ವಯಸ್ಸನ್ನು ಮನಸ್ಸಿಲ್ಲಿಟ್ಟುಕೊಳ್ಳದೇ ಆರೋಗ್ಯವಾಗಿ ಬದುಕಲು ಕಾಳಜಿ ವಹಿಸಬೇಕು : ಪಾಲಿಕೆ ಸದಸ್ಯ ವೀಣಾ

ಸುಮನ್ ನಗೆಕೂಟದ 18ನೇ ವರ್ಷದ ವಾರ್ಷಿಕೋತ್ಸವ

ದಾವಣಗೆರೆ,ಜೂ.21-ವಯಸ್ಸಾಯಿತು ಎಂಬುದನ್ನು ಮನಸ್ಸಿಲ್ಲಿಟ್ಟುಕೊಳ್ಳದೇ ಆರೋಗ್ಯವಾಗಿ ಬದುಕಬೇಕು ಎಂಬ ನಿಟ್ಟಿನಲ್ಲಿ ಆಹಾರ ಮತ್ತು ಆರೋಗ್ಯದ ಕಡೆ ಮುತುವರ್ಜಿ ವಹಿಸುವುದರ ಮೂಲಕ ಮಾದರಿಯಾಗಬೇಕು ಎಂದು ಮಹಾನಗರ ಪಾಲಿಕೆಯ 39ನೇ ವಾರ್ಡಿನ ಸದಸ್ಯರಾದ ಶ್ರೀಮತಿ ವೀಣಾ ನಂಜಪ್ಪ ಆಶಯ ವ್ಯಕ್ತಪಡಿಸಿದರು.

ನಗರದ ಆಂಜನೇಯ ಬಡಾವಣೆ 14ನೇ ತಿರುವಿನಲ್ಲಿರುವ ಮಹಾನಗರ ಪಾಲಿಕೆಯ ಉದ್ಯಾನವನದಲ್ಲಿ ಮೊನ್ನೆ ಏರ್ಪಾಡಾಗಿದ್ದ ಈ ಬಡಾವಣೆಯ ಸುಮನ್ ನಗೆಕೂಟದ 18ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಸುಮನ್ ನಗೆ ಕೂಟದ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು, ನಗೆ ಕೂಟದ ಬಹುತೇಕ ಸದಸ್ಯರು ನಿವೃತ್ತರಾಗಿದ್ದರೂ ತಮ್ಮ ಆರೋಗ್ಯದ ಬಗ್ಗೆ ವಹಿಸುತ್ತಿರುವ ಕಾಳಜಿಯಿಂದಾಗಿ ನಿಮಗೆ ವಯಸ್ಸಾದಂತೆಯೇ ಕಾಣುತ್ತಿಲ್ಲ ಎಂದು ನಗೆಕೂಟದ ಸದಸ್ಯರ ಕ್ರಿಯಾಶೀಲತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುಮನ್ ನಗೆ ಕೂಟದ ಗೌರವಾಧ್ಯಕ್ಷರಾದ ಶ್ರೀಮತಿ ಕೃಷ್ಣಾ ಬಾಯಿ ಬದ್ದಿ ಅವರು ಮಾತನಾಡಿ, ತಮ್ಮ ಈ ನಗೆಕೂಟವು ಕಳೆದ 18 ವರ್ಷಗಳಿಂದ ಯಾವುದೇ ಅಡೆ – ತಡೆ ಇಲ್ಲದೇ ಮುನ್ನಡೆಯುತ್ತಿದ್ದು, ಇದಕ್ಕೆ ಎಲ್ಲಾ ಸದಸ್ಯರುಗಳ ಸಹಾಯ ಮತ್ತು ಸಹಕಾರವೇ ಕಾರಣ ಎಂದರು. `ಆರೋಗ್ಯವೇ ಭಾಗ್ಯ’ ಎಂಬುದು ನಗೆ ಕೂಟದ ಎಲ್ಲಾ ಸದಸ್ಯರುಗಳ ಧ್ಯೇಯ ವಾಕ್ಯವಾಗಿದೆ ಎಂದು ತಿಳಿಸಿದರು.

ಸುಮನ್ ನಗೆಕೂಟದ ಅಧ್ಯಕ್ಷರಾದ ಶ್ರೀಮತಿ ಮೂಲಿಮನೆ ಸುಮ ರಾಜಪ್ಪ ಅವರು ಮಾತನಾಡಿ, ಪ್ರತಿದಿನವೂ ಬೆಳಿಗ್ಗೆ ಎಷ್ಟೇ ಚಳಿ ಅಥವಾ ಮಳೆ ಇದ್ದರೂ ಸಹ ನಗೆ ಕೂಟದ ಸದಸ್ಯರು ಆಸಕ್ತಿಯಿಂದ ಬೆಳಗಿನ ಮತ್ತು ಸಂಜೆಯ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಪ್ರಸ್ತುತ ಜನರ ಜೀವನವು ಯಾಂತ್ರಿಕವಾಗಿದ್ದು, ಇಂತಹ ಹೈಟೆಕ್ ಯುಗದಲ್ಲೂ ತಮ್ಮ ಎಲ್ಲಾ ಕೆಲಸಗಳ ಮಧ್ಯೆ ಸದಸ್ಯರುಗಳು ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುತ್ತಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು.

ವಿಜಯ ಕಡೇಕೊಪ್ಪ, ಮುಷ್ಟಾ ಬಸವರಾಜ್, ವಿಶಾಲ ಬಸವರಾಜ, ಪ್ರೇಮ ಪ್ರಸನ್ನಕುಮಾರ್, ಶಾಂತಮ್ಮ ತಿಪ್ಪೇರುದ್ರಪ್ಪ, ಲಕ್ಷ್ಮಿ ಕೇಶವಮೂರ್ತಿ, ಲಲಿತ ಜಯಣ್ಣ, ಅನ್ನಪೂರ್ಣ ಆರಾಧ್ಯ, ಸಾವಿತ್ರಮ್ಮ, ಡಾ. ಚಂದ್ರಪ್ಪ, ವಿವೇಕ್, ಬಸವರಾಜ, ರಾಜಣ್ಣ, ತಿಮ್ಮಣ್ಣ, ಅನಿಲ್ ಗೌಡರ್ ಹಾಗೂ ಇತರರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಕಳೆದ ವಾರ ಸರ್ಕಾರಿ ಸೇವೆಯಿಂದ ನಿವೃತ್ತರಾಗಿರುವ ಸುಮನ್ ನಗೆ ಕೂಟದ ಸದಸ್ಯ ಎಲ್. ಸದಾನಂದ ಬದ್ದಿ ಮತ್ತು  ಶ್ರೀಮತಿ ಸುನಂದ ದಂಪತಿಯನ್ನು ಸನ್ಮಾನಿಸಲಾಯಿತು. ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಸದಾನಂದ,  ತಾನು  ಕೇವಲ ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದೇನೆಯೇ ವಿನಃ ನಗೆಕೂಟ ದಿಂದ ನಿವೃತ್ತನಾಗಿಲ್ಲ. ಮುಂದಿನ ದಿನಗಳಲ್ಲಿ ನಗೆಕೂಟದ ಕಾರ್ಯ ಚಟುವಟಿಕೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುವುದಾಗಿ ತಿಳಿಸಿದರು. 

ಶ್ರೀಮತಿ ವಿಜಯ ಕೊಟ್ರೇಶ್ ಕಡೇಕೊಪ್ಪ ಅವರ ಪ್ರಾರ್ಥನೆಯ  ನಂತರ ಮಹಾನಗರಪಾಲಿಕೆ ಮಾಜಿ ಉಪ ಮೇಯರ್‌ ಶ್ರೀಮತಿ ನಾಗರತ್ನಮ್ಮ  ಅವರು ಸ್ವಾಗತಿಸಿದರು. ಶ್ರೀಮತಿ ಪುಷ್ಪಾ ಬಸವರಾಜ ನಗೆ ಕೂಟದ ಕುರಿತು ಪ್ರಾಸ್ತಾವಿಕ ಭಾಷಣ ಮಾಡಿದರು. ಶ್ರೀಮತಿ ಶಾಂತಮ್ಮ ತಿಮ್ಮಣ್ಣ ಅವರು ವಂದಿಸಿದರು.

error: Content is protected !!