ಮಲೇಬೆನ್ನೂರು, ಸೆ.30- ಕೊಮಾರನಹಳ್ಳಿಯ ಐತಿಹಾಸಿಕ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಕೆರೆಗೆ ಪ್ರಮುಖ ನೀರಿನ ಮೂಲವಾಗಿದ್ದ ಗುಡ್ಡಗಾಡಿನಲ್ಲಿನ `ಹಾಲುವತ್ತಿ ಸರ’ ಹಳ್ಳದ ಒಡ್ಡನ್ನು ಕಳೆದ 25 ವರ್ಷಗಳ ಹಿಂದೆ ಕೆಲವರು ಒಡೆದು ನೀರನ್ನು ಬೇರೆ ಕಡೆ ತಿರುಗಿಸಿದ್ದರು.
ಈ ಬಗ್ಗೆ ಪತ್ರಿಕೆಗಳಲ್ಲಿ ವರದಿ ಬಂದ ತಕ್ಷಣ ಸ್ಪಂದಿಸಿದ ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಎಂ. ವಾಗೀಶ್ಸ್ವಾಮಿ ಅವರು ಜಿ.ಪಂ. ಇಂಜಿನಿಯರ್ ಸೋಮಾನಾಯ್ಕ, ಉಪತಹಶೀಲ್ದಾರ್ ಆರ್. ರವಿ, ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್ ಹಾಗೂ ರೈತರೊಂದಿಗೆ ಹಾಲುವತ್ತಿ ಸರ ವೀಕ್ಷಿಸಿದರು.
ಮೂಲಹಳ್ಳ ಮತ್ತೆ ಕೆರೆಗೆ ಹರಿಯುವಂತೆ ಮಾಡಲು ತಕ್ಷಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಿ ಎಂದು ವಾಗೀಶ್ಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ಮಳೆಗಾಲದಲ್ಲಿ ಕೊಮಾರನಹಳ್ಳಿ ಕೆರೆ ಸೇರಬೇಕಾಗಿದ್ದ ಮಳೆ ನೀರು ಕೊಪ್ಪದ ಹಳ್ಳದ ಪಾಲಾಗುತ್ತಿರುವುದನ್ನು ರೈತರು ಜಿ.ಪಂ. ಸದಸ್ಯರ ಗಮನಕ್ಕೆ ತಂದರು.