ಮಾನ್ಯರೇ,
ಕೇಂದ್ರ ಸರ್ಕಾರ ತನ್ನ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಸತತವಾಗಿ ಕಳೆದ 15 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿರಂತರವಾಗಿ ಏರಿಸುತ್ತಾ ಗ್ರಾಹಕರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿರುವ ಜೊತೆಗೆ ಟೋಲ್ ದರವನ್ನು 20% ಹೆಚ್ಚಿಸಿದೆ.
ಕೊರೊನಾ ಲಾಕ್‌ಡೌನ್‌ನಿಂದಾಗಿ ಮೂರು ತಿಂಗಳಿನಿಂದ ಉದ್ಯೋಗವಿಲ್ಲದೆ ಕಂಗೆಟ್ಟಿರುವ ಜನಸಾಮಾನ್ಯರಿಗೆ ಬೆಲೆಯೇ ರಿಕೆಯು ಬಿಸಿ ತುಪ್ಪವಾಗಿ ಪರಿಣಮಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಪರಿಣಾಮದ ಮೊದಲನೆಯದಾಗಿ ಸರಕು ಮತ್ತು ಸಾಗಾಣಿಕೆ ವೆಚ್ಚದ ಬೆಲೆ ಕಚ್ಚಾ ವಸ್ತುಗಳು ಸೇರಿದಂತೆ ಅದರ ಮೇಲೆಯೇ ಅವಲಂಬಿತವಾಗಿರುವ ಎಲ್ಲಾ ರೀತಿಯ ವಸ್ತುಗಳ ಬೆಲೆಗಳೂ ಕೂಡ ಹೆಚ್ಚಾಗುತ್ತವೆ.
ಪರಿಣಾಮವಾಗಿ ಜನಸಾಮಾನ್ಯರು ತುತ್ತು ಅನ್ನಕ್ಕೂ ಕೂಡ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಅನುಮಾನವಿಲ್ಲ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆತ್ಮ ನಿರ್ಭರ್ ಅನ್ನು ಜಾರಿಗೆ ತಂದು, ಇನ್ನೊಂದು ಕಡೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದರೆ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಸಿದುಕೊಂಡಂತಾಗುತ್ತದಲ್ಲವೇ?
ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಹೀಗೆಯೇ ಮುಂದುವರೆದರೆ ಜನಸಾಮಾನ್ಯರು ಬದುಕುವುದಾದರೂ ಹೇಗೆ? ಜನಸಾಮಾನ್ಯರ ಬದುಕು ಮೇಲೇಳಲಾರದಂತೆ ದುಸ್ತರವಾಗುವುದರಲ್ಲಿ ಅನುಮಾನವೇ ಇಲ್ಲ. ಕೇಂದ್ರ ಸರ್ಕಾರ ಕೂಡಲೇ ಇತ್ತ ಗಮನ ಹರಿಸಿ ಇನ್ನು ಮುಂದೆಯಾದರೂ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕಾಗಿದೆ.
– ಡಿ. ಮುರುಗೇಶ್, ದಾವಣಗೆರೆ.