ಮಲೇಬೆನ್ನೂರು, ಜೂ.23- ಪಟ್ಟಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರವಾಗಿರುವ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಈಗಾಗಲೇ ಸ್ಯಾನಿಟೈಸ್ ಮಾಡಲಾಗಿದ್ದು, ಬುಧವಾರ ಪೂರ್ವ ತಯಾರಿ ನಡೆಯಲಿದೆ.
ಈ ಕುರಿತು `ಜನತಾವಾಣಿ’ಗೆ ಮಾಹಿತಿ ನೀಡಿದ ಕಾಲೇಜಿನ ಉಪ ಪ್ರಾಚಾರ್ಯ ಹಾಗೂ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಹೆಚ್. ಹನುಮಂತಪ್ಪ ಮತ್ತು ಬೀರಲಿಂಗೇಶ್ವರ ಬಾಲಕರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಹಾಗೂ ಉಪ ಮುಖ್ಯ ಅಧೀಕ್ಷಕ ಸಿ. ಜಯಣ್ಣ ಅವರು, ನಮ್ಮ ಪರೀಕ್ಷಾ ಕೇಂದ್ರದಲ್ಲಿ 464 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 25 ಕೊಠಡಿಗಳನ್ನು ಸಿದ್ದಪಡಿಸಲಾಗಿದೆ.
ಪಟ್ಟಣದ 8 ಪ್ರೌಢಶಾಲೆಗಳು ಸೇರಿದಂತೆ ಕುಂಬಳೂರಿನ 2 ಪ್ರೌಢಶಾಲೆ ಮತ್ತು ಹಾಲಿವಾಣದ ಒಂದು ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ಪರೀಕ್ಷಾ ಕೇಂದ್ರಕ್ಕೆ ಒಳಪಟ್ಟಿದ್ದಾರೆ.
ಹರಿಹರ ತಾಲ್ಲೂಕಿನಲ್ಲಿ 10 ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿದ್ದು, ಒಟ್ಟು 3056 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ನಂದಿಗುಡಿ ಪರೀಕ್ಷಾ ಕೇಂದ್ರದಲ್ಲಿ 281, ಹೊಳೆಸಿರಿಗೆರೆ ಕೇಂದ್ರದಲ್ಲಿ 274, ಭಾನುವಳ್ಳಿ ಕೇಂದ್ರದಲ್ಲಿ 314 ಮತ್ತು ದೇವರಬೆಳಕೆರೆ ಪರೀಕ್ಷಾ ಕೇಂದ್ರದಲ್ಲಿ 355 ವಿದ್ಯಾರ್ಥಿಗಳು ಪರೀಕ್ಷೆಗೆ ಸಜ್ಜಾಗಿದ್ದಾರೆ.