದ ಹಾಲಿವುಡ್, ವಾಕ್ ಆಫ್ ಫೇಮ್ ಸ್ಟ್ರೀಟ್, ವೆನಿಸ್ ಬೀಚ್, ಲಕ್ಕಾ ಲೈಟ್ ಷೋ, ಪಾವ್‌ಲೋಸ್‌ ವರ್ಡೀಸ್ ಮುಂತಾದ ಕಡೆಗೆಲ್ಲಾ ಸುತ್ತಾಡಿ ಅವರ ಪ್ರೀತಿಯ ಅತಿಥ್ಯಕ್ಕೆ ಧನ್ಯರಾಗಿ ಟ್ಯೂಸಾನ್‌ಗೆ ಮರಳಿದೆವು.

ಟ್ಯೂಸಾನ್ ನಗರಕ್ಕೆ ಹೊಂದಿಕೊಂಡಿರುವ ಮೌಂಟ್ ಲೆಮನ್ ಬೆಟ್ಟವು ರಾತ್ರಿ ಆಕಾಶದ ನಕ್ಷತ್ರ ವೀಕ್ಷಣೆಗೆ ಪ್ರಸಿದ್ದಿಯಾದುದು. ರಾತ್ರಿ ನಡುಗುವ ಚಳಿಯಲ್ಲಿ ಸಾವಿರಾರು ನಕ್ಷತ್ರಗಳನ್ನು ಹಾಗೂ ಬೀಳುವ ನಕ್ಷತ್ರಗಳನ್ನು ನೋಡುವುದೇ ಅತ್ಯದ್ಭುತ ಅನುಭವ. ಟ್ಯೂಸಾನ್‌ನಲ್ಲಿರುವ `ಡೆಸರ್ ಮ್ಯೂಸಿಯಂ’ ಏರೋಪ್ಲೇನ್ ಮ್ಯೂಸಿಯಂ ಹಾಗೂ ಹತ್ತಿರದಲ್ಲಿ ಇರುವ ಫೀನಿಕ್ಸ್ ಸಿಟಿಯಲ್ಲಿ ಸುತ್ತಾಡಿ ಅಲ್ಪ ಸ್ವಲ್ಪ ಶಾಪಿಂಗ್ ಸಹ ಮಾಡಿದೆವು.

ನಮ್ಮ ನಂತರದ ಪ್ರವಾಸ ಅರಿಜೋನಾದ ಸೆಡೋನಾ ಸೀನಿಕ್ ವ್ಯಾಲಿ ರಸ್ತೆ ಮೂಲಕ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಸೆಡೊನಾ ನಗರ ತಲುಪಿದೆವು. ಅಲ್ಲಿ ಪಿಂಕ್ ಕಲರ್ ಜೀಪ್‌ನಲ್ಲಿ `ರೆಡ್ರಾಕ್‌ವ್ಯಾಲಿ’ಯ ಬೆಟ್ಟಗುಡ್ಡಗಳನ್ನು ದಾರಿಯೇ ಇಲ್ಲದ ಕಲ್ಲುಮಣ್ಣಿನ ದಾರಿಯಲ್ಲಿ ಜೀಪಿನ ಸೀಟಿಗೆ ಗಟ್ಟಿಯಾಗಿ ಅಂಟಿ ಕುಳಿತು, ಆ ಕೆಂಪು ಬಣ್ಣದ ಬೆಟ್ಟಗಳನ್ನು ನೋಡುವುದೇ ರುದ್ರ ರಮಣೀಯ ದೃಶ್ಯವಾಗಿತ್ತು. ಅಲ್ಲಿಂದ ಮುಂದೆ `ಸ್ನೋ ಬಾಲ್’ ಎಂಬ ಮಂಜು ತುಂಬಿದ ಬೆಟ್ಟಕ್ಕೆ ಭೇಟಿ ನೀಡಿದೆವು. ಅಲ್ಲಿ ಮಂಜಿನಲ್ಲಿ ಆಟವಾಡಿದ್ದು ತುಂಬಾ ಖುಷಿಯ ಅನುಭವ ನೀಡಿತು. ನಮ್ಮ ಮುಂದಿನ ಪಯಣ ಕೊಲರಾಡೊ ನದಿಯು `ಹಾರ್ಸ್‌ಶೂ’ ಆಕೃತಿಯಲ್ಲಿ ಬೆಂಡಾಗಿ ಹರಿಯುತ್ತಿರುವ ಪೇಜ್ ನಗರದ ಸುಂದರ ತಾಣಕ್ಕೆ ಮತ್ತು ಪೇಜ್‌ನಗರದಲ್ಲಿನ ಇನ್ನೊಂದು ಸುಂದರ ತಾಣ ‘ಆಂಟಿಲೋಪ್ ಕ್ಯಾನಿಯನ್’. ಇದು ನೆಲದಿಂದ 60 ಅಡಿ ಕೆಳಗೆ ಕೊಲರಾಡೊ ನದಿಯ ಕೊರೆತದಿಂದಾಗಿರುವ ಗುಲಾಬಿ ಬಣ್ಣದ ಗುಹೆಗಳು. ಶಿಲ್ಪಿಯೇ ಕೆತ್ತಿರಬಹುದೇನೋ ಎಂಬಂತಿರುವ ಗುಹೆಗಳು ನಮ್ಮ ಊಹೆಗೂ ಮಿಗಿಲಾದುದು. ಅಲ್ಲಿಂದ ಮುಂದೆ ಲೇಕ್‌ಸೂವೆಲ್ ಮತ್ತು ಗ್ಲೆನ್ ಕ್ಯಾನಿಯನ್’ ಡ್ಯಾಂ ನೋಡಿಕೊಂಡು ಟ್ಯೂಸಾನ್‌ಗೆ ಮರಳಿದೆವು.

ನಮ್ಮ ಮುಂದಿನ ಪಯಣ ಸಿಯಾಟಲ್ ಆಗಿತ್ತು. ಸಿಯಾಟಲ್ ವಾಷಿಂಗ್ಟನ್ ಸ್ಟೇಟ್‌ನ ಸುಂದರ ನಗರ. ಅಲ್ಲಿಗೆ ಹೊರಡುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೆವು. ಆದರೆ ಕೊರೊನಾದ ಕರಾಳ ಹಸ್ತವು ಅಮೆರಿಕಾದ ಹಲವು ನಗರಗಳಲ್ಲಿ ವ್ಯಾಪಿಸಿತ್ತು. ಅದರಲ್ಲಿ ಸಿಯಾಟಲ್‌ಗೆ ಕೂಡ ಹಬ್ಬಿತ್ತು. ಅರೆ ಮನಸ್ಸಿನಿಂದ ಎಲ್ಲಾ ಸಿದ್ಧತೆಗಳನ್ನು (ಗ್ಲೌವ್, ಮಾಸ್ಕ್, ಸ್ಯಾನಿಟೈಸರ್ ಬಾಟಲ್‌ಗಳು) ಮಾಡಿಕೊಂಡು ಎಚ್ಚರಿಕೆಯಿಂದ ಅಲ್ಲಿಯ ಸುಂದರ ತಾಣಗಳಾದ ಫಿಶ್‌ಅಕ್ಟೇರಿಯಂ, ಹಾರ್ಬರ್‌ಶೂಸ್, ಸ್ಪೇಸ್‌ನೀಡಲ್, ಚೀಹುಲಿ ಗ್ಲಾಸ್‌ಹೌಸ್ ಮತ್ತು ಸಿಯಾಟಲ್ ಝೂಗಳನ್ನು ನೋಡಿಕೊಂಡು ಹೊರಟೆವು.

ಸಿಯಾಟಲ್‌ನಿಂದ 100 ಮೈಲಿ ದೂರವಿರುವ ‘ಮೌಂಟ್ ರೇನಿಯರ್‌’ ಎಂಬ ಮಂಜಿನ ಬೆಟ್ಟಗಳ ಸಾಲು ಸಾಲು ಮನಸಿಗೆ ತುಂಬಾ ಆಹ್ಲಾದವನ್ನುಂಟುಮಾಡಿತು. ಅಲ್ಲಿಂದ ಮುಂದೆ ಪೋರ್ಟ್ ಲೂಯಿಸ್ ಎಂಬ ನಗರದಲ್ಲಿ `ಕೇಟರ್ ಲೇಕ್’ ನೋಡಲು ತೆರಳಿದೆವು. ಸುತ್ತಲೂ ಮಂಜು ತುಂಬಿದ ಬೆಟ್ಟಗಳ ನಡುವೆ ಆಳವಾದ ನೀಲಿ ಬಣ್ಣದ ಸರೋವರವು ಕಣ್ಮನ ಸೆಳೆಯುವಂತಿತ್ತು. ನಂತರ ಸ್ಯಾನ್ ಪ್ರಾನ್ಸಿಸ್ಕೋನ `ಗೋಲ್ಡನ್ ಬ್ರಿಡ್ಜ್’ ನೋಡಿಕೊಂಡು ಸ್ಯಾನ್‌ಹೂಸೆನಲ್ಲಿರುವ ನನ್ನ ಸೋದರ ಸೊಸೆ ಪ್ರಿಯಾಂಕ, ಹೇಮಂತ್‌ರವರ ಮನೆಗೆ ಭೇಟಿಕೊಟ್ಟು, ಅವರ ಒಂದು ತಿಂಗಳ ಪುಟ್ಟ ಮಗ ಇಶಾನ್ ನೋಡಿಕೊಂಡು ಟ್ಯೂಸಾನ್‌ಗೆ ವಾಪಸ್ಸಾದೆವು.

ನಮ್ಮ ಮುಂದಿನ ಪ್ರಯಾಣ ಫ್ಲೋರಿಡಾ ಎಂದುಕೊಂಡಿದ್ದೆವು. ಆದರೆ ಕೊರೊನಾ ಭೀತಿಯಿಂದ ಅದನ್ನು ರದ್ದುಗೊಳಿಸಿದೆವು. ಮಾರ್ಚ್ 17ಕ್ಕೆ ವಾಪಸ್ ಭಾರತಕ್ಕೆ ಟಿಕೆಟ್ ಮೊದಲೇ ಮಾಡಿ ಕೊಂಡಿದ್ದೆವು. ಮಕ್ಕಳನ್ನು ಬಿಟ್ಟು ಹೊರಡಲು ಇಲ್ಲದ ಮನಸ್ಸಿನಿಂದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡೆವು. ನಾಳೆ ಬೆಳಿಗ್ಗೆ ಹೊರಡಬೇಕು, ಆಗ ರಾತ್ರಿ ‘ಬ್ರೇಕಿಂಗ್ ನ್ಯೂಸ್’ ಒಂದು ಬಂತು. ಮಾರ್ಚ್ 18 ರಿಂದ 31 ರವರೆಗೆ ಇಂಡಿಯಾ `ಲಾಕ್‌ಡೌನ್’ ಘೋಷಿಸಿದೆ ಎಂದು. ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದುಪಡಿಸಲಾಗಿತ್ತು.

ಇಲ್ಲಿಂದ ನಮ್ಮ ಪ್ರಯಾಣದ ಪ್ರಯಾಸ ಪ್ರಾರಂಭವಾಯಿತು. ಮಕ್ಕಳೊಂದಿಗೆ ಚರ್ಚಿಸಿ, ಮಾರ್ಚ್ 31ಕ್ಕೆ ಲಾಕ್‌ಡೌನ್ ಮುಗಿಯಬಹುದೆಂದು ನಮ್ಮ ಡೆಲ್ಟಾ ಏರ್ ಟಿಕೆಟ್ ಏಪ್ರಿಲ್ 3ನೇ ತಾರೀಖಿಗೆ ಮುಂದೂಡಿಕೊಂಡೆವು. ಆದರೆ ಲಾಕ್‌ಡೌನ್‌  ಮುಂದುವರೆದ ಕಾರಣ ಆ ಪ್ರಯಾಣವೂ ರದ್ದಾಯಿತು. ಮೇ 3ನೇ ತಾರೀಖು ಈತಿಹಾದ್ ಏರ್‌ವೇಸ್ ಮೂಲಕ ಭಾರತವನ್ನು ಪ್ರವೇಶಿಸಬಹುದೆಂಬ ಆಸೆಯಿಂದ ಟಿಕೆಟ್ ಬುಕ್ ಮಾಡಿಕೊಂಡೆವು, ಅದೂ ಸಹ ರದ್ದಾಯಿತು. ಮುಂದೇನು ಎಂದು ಯೋಚಿಸುತ್ತಿದ್ದಾಗ ಹೊಳೆದದ್ದು ‘ಇಂಡಿಯನ್ ಎಂಬೆಸಿ. ಒಂದು ತಿಂಗಳು ಪ್ರವಾಸಕ್ಕೆ ಬಂದವರು, ಈಗ ಮೂರು ತಿಂಗಳಾದರು ವಾಪಸ್ ಹೋಗಲಾಗುತ್ತಿಲ್ಲ ಎಂದು ಸಂಪರ್ಕಿಸಿದಾಗ, ನಿಮ್ಮ ಹೆಸರು ನೋಂದಾಯಿಸಿ ಎಂದರು. ನಮ್ಮ ಅದೃಷ್ಟಕ್ಕೆ ಭಾರತ ಸರ್ಕಾರ ಹೊರ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆ ತರಲು `ವಂದೇ ಭಾರತ್ ಮಿಷನ್’ ಪ್ರಾರಂಭಿಸಿತು.

ಅದರಲ್ಲಿ ಕೆಲವರು ಹತ್ತಿರದ ಬಂಧುಗಳನ್ನು ಕಳೆದುಕೊಂಡು ಭಾರತಕ್ಕೆ ಬರಲಾರದೆ ದುಃಖಿಸುತಿದ್ದರು. ಪ್ರವಾಸಕ್ಕೆಂದು ಬಂದು, ಸಿಲುಕಿ ಆರ್ಥಿಕ ಮುಗ್ಗಟ್ಟಿನಲ್ಲಿದ್ದರು. ಇನ್ನೂ ಕೆಲವರು ವೀಸಾ ಅವಧಿ ಕೊನೆಗೊಂಡು, ವಾಪಸ್ಸಾಗಲು ಪರಿತಪಿಸುತ್ತಿದ್ದರು. ಫೇಸ್‌ಬುಕ್‌ನಲ್ಲಿ ಹೀಗೆ ವಾಪಾಸ್ ಆಗುವವರ ಗ್ರೂಪ್ ಕ್ರಿಯೇಟ್ ಆಗಿದ್ದರಿಂದ ನಮಗೆ ಈ ಎಲ್ಲರ ಪರಿಸ್ಥಿತಿ ಅರಿವಾಗುತ್ತಿತ್ತು. ಈ ಸಾವಿರಾರು ಜನರಲ್ಲಿ ಸ್ಯಾನ್‌ಪ್ರಾನ್ಸಿಸ್ಕೋನಿಂದ ಬೆಂಗಳೂರಿಗೆ ಹೋಗುವ ಮೊದಲ ಏರ್‌ಇಂಡಿಯಾ ವಿಮಾನಕ್ಕೆ ಆಯ್ಕೆಯಾಗಿದ್ದೇವೆ ಎಂಬ ಸಂದೇಶ ಬಂದಿತು. ಒಂದು ಲಕ್ಷ ಟಿಕೆಟ್ ದರ ದುಬಾರಿಯಾದರೂ. ಭಾರತಕ್ಕೆ ವಾಪಸ್ಸಾಗುವ ಅವಕಾಶ ದೊರಕ್ಕಿದ್ದಕ್ಕೆ ಸಂತಸಪಟ್ಟೆವು.

ಒಂದು ತಿಂಗಳಿಗೆಂದು ಹೋದವರು ಮೂರುವರೆ ತಿಂಗಳಾಗಿತ್ತು. ಮಕ್ಕಳೊಂದಿಗೆ ಶಿವರಾತ್ರಿ, ಯುಗಾದಿ, ಬಸವ ಜಯಂತಿ ಹಬ್ಬಗಳನ್ನು ಆಚರಿಸಿದ್ದೆವು. ಆದರೂ ಸಹ ಮೇ 13ರ ಬೆಳಿಗ್ಗೆ ಫೀನಿಕ್ಸ್ ಏರ್‌ಪೋರ್ಟ್‌ವರೆಗೂ ಜೊತೆಗೆ ಬಂದು ಬೀಳ್ಕೊಡುವಾಗ ಕಣ್ಣು ತುಂಬಿ ಬಂದು ಮನಸ್ಸು ಭಾರವಾಯಿತು. 

ನಾವು ಅವರು ಕಾಣುವವರೆಗೂ ನೋಡುತ್ತಿದ್ದೆವು. ಅವರು ಸಹ ನಾವು ಕಾಣುವವರೆಗೂ ಕೈ ಬೀಸುತ್ತಿದ್ದರು. ಫೀನಿಕ್ಸ್‌ನಿಂದ ಎರಡು ವಿಮಾನ ಬದಲಿಸಿ, ಮಧ್ಯಾಹ್ನ 4 ಗಂಟೆಗೆ
ಸ್ಯಾನ್‌ಫ್ರಾನ್ಸಿಸ್ಕೋ ಏರ್‌ಪೋರ್ಟ್‌ಗೆ ಬಂದಿಳಿದೆವು. ನಮ್ಮ ವಿಮಾನದ ಸಮಯ ರಾತ್ರಿ 11 ಗಂಟೆಗೆ. ಸಂಜೆ 

 ಆರು ಗಂಟೆಗೆ ಏರ್‌ಇಂಡಿಯಾ ಕೌಂಟರ್‌ನಲ್ಲಿ ಶಿಸ್ತು ಬದ್ಧವಾಗಿ ಚೆಕ್ಕಿಂಗ್ ಮಾಡಲು ಶುರು ಮಾಡಿದರು. ಆರೋಗ್ಯ ತಪಾಸಣೆ, ಬ್ಯಾಗೇಜ್ ಚೆಕ್ಇನ್, ಸೆಕ್ಯೂರಿಟಿ ಚೆಕ್ ಮುಗಿಸಿ 10 ಗಂಟೆಯಿಂದ ವಿಮಾನದೊಳಗೆ ಬಿಡಲು ಪ್ರಾರಂಭಿಸಿದರು. ವಿಮಾನ ದೊಳಗೆ ಪ್ರತಿಯೊಬ್ಬರ ಸೀಟಿನ ಮೇಲೂ ಒಂದು ಕವರಿನಲ್ಲಿ ಫೇಸ್‌ ಶೀಲ್ಡ್‌, ಮಾಸ್ಕ್, ಸ್ಯಾನಿಟೈಸರ್‌ ಜೊತೆಗೆ ರಾತ್ರಿ ಊಟ, ನೀರಿನ ಬಾಟೆಲ್ ಮತ್ತು ಸ್ನ್ಯಾಕ್ಸ್‌ಗಳಿದ್ದವು. ವಿಮಾನದಲ್ಲಿ ಗಗನಸಖಿಯರ ಸೇವೆ ಇರಲಿಲ್ಲ ಕಾರಣ ಕೊರೊನಾ ಭೀತಿ.

ಸತತ 16 ಗಂಟೆಗಳ ಪ್ರಯಾಣ ದಿಂದ ದೆಹಲಿಗೆ ಬಂದಳಿದಾಗ ಆಯಾಸವಾಗಿದ್ದರೂ ತಾಯ್ನಾಡು ತಲುಪಿದೆವೆಂಬ ಸಂತಸವಾಯಿತು. ಅಲ್ಲಿಂದ ಬೇರೊಂದು ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿದಾಗ 9 ಗಂಟೆಯಾಗಿತ್ತು. ಅಲ್ಲಿ ಮತ್ತೆ ಆರೋಗ್ಯ ತಪಾಸಣೆ, ಇಮಿಗ್ರೇಷನ್, ಕಸ್ಟಮ್ಸ್ ಕ್ಲಿಯರೆನ್ಸ್ ಮುಗಿಸಿ ಲಗೇಜ್ ಸಮೇತ ನಾವು ಆಯ್ಕೆ ಮಾಡಿಕೊಂಡ ಕ್ವಾರಂಟೈನ್ ಹೋಟೆಲ್ ಹೊಸೂರು ರಸ್ತೆಯಲ್ಲಿರುವ `ಕೀಸ್ ಸೆಲೆಕ್ಸ್’ ಹೋಟೆಲ್‌ಗೆ ಹೊರಟೆವು. ನಮಗೆ ಹೋಟೆಲ್‌ಗೆ ಕರೆದುಕೊಂಡು ಹೋಗಲು ಬಿಟಿಎಸ್ ಬಸ್ಸಿನ ವ್ಯವಸ್ಥೆ ಮಾಡಲಾಗಿತ್ತು. ಒಬ್ಬರಿಗೆ 300 ರೂ.ಗಳ ಟಿಕೆಟ್ ದರ. ಒಂದೂವರೆ ಗಂಟೆ ಪ್ರಯಾಸದ ಬಸ್ಸಿನ ಪ್ರಯಾಣದಿಂದ ಬಳಲಿ ಬೆಂಡಾಗಿ ನಾವು ಹೋಟೆಲ್ ತಲುಪಿದಾಗ ಮಧ್ಯಾಹ್ನ 2 ಗಂಟೆ. 14 ದಿನಗಳ ಕ್ವಾರಂಟೈನ್‌ಗೆ ವಿಧಿಸಿದ ದರ 35000 ರೂ.ಗಳು.

`ಕ್ವಾರೆಂಟೈನ್’ ಎಂಬ ಪದದ ಕನ್ನಡ ಅನುವಾದ `ದಿಗ್ಭಂಧನ’. ಈ ಪದವು ವೆನಿಷಿಯಾ ಭಾಷೆಯಿಂದ ಬಂದುದಾಗಿದೆ. ನಮ್ಮ 14 ದಿನಗಳ ಕ್ವಾರಂಟೈನ್ ಶುರುವಾಯಿತು. ಮೊದಲ ದಿನ ಪ್ರಯಾಣದ ಆಯಾಸ, ಜೆಟ್ಲಾಗ್‌ನಿಂದಾಗಿ, ತಣ್ಣ ಗಾಗಿದ್ದ, ರುಚಿ ಇಲ್ಲದ ಊಟ ವಾಗಿದ್ದರೂ ಊಟ ಮಾಡಿ ನಿದ್ರೆಗೆ ಜಾರಿದೆವು. ಪ್ರತಿ ದಿನ ಎರಡು ಬಾರಿ ವೈದ್ಯರು ತಪಾಸಣೆಗೆ ಬರುತ್ತಿದ್ದರು. ಆಗ ಮಾತ್ರ ರೂಮ್‌ನಿಂದ ಕಾರಿಡಾರ್‌ವರೆಗೂ ಬರಬಹುದಿತ್ತು. ನಂತರದಲ್ಲಿ 10 x 12 ಅಳತೆ ಎ.ಸಿ. ರೂಮ್‌ನಲ್ಲಿ ಕಾಲ ಕಳೆಯುವುದು ಕಷ್ಟಕರವೆನಿಸತೊಡಗಿತು.

ಊಟ, ತಿಂಡಿಗಳೂ ಸಹ ಹೆಚ್ಚಿನ ವೈವಿಧ್ಯತೆ ಇರಲಿಲ್ಲ. ನಿತ್ಯ ಆಲೂಗಡ್ಡೆ ಬಳಸಿದ ಆಹಾರವನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ತಂದು ರೂಮಿನ ಹೊರಗಿರುವ ಟೀಪಾಯಿ ಮೇಲಿಡುತ್ತಿದ್ದರು. ನಾವು ಊಟ ಮಾಡಿ ಡಬ್ಬವನ್ನು ಹೊರಗಿಡಬೇಕಿತ್ತು. 14 ದಿನವೂ ನಮಗೆ ರೂಮ್ ಸರ್ವೀಸ್ ಮತ್ತು ಲಾಂಡ್ರಿ ಸರ್ವೀಸ್‌ನ ವ್ಯವಸ್ಥೆ ಇರಲಿಲ್ಲ. ಬೇರೆ ತಿಂಡಿ ಅಥವಾ ಊಟ ಬೇಕೆಂದರೆ ದುಬಾರಿ ದರ ವಿಧಿಸುತ್ತಿದ್ದರು. 

ಚಿಕ್ಕ ಕೊಠಡಿಯಾದ್ದರಿಂದ ವ್ಯಾಯಾಮ, ಯೋಗ, ಧ್ಯಾನ ಮಾಡಲು ಮನಸ್ಸು ಬರುತ್ತಿರಲಿಲ್ಲ. ಎರಡನೇ ದಿನ ಮತ್ತು 11ನೇ ದಿನ ಸ್ವಾಬ್ ಟೆಸ್ಟ್ ಮಾಡಿದರು. ಎರಡೂ ನೆಗೆಟಿವ್ ರಿಪೋರ್ಟ್ ಬಂದಾಗ ನೆಮ್ಮದಿ ಎನಿಸಿತು. ನಾಲ್ಕು ಏರ್ ಪೋರ್ಟ್‌ಗಳಲ್ಲಿ, ನಾಲ್ಕು ವಿಮಾನಗಳಲ್ಲಿ ಪಯಣಸಿ, 14 ದಿನಗಳ ಕ್ವಾರಂಟೈನ್‌ನಲ್ಲಿ 24 ಗಂಟೆಗಳೂ ಎ.ಸಿ. ಹವಾ, ಪೌಷ್ಠಿಕವಲ್ಲದ ಆಹಾರ, ವ್ಯಾಯಾಮ ರಹಿತ ಜೀವನದಿಂದ ನಮ್ಮ ಆರೋಗ್ಯ ಏರುಪೇರಾಗುವ ಆತಂಕದಲ್ಲೇ ಕಳೆದೆವು. ದೂರದರ್ಶನದಲ್ಲಿ ಯಾವಾಗಲೂ ಕೊರೊನಾ ಸುದ್ದಿಯೇ ಇರುತ್ತಿದ್ದುದರಿಂದ ನೋಡಲಾಗುತ್ತಿ ರಲಿಲ್ಲ. `ಮದರ್ ಡೇ’ ಗೆಂದು ಮಕ್ಕಳು ಕೊಟ್ಟ ಉಡುಗೊರೆ ‘ಕಟಾನ್’ ಎಂಬ ಬೋರ್ಡ್‌ಗೇಮ್ ತುಂಬಾ ಉಪಯೋಗವಾಯಿತು. ಏಳು ದಿನಗಳ ನಂತರ ಹೊರಗಡೆಯಿಂದ ಪಾರ್ಸೆಲ್‌ಗೆ ಅವಕಾಶ ನೀಡಿದ್ದರಿಂದ ಹಣ್ಣುಗಳು, ಸ್ನ್ಯಾಕ್ಸ್‌ಗಳು ಅಕ್ಕನ ಮನೆಯಿಂದ ರಾಗಿಮುದ್ದೆ, ಮೊಳಕೆ ಹುರುಳಿಕಾಳಿನ ಸಾರು ಹಾಗೂ ಕೊನೆಯ ದಿನ ಕಳಿಸಿದ ಹೋಳಿಗೆ, ಸೀಕರಣೆ ಮತ್ತು ಪಲಾವ್ ‘ಕ್ವಾರಂಟೈನ್’ ನ ಬಿಡುಗಡೆಯ ಸಂಭ್ರಮವನ್ನು ಹೆಚ್ಚಿಸಿತ್ತು.

ಇವೆಲ್ಲಾ ಕಟ್ಟುಪಾಡುಗಳು ನಮ್ಮ ಒಳಿತಿಗಾಗಿಯೇ ಮಾಡಿರುವುದು ಸರಿಯೇ. ಆದರೂ ನಮ್ಮ ಮೊದಲ ಸ್ವಾಬ್ ಪರೀಕ್ಷೆ ವರದಿ ನೆಗಟಿವ್ ಬಂದಿದ್ದರಿಂದ ಆಗ ನಮಗೆ ನಿಯಮಿತ ಜಾಗದಲ್ಲಿ ವಾಕಿಂಗ್, ತಾಜಾ ಹವಾ ಸೇವನೆ, ಉತ್ತಮ ಆಹಾರವನ್ನು ಒದಗಿಸಿ, ದುಡ್ಡು ಕೊಟ್ಟು ಮಾಡಿಸಿಕೊಂಡ ಈ ಹೋಟೆಲ್ ಕ್ವಾರಂಟೈನ್ ಸಹ ಒಂದು ಸುಂದರ ಅನುಭವವಾ ಗಬಹುದಿತ್ತು. ಅಲ್ಲಿಂದ ಕೊನೆಗೂ ನಮ್ಮೂರು ದಾವಣಗೆರೆಗೆ ಪ್ರಯಾಣಿಸಿದೆವು. 

Wherever you roam there in no place like HOME ಎಂದು ಅನಿಸಿದ್ದು ಮಾತ್ರ ಸತ್ಯ.

ಮಾನವನು ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರೂ ಪ್ರಕೃತಿಯ ವಿರುದ್ಧ ಹೋರಾಡುವುದು ಸುಲಭದ ಮಾತಲ್ಲ. ಒಂದು ಮೈಕ್ರಾನ್‌ಗಿಂತಲೂ ಸಣ್ಣದಾದ ಕೊರೊನಾ ವೈರಸ್ ಪ್ರಪಂಚವನ್ನೇ ಕಾಡುವ ಹಾಗೂ ವಿಶ್ವದ ಆರ್ಥಿಕತೆಯನ್ನೇ ಬುಡಮೇಲು ಮಾಡುವ ಕಲ್ಪನೆಯೇ ಇರಲಿಲ್ಲ. ಇದರಿಂದ ನಾವು ಕಲಿಯುವ ಪಾಠವೆಂದರೆ ಪ್ರಕೃತಿದತ್ತವಾದ ಪೌಷ್ಟಿಕ ಆಹಾರ, ವ್ಯಾಯಾಮ, ಯೋಗ, ಶಿಸ್ತುಬದ್ಧ ಜೀವನ ನಡೆಸಿ, ಪರಿಸರ ನಾಶ ಕಡಿತಗೊಳಿಸಿದರೆ ಮಾತ್ರ ನಾವು ಮತ್ತು
ನಮ್ಮ ಮುಂದಿನ ಪೀಳಿಗೆಯವರು ಆರೋಗ್ಯಕರ ಹಾಗೂ ಭಯವಿಲ್ಲದ ಜೀವನ ನಡೆಸಬಹುದು.


ಶ್ರೀಮತಿ ಅನಿತಾ ಬಸವರಾಜ್‌
ದಾವಣಗೆರೆ.

error: Content is protected !!