ನನ್ನ ಅರಸುತನಕ್ಕೆ ನೀವು ಕುದುರೆಯಾದ ನೆನಪು… ಅಪ್ಪಾ…

ಅಂಗೈಯಲ್ಲಿ ನಿಮ್ಮ ಬೆರಳು ಹಿಡಿದು ನಡೆದ ನೆನಪು
ನನ್ನ ಅರಸುತನಕ್ಕೆ ನೀವು ಕುದುರೆಯಾದ ನೆನಪು
ನೂರು ನೋವುಗಳ ನಡುವೆ ಪ್ರೀತಿ ನೀಡಿದ ನೆನಪು
ಪ್ರತಿ ಹಗಲು, ಪ್ರತಿ ಇರುಳು ನನಗಾಗಿ ಸವೆದ ನೀವೀಗ
ಹೃದಯ ತುಂಬಿ, ಬೊಗಸೆ ಬೊಗಸೆ ತುಂಬಾ
ನೀಡಿರುವ ಪ್ರೀತಿಯನೆನಪುಗಳಿಂದ

ನನ್ನ ಕಣ್ಣುಗಳು ಆನಂದ ಬಾಷ್ಪಗಳನ್ನು ಸುರಿಸುತ್ತವೆ….
ಅದೇ ಕಣ್ಣುಗಳಲ್ಲಿ ಕೃತಜ್ಞತೆ ತುಂಬಿಕೊಂಡು
ನಿಮಗೆ ಅಪ್ಪಂದಿರ ದಿನದ ಶುಭಾಶಯ ಹೇಳುತ್ತಿರುವೆ….

ತಾಯಿಯಾದವಳು ಮಗುವನ್ನು ತನ್ನ ಗರ್ಭದಲ್ಲಿ ಒಂಭತ್ತು ತಿಂಗಳು ಹೊತ್ತು, ಹೆತ್ತು, ಸಾಕಿ-ಸಲಹಿ, ದೊಡ್ಡವರನ್ನಾಗಿ ಮಾಡಿ, ಕಂಕುಳಲ್ಲಿ ಎತ್ತಿಕೊಂಡು ತಾನು ನೋಡಿದುದನ್ನು ನನ ಕಂದ ನೋಡಲಿ ಎಂದು ತೋರಿಸುತ್ತಾಳೆ.

ಅಪ್ಪನಾದವನು ತನ್ನ ಜೀವನದುದ್ದಕ್ಕೂ, ಮಕ್ಕಳ ಪಾಲನೆ-ಪೋಷಣೆ, ವಿದ್ಯಾಭ್ಯಾಸ, ನೌಕರಿ, ಮದುವೆ-ಮುಂಜಿ, ಆಸ್ತಿ-ಪಾಸ್ತಿ ಮಾಡಿ ತನ್ನ ಮಗು ಸುಖವಾಗಿರಲೆಂದು ಹಗಲಿರುಳೂ ನಮಗಾಗಿ ದುಡಿಯುತ್ತಾ ತನ್ನ ಜೀವನವನ್ನೇ ತೇದು, ತನ್ನ ಹೃದಯ ಸಿಂಹಾಸನದಲ್ಲಿ ಹೊತ್ತುಕೊಂಡು ತಿರುಗುತ್ತಾರೆ. ನಾವುಗಳು ಚಿಕ್ಕವರಿದ್ದಾಗ ನಮ್ಮನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು, ನಾನು ಕಾಣದ್ದನ್ನು ನನ್ನ ಮಗು ನೋಡಲಿ ಎಂದು ತೋರಿಸುತ್ತಾರೆ. ನನ್ನ ಮಗು ನನಗಿಂತಲೂ ಎತ್ತರಕ್ಕೆ ಬೆಳೆದು, ಎತ್ತರದ ಗುರಿಯನ್ನಿಟ್ಟುಕೊಂಡು ಮಕ್ಕಳಿಂದಲೇ ತಂದೆಗೆ ಸೋಲು, ಶಿಷ್ಯನಿಂದಲೇ ಗುರುವಿಗೆ ಸೋಲು ಎಂದು ನಮ್ಮನ್ನು `ಗುರುವಿನ ಮಿಂಚುಡು ಶಿಷ್ಯ’ ಎನ್ನುವಂತೆ ಬೆಳೆಸಿದ್ದ ಅಪ್ಪ Really you are great.

ಇಂತಹ ತಂದೆಯನ್ನು ಕುರಿತು ವಿಶ್ವಗುರು ಬಸವಣ್ಣನವರು `ತಂದೆ ನೀನು, ತಾಯಿ ನೀನು, ಬಂಧು ನೀನು, ಬಳಗ ನೀನು, ನೀನಲ್ಲದೇ ಮತ್ತಾರೂ ಇಲ್ಲ. ಮತ್ತಾರು ಇಲ್ಲವಯ್ಯ ಕೂಡಲ ಸಂಗಮದೇವಾ, ಹಾಲಲ್ಲದ್ದು, ನೀರಲ್ಲದ್ದು ನಿಮ್ಮಾ ಧರ್ಮ, ನಿಮ್ಮ ಧರ್ಮ’ ಎಂದು ಎದೆ ತುಂಬಿ ಹಾಡಿ, ತಂದೆಗೆ ಪ್ರಥಮ ಸ್ಥಾನ ನೀಡಿ ತಂದೆಯ ತ್ಯಾಗವನ್ನು, ಆತನ ಸಮರ್ಪಣಾ ಭಾವವನ್ನು ಕುಟುಂಬಕ್ಕೆ ಸಲ್ಲಿಸುತ್ತಿರುವುದನ್ನು ಕಂಡು ಮನದುಂಬಿ ಹೃದಯ ತುಂಬಿ ಹಾಡಿದ್ದಾರೆ.

ಇಂತಹ ತಂದೆಯ ಪುಣ್ಯ ಗರ್ಭದಲ್ಲಿ ಹುಟ್ಟಿದ ನಾವೇ ಪುಣ್ಯವಂತರು. ಇಂದಿನ ಶುಭ ದಿನದಿ ಅವರ ಜೀವನದ ಆದರ್ಶ, ಮೌಲ್ಯ, ನಂಬಿಕೊಂಡು ಬಂದಿರುವ ತತ್ವ, ಕಲಿಸಿದ ಸಂಸ್ಕೃತಿ-ಸಂಸ್ಕಾರಗಳನ್ನು ಅಳವಡಿಸಿಕೊಂಡು ಮುನ್ನಡೆಯುವುದು ಬಿಟ್ಟು, ಬೇರೆ ಇನ್ನೇನಿದೆ ಜೀವನದಲ್ಲಿ …!

Appa you are great, Appa I Love you Appa you are our Mentor, Appa you are our Friend, Philosopher and Guide.

ಮೊನ್ನೆ ಮೊನ್ನೆ ನನ್ನಪ್ಪ ನನಗೆ ಮಗಳೇ ನಾನು ನನ್ನ ಮೃತ್ಯು ಪತ್ರವನ್ನು ಸಿದ್ಧಪಡಿಸಲು ನ್ಯಾಯವಾದಿಗಳಿಗೆ ತಿಳಿಸಿದ್ದೇನೆ.

ನನ್ನ ನಂತರ ಎಲ್ಲಾ ಸ್ಥಿರ-ಚರಾಸ್ತಿಗಳು ನಿನ್ನ ಅಮ್ಮನಿಗೆ ಸೇರತಕ್ಕದ್ದು. ನಂತರ ಅವಳ ಇಚ್ಛೆಯಂತೆ ಮುಂದೆ ಅವು ವಿಲೇವಾರಿಯಾಗತಕ್ಕದ್ದು ಎಂದು ವಿಚಾರ ಮಾಡಿದ್ದೇನೆ. ಇದಕ್ಕೂ ಪೂರ್ವದಲ್ಲಿ ನಾನು ಸತ್ಯ, ಶುದ್ಧ, ಕಾಯಕ ಮಾಡಿ ಉಳಿಸಿದ ಹಣದಲ್ಲಿ ಒಂದು ಬಂಗಾರದ ಗುಂಡುಗಡಿಗೆ (ಚೌಕ), ಒಂದು ಬಂಗಾರದ ನಾಗಮುರಿ (ಬಾಜೂಬಂಧಿ) ಹಾಗೂ ಒಂದು ಬಂಗಾರದ ಕೇರಳ ಮಾದರಿಯ ಒಂದು ಮಾವಿನಕಾಯಿ ಸರದಲ್ಲಿ ನಿನಗೆ ಒಂದನ್ನು ಕೊಟ್ಟು ಕಣ್ತುಂಬಿಸಿಕೊಳ್ಳಬೇಕೆಂದಿದ್ದೇನೆ ಎಂದಾಗ, ಇದು ನನ್ನ ಸ್ವ ಸಂತೋಷದ ತೀರ್ಮಾನ. ಈ ಮೂರರಲ್ಲಿ ನಿನಗೆ ಯಾವುದು ಬೇಕು ಎಂದು ಕೇಳಿದಾಗ, ಪಪ್ಪಾ ನನ್ನ ವಿವಾಹ ಮಹೋತ್ಸವದ ಸಂದರ್ಭದಲ್ಲಿ ನಮ್ಮ ಯಜಮಾನರಿಗೆ ಬಂಗಾರದ ಚೌಕವನ್ನು ಕಾಣಿಕೆಯಾಗಿ ನೀಡಿದ್ದೀರಿ. ಈಗ ನಿಮ್ಮ ಹತ್ತಿರ ಇರುವುದು ಕೆಂಪು ಹರಳಿನ ಬಾಜೂಬಂಧಿ. ನನ್ನ ಯಜಮಾನರು ನನಗೆ ಈಗಾಗಲೇ ಹಸಿರು ಹರಳಿನ ಬಾಜೂ ಬಂಧಿಯನ್ನು ಮಾಡಿಸಿ ಕೊಟ್ಟಿದ್ದಾರೆ. ಇನ್ನು ಸರ-ಅಪ್ಪಾ ನೀನೇ ನನ್ನ ಕೊರಳಿಗೆ ಕಂಠಿಹಾರ. ನಿನ್ನ ಪ್ರೀತಿಯ ಸರಹದ್ದು ಮೀರಿ ಬೆಳೆದಿದ್ದೇನೆ. ಬೆಳೆಯುತ್ತಿದ್ದೇನೆ ಅಪ್ಪಾ…  ನೀನು ಆರೋಗ್ಯಪೂರ್ಣವಾಗಿ ಶ್ವೇತ ವಸ್ತ್ರಧಾರಿಯಾಗಿ, ಸದಾ ತ್ರಿಪುಂಢಧಾರಿಯಾಗಿ, ಲವಲವಿಕೆಯಿಂದ, ಚಟುವಟಿಕೆಯಿಂದ, ಸಂಸಾರಮುಖಿಯಾಗಿ, ಸಮಾಜಮುಖಿಯಾಗಿ ನಗು-ನಗುತಾ ನೂರು ವರ್ಷ ನಮ್ಮೊಂದಿಗೆ ಇರುವುದೇ ನನ್ನ ಆಸೆ-ಆಶಯ. 

ನಿನ್ನ ನಗ-ನಗದು-ಒಡವೆ-ವಸ್ತ್ರ ಯಾವುದೂ ನನಗೆ ಬೇಡ ಅಪ್ಪಾ… ನೀನೇ ನನಗೆ ಆಸ್ತಿ ಎಂದಾಗ… ನನ್ನ ಹಡೆದಪ್ಪನ ಕಣ್ಣಿನ ನೀರಿನಲ್ಲಿ ನನ್ನ ಬಿಂಬವನ್ನು ಕಂಡು ನನ್ನ ಜೀವನವನ್ನು ಸಾರ್ಥಕಪಡಿಸಿಕೊಂಡೆ.

ಹೆಣ್ಣು, ಹೊನ್ನು, ಮಣ್ಣಿಗಾಗಿ ಸತ್ತವರು ಕೋಟಿ ಕೋಟಿ, ಅಪ್ಪ-ಅಮ್ಮಂದಿರಿಗಾಗಿ ತಮ್ಮ ಪ್ರಾಣನ್ನು ಕೊಡುವವರು ವಿರಳ… ವೃದ್ಧಾಶ್ರಮಕ್ಕೆ ಸೇರಿಸುವವರು ಬಹಳ, ವಿರಳರಲ್ಲಿ, ಅವಿರಳನ್ನಾಗಿಸು ನನ್ನನ್ನು ಎಂದು ಮನೆದೇವರಲ್ಲಿ ಬೇಡಿಕೊಂಡೆ.


ಶ್ರೀಮತಿ ಸೌಮ್ಯ ಬಸವರಾಜ್ ಬೂಸನೂರು
ಉಪನ್ಯಾಸಕಿ, ಎಸ್.ಬಿ.ಸಿ. ಪ್ರಥಮ ದರ್ಜೆ ಕಾಲೇಜು ಹಾಗೂ ಅಥಣಿ ಪಿಜಿ ಸೆಂಟರ್
ದಾವಣಗೆರೆ. ಮೊ : 96322 97229

error: Content is protected !!