ದಾವಣಗೆರೆ, ಜೂ.20- ನಗರದ ಆವರಗೆರೆಯ ಭಗವಾನ್ ಮಹಾವೀರ ಗೋಶಾಲೆಗೆ ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವರಾದ ಪ್ರಭು.ಬಿ ಚವಾಣ್ ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಅವರು, ಅತ್ಯಂತ ಚೊಕ್ಕ ರೀತಿಯಲ್ಲಿ ಗೋಶಾಲೆ ನಿರ್ವಹಣೆ ನಡೆಯುತ್ತಿದ್ದು, ಸುಮಾರು 500ಕ್ಕೂ ಹೆಚ್ಚು ಗೋವುಗಳಿಗೆ ಇಲ್ಲಿ ಆಶ್ರಯ ನೀಡಲಾಗಿದೆ ಎಂದರು. ಕಸಾಯಿಖಾನೆಗೆ ಸಾಗಿಸುತ್ತಿದ್ದ ಅದೆಷ್ಟೋ ಗೋವುಗಳಿಗೆ ಭಗವಾನ್ ಮಹಾವೀರ ಗೋಶಾಲೆ ಮರು ಜೀವ ನೀಡಿದೆ. ಹುಟ್ಟುಹಬ್ಬ ಸೇರಿದಂತೆ ವಿಶೇಷ ದಿನಗಳನ್ನು ಇಲ್ಲಿ ಆಚರಿಸಿಕೊಳ್ಳಲು ಅವಕಾಶವಿದೆ. ಗೋಮಾತೆಗೆ ಇಲ್ಲಿ ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿ ರುವುದನ್ನು ಕಂಡು ಸಂತೋಷವಾಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀ ಸುಪರ್ಶ್ವನಾಥ ಮೂರ್ತಿ ಪೂಜಾಕ್ ಸಂಘದ ಅಧ್ಯಕ್ಷ ಮಹೇಂದ್ರ ಜೈನ್, ಶ್ರೀ ಭಗವಾನ್ ಮಹಾವೀರ್ ಗೋಶಾಲೆ ಅಧ್ಯಕ್ಷ ಉತ್ತಮಚಂದ್ ಜೈನ್, ಕಾರ್ಯದರ್ಶಿ ಸುರೇಶ್ ಜೈನ್, ಖಜಾಂಚಿ ಜೀತೇಂದ್ರ ಜೈನ್, ಜಂಟಿ ಕಾರ್ಯದರ್ಶಿಗಳಾದ ಮಹಾವೀರ್ ಜೈನ್, ದಿನೇಶ್ ಜೈನ್, ಪಶು ಸಂಗೋಪನೆ ಇಲಾಖೆಯ ಡಾ. ಭಾಸ್ಕರ್ ನಾಯಕ್, ಕೆ.ಜಿ. ಸತೀಶ್, ವಿರೇಂದ್ರ ಜಯಶಕ್ತಿ, ಮತ್ತಿತರರು ಹಾಜರಿದ್ದರು.