ಅದ್ವಾನಿ, ಜೋಷಿ, ಉಮಾ ಭಾರತಿ ಸೇರಿ 32 ಆರೋಪಿಗಳು ನಿರ್ದೋಷಿಗಳು
ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿಗೆ ಜೈ ಶ್ರೀರಾಮ್ ಎಂದ ಬಿಜೆಪಿ ಹಿರಿಯ ನಾಯಕ ಅದ್ವಾನಿ
ಲಖ್ನೌ, ಸೆ. 30 – ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸಿಲುಕಿದ್ದ ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಅದ್ವಾನಿ, ಮುರಳಿ ಮನೋಹರ ಜೋಷಿ ಹಾಗೂ ಉಮಾ ಭಾರತಿ ಸೇರಿದಂತೆ ಎಲ್ಲಾ 32 ಆರೋಪಿಗಳು ನಿರ್ದೋಷಿಗಳು ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ರಾಮ ಜನ್ಮಭೂಮಿ ಸ್ಥಳದಲ್ಲಿದ್ದ ಬಾಬ್ರಿ ಮಸೀದಿ ಧ್ವಂಸವಾದ 28 ವರ್ಷಗಳ ನಂತರ ತೀರ್ಪು ಪ್ರಕಟವಾಗಿದೆ.
2,300 ಪುಟಗಳ ತೀರ್ಪು ನೀಡಿರುವ ನ್ಯಾಯಾಲಯ, 32 ಆರೋಪಿಗಳು ಬಾಬ್ರಿ ಮಸೀದಿ ಧ್ವಂಸದ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಯಾವುದೇ ಸ್ಪಷ್ಟ ಸಾಕ್ಷಿಗಳಿಲ್ಲ ಎಂದು ತಿಳಿಸಿದೆ.
ನಿವೃತ್ತರಾಗುವ ದಿನದಂದು ತೀರ್ಪು ನೀಡಿರುವ ವಿಶೇಷ ನ್ಯಾಯಮೂರ್ತಿ ಎಸ್.ಕೆ. ಯಾದವ್, ಪತ್ರಿಕೆಗಳ ವರದಿಗಳು ಹಾಗೂ ವಿಡಿಯೋ ಕ್ಯಾಸೆಟ್ಗಳನ್ನು ಸಾಕ್ಷಿಗಳಾಗಿ ಪರಿಗಣಿಸಲು ನಿರಾಕರಿಸಿದ್ದಾರೆ.
ರಾಮ ದೇವರ ಪ್ರತಿಮೆಗಳು ಬಾಬ್ರಿ ಮಸೀದಿಯ ಒಳಗೆ ಇದ್ದ ಕಾರಣ ಅದನ್ನು ರಕ್ಷಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ದಿವಂಗತ ನಾಯಕ ಅಶೋಕ್ ಸಿಂಘಾಲ್ ಬಯಸಿದ್ದರು ಎಂದೂ ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.
ನ್ಯಾಯಾಲಯ ತೀರ್ಪು ಪ್ರಕಟಿಸಿದಾಗ 26 ಆರೋಪಿಗಳು ಉಪಸ್ಥಿತರಿದ್ದರು. ಖುದ್ದು ಹಾಜರಿಯಿಂದ ವಿನಾಯಿತಿ ನೀಡುವಂತೆ ಮಾಜಿ ಉಪ ಪ್ರಧಾನ ಮಂತ್ರಿ ಎಲ್.ಕೆ.ಅದ್ವಾನಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಮಾಜಿ ಕೇಂದ್ರ ಸಚಿವರಾದ ಮುರಳಿ ಮನೋಹರ ಜೋಷಿ ಹಾಗೂ ಉಮಾ ಭಾರತಿ, ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ನೃತ್ಯ ಗೋಪಾಲ ದಾಸ್ ಹಾಗೂ ಶಿವ ಸೇನಾ ನಾಯಕ ಸತೀಶ್ ಪ್ರಧಾನ್ ಮನವಿ ಮಾಡಿಕೊಂಡಿದ್ದರು.
ಕೊರೊನಾ ಹಿನ್ನೆಲೆಯಲ್ಲಿ ಕಲ್ಯಾಣ್ ಸಿಂಗ್ ಹಾಗೂ ಉಮಾ ಭಾರತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೃತ್ಯ ಗೋಪಾಲ್ ದಾಸ್ ಸಹ ಕಳೆದ ತಿಂಗಳು ಕೊರೊನಾ ಸೋಂಕಿಗೆ ಗುರಿಯಾಗಿದ್ದರು.
ಮಧ್ಯಾಹ್ನ 12.10ರ ಸಮಯದಲ್ಲಿ ಪೀಠ ಅಲಂಕರಿಸಿದ ನ್ಯಾಯಮೂರ್ತಿ, ಕಾರ್ಯಗತಗೊಳಿಸಬೇಕಾದ ತೀರ್ಪಿನ ಭಾಗವನ್ನು ಐದು ನಿಮಿಷಗಳಲ್ಲಿ ಓದಿದರು.
ದೋಷಿಗಳಲ್ಲ ಎಂದು ತೀರ್ಪು ಪ್ರಕಟವಾದಾಗ ಕೆಲ ದೋಷಮುಕ್ತರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು. ಮನೆಯಲ್ಲಿದ್ದ ಪ್ರಮುಖ ಆರೋಪಿ ಅದ್ವಾನಿ ಸಹ ರಾಮನಿಗೆ ಜಯಕಾರ ಹಾಕಿದರು.
ಇದು ಪ್ರಮುಖ ತೀರ್ಪಾಗಿದೆ ಹಾಗೂ ನಮಗೆಲ್ಲಾ ಸಂತೋಷ ತಂದಿದೆ. ನಮಗೆ ನ್ಯಾಯಾಲಯದ ಆದೇಶದ ಬಗ್ಗೆ ತಿಳಿದಾಗ ಜೈ ಶ್ರೀ ರಾಮ್ ಎಂದು ಸ್ವಾಗತಿಸಿದೆವು ಎಂದು ಅದ್ವಾನಿ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ವರ್ಷದ ಹಿಂದಷ್ಟೇ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿ, ರಾಮ ಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತ್ತು. ನ್ಯಾಯಾಲಯ ನೀಡಿರುವ ಈ ಎರಡು ತೀರ್ಪುಗಳು ಬಿಜೆಪಿಗೆ ಮತ್ತಷ್ಟು ಬಲ ನೀಡಿವೆ.
ರಾಮ ಜನ್ಮಭೂಮಿ – ಬಾಬ್ರಿ ಮಸೀದಿ ಪ್ರಕರಣದ ಮುಖ್ಯ ಖಟ್ಲೆದಾರರಾಗಿದ್ದ ಇಕ್ಬಾಲ್ ಅನ್ಸಾರಿ, ತೀರ್ಪನ್ನು ಸ್ವಾಗತಿಸಿದ್ದಾರೆ.
ಎಲ್ಲರೂ ದೋಷಮುಕ್ತವಾಗಿರುವುದು ಒಳ್ಳೆಯದು. ಏನೇ ಘಟನೆ ನಡೆಯುವುದಿದ್ದರೂ, ಅದು ಕಳೆದ ವರ್ಷ ನವೆಂಬರ್ 9ರಂದು ಮುಗಿದಿದೆ. ಈ ಪ್ರಕರಣ ಸಹ ಅದೇ ಮುಗಿಯಬೇಕಿತ್ತು ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಪ್ರಸ್ತಾಪಿಸಿ ಅನ್ಸಾರಿ ಹೇಳಿದ್ದಾರೆ.
ಈ ತೀರ್ಪನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಹಾಗೂ ಹಿರಿಯ ವಕೀಲ ಜಫರ್ಯಾಬ್ ಜಿಲಾನಿ ಹೇಳಿದ್ದಾರೆ.
ಲಖ್ನೌದಲ್ಲಿ ಮಾತನಾಡಿರುವ ಸಿಬಿಐ ವಕೀಲ ಲಲಿತ್ ಸಿಂಗ್, ತೀರ್ಪು ಪರಿಶೀಲಿಸಿದ ನಂತರ ಮೇಲ್ಮನವಿ ಸಲ್ಲಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದಿದ್ದಾರೆ.
48 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದ ಸಿಬಿಐ, 351 ಸಾಕ್ಷಿಗಳು ಹಾಗೂ 600 ದಾಖಲೆಗಳನ್ನು ಸಾಕ್ಷಿಗಳಾಗಿ ಹಾಜರು ಪಡಿಸಿತ್ತು.
ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರು ಹಾಗೂ ಕೇಸರಿ ಸಂಘಟನೆಗಳ ಹಿರಿಯ ನಾಯಕರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿತ್ತು. ನಂತರ ಎರಡೂ ಪ್ರಕರಣಗಳನ್ನು ವಿಲೀನಗೊಳಿಸಲಾಗಿತ್ತು.
ಒಂದು ಹಂತದಲ್ಲಿ ಕ್ರಿಮಿನಲ್ ಸಂಚಿನ ಆರೋಪಗಳನ್ನು ಕೈ ಬಿಡಲಾಗಿತ್ತು. ಆದರೆ, ಸುಪ್ರೀಂ ಕೋರ್ಟ್ 2017ರಲ್ಲಿ ಮತ್ತೆ ಆರೋಪಗಳನ್ನು ನೆಲೆಗೊಳಿಸಿತ್ತಲ್ಲದೇ, ಪ್ರತಿದಿನ ವಿಚಾರಣೆ ನಡೆಸಲು ಆದೇಶ ಹೊರಡಿಸಿತ್ತು.