ನಮಗೂ ಉಚಿತ ಪಠ್ಯಪುಸ್ತಕ ವಿತರಿಸಿ

ದಾವಣಗೆರೆ, ಜೂ. 22- ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ಸರ್ಕಾರದ ವತಿಯಿಂದ ಉಚಿತವಾಗಿ ವಿತರಿಸುವಂತೆ ದಾವಣಗೆರೆ ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟವು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೋಮವಾರ ಮನವಿ ಸಲ್ಲಿಸಿದೆ.

ಮನವಿಯಲ್ಲಿ 2019-20ನೇ ಸಾಲಿನ ಆರ್.ಟಿ.ಇ. ಶುಲ್ಕವನ್ನು ಇದುವರೆಗೂ ಸರ್ಕಾರದಿಂದ ಪಾವತಿಸಲಾಗಿಲ್ಲ. ಕೂಡಲೇ ಶುಲ್ಕ ಪಾವತಿ ಮಾಡುವಂತೆಯೂ ಕೋರಿಕೊಳ್ಳಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗಳು ತೀವ್ರ ಸಂಕಷ್ಟದಲ್ಲಿವೆ. ಶಾಲಾ ನಿರ್ವಹಣೆ ಹಾಗೂ ಶಿಕ್ಷಕರ ವೇತನ ನೀಡಲು ಕಷ್ಟವಾಗುತ್ತಿದೆ. ಈ ವೇಳೆ ಪಠ್ಯ ಪುಸ್ತಕಗಳನ್ನು ಉಚಿತವಾಗಿ ಸರ್ಕಾರವೇ ನೀಡಿದರೆ ಅನುಕೂಲ ವಾಗುತ್ತದೆ ಎಂದು ಒಕ್ಕೂಟದ ಪದಾಧಿಕಾರಿಗಳು ಮನವಿ ಮಾಡಿದರು.

ಒಕ್ಕೂಟದ ಮನವಿ ಸ್ವೀಕರಿಸಿದ ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ಅವರು, ಮನವಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ಆರ್.ಟಿ.ಐ. ಶುಲ್ಕ ಪಾವತಿ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

 ಇದಕ್ಕೂ ಮುನ್ನ ಯೂರೋ ಸ್ಕೂಲ್ ಕ್ಯಾಂಪಸ್‌ನಲ್ಲಿ  ಸರ್ಕಾರಕ್ಕೆ ಮನವಿ ಸಲ್ಲಿಸುವ ಕುರಿತು ಒಕ್ಕೂಟದ ಪದಾಧಿಕಾರಿಗಳು ಸಭೆ ನಡೆಸಿದರು. ಜಿಲ್ಲೆಗೆ 9.21 ಕೋಟಿ ರೂ. ಆರ್.ಟಿ.ಇ. ಶುಲ್ಕ ಬಿಡುಗಡೆಯಾಗಿದ್ದು, ಕೂಡಲೇ ಶಾಲೆಗಳಿಗೆ ಶುಲ್ಕ ಪಾವತಿ ಮಾಡಲು ಮನವಿ ಮಾಡುವ ಬಗ್ಗೆ  ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಶಿಕ್ಷಣ ಇಲಾಖೆಯಲ್ಲಿಯೂ ಸಾಕಷ್ಟು ಸಮಸ್ಯೆಗಳಿದ್ದು, ಪ್ರಮುಖವಾಗಿ ಪಠ್ಯ ಪುಸ್ತಕ ವಿತರಣೆ, ಟ್ರಾನ್ಸ್‌ಪೋರ್ಟ್, ವಿಮೆ, ಆರ್.ಟಿ.ಇ. ಶುಲ್ಕ ಮತ್ತಿತರೆ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. 

ಮುಂದಿನ ದಿನಗಳಲ್ಲಿ ಬಿಇಒ, ಡಿಡಿಪಿಐ ಹಾಗೂ ಜಿಲ್ಲಾಧಿಕಾರಿಗಳ ಹಂತದಲ್ಲೂ ಸಭೆ ನಡೆಸಿ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಯತ್ನಿಸುವ ನಿರ್ಧಾರ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ಮಹಾಪೋಷಕರಾದ ಸೈಯದ್ ಸೈಫುಲ್ಲಾ, ವಿಜಯಲಕ್ಷ್ಮಿ ವೀರಮಾಚಿನೇನಿ, ಅಧ್ಯಕ್ಷ ಟಿ.ಎಂ. ಉಮಾಪತಯ್ಯ, ಖಜಾಂಚಿ ವಿಜಯ್ ರಾಜ್, ಪ್ರಧಾನ ಕಾರ್ಯದರ್ಶಿ ಸಿ. ಶ್ರೀರಾಮಮೂರ್ತಿ, ಉಪಾಧ್ಯಕ್ಷ ಆರ್.ಎಲ್. ಪ್ರಭಾಕರ್, ಎಂ.ಎಸ್. ಸಂತೋಷ್ ಕುಮಾರ , ಸಹ ಕಾರ್ಯದರ್ಶಿಗಳಾದ ಕೆ.ಎಸ್. ಮಂಜುನಾಥ್ ಅಗಡಿ, ಪ್ರಸನ್ನ ಕುಮಾರ್ ಎ.ಎನ್., ಸಂಘಟನಾ ಕಾರ್ಯದರ್ಶಿಗಳಾದ ಪೃಥ್ವಿರಾಜ್, ಕೆ.ಸಿ. ಮಂಜು, ನಿರ್ದೇಶಕರಾದ ಎಂ.ಕೆ. ಬಕ್ಕಪ್ಪ, ಶ್ರೀಮತಿ ಸಹನಾ ರವಿ, ಕೆ.ಸಿ. ಲಿಂಗರಾಜು, ಹೆಚ್. ಜಯಣ್ಣ, ವಿಜಯ್ ಕುಮಾರ್, ನಾಗರಾಜ್ ಶೆಟ್ಟಿ, ಶಶಿಧರ್, ಟಿ.ಎಂ. ನಾಗರಾಜಯ್ಯ, ಹೆಚ್.ಜೆ. ಮೈನುದ್ದೀನ್, ಕೆಂಚನಹಳ್ಳಿ ಗೌಡ್ರ ಕೃಷ್ಣ, ಕೆ. ಸುರೇಶ್, ರವಿ, ಅರವಿಂದ್, ಪ್ರಭುಕುಮಾರ್ ಇತರರು ಉಪಸ್ಥಿತರಿದ್ದರು. 

error: Content is protected !!