ಭಾನುವಾರ ಕಂಕಣ ಸೂರ್ಯಗ್ರಹಣದ ಪಾರ್ಶ್ವ ದರ್ಶನ

ನಾಳೆ ಭಾನುವಾರ ಬೆಳಿಗ್ಗೆ (10 ಗಂ, 12 ನಿ, 55 ಸೆ) ಕಂಕಣ ಸೂರ್ಯ ಗ್ರಹಣ ಸಂಭವಿಸಲಿದ್ದು, ನಾವು ಪಾರ್ಶ್ವ ಸೂರ್ಯ ಗ್ರಹಣ ಮಾತ್ರ ನೋಡಬಹುದಾಗಿದೆ. ಸೂರ್ಯನ ಸುತ್ತ ಭೂಮಿ, ಭೂಮಿಯ ಸುತ್ತ ಚಂದ್ರ ದೀರ್ಘ ವೃತ್ತಾಕಾರದ ಪಥದಲ್ಲಿ ಸುತ್ತುತ್ತಿವೆ. ಕೆಲವು ಬಾರಿ ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳ ರೇಖೆಯಲ್ಲಿ ಬಂದಾಗ ಒಂದರ ನೆರಳು ಮತ್ತೊಂದರ ಮೇಲೆ ಬೀಳುವ ಮೂಲಕ ಗ್ರಹಣಗಳು ಸಂಭವಿಸುತ್ತವೆ.

ಭಾನುವಾರ ಕಂಕಣ ಸೂರ್ಯಗ್ರಹಣದ ಪಾರ್ಶ್ವ ದರ್ಶನ - Janathavaniನಾಳೆಯ ಕಂಕಣ ಸೂರ್ಯಗ್ರಹಣ (Annular Solar Eclipse) ಹೇಗೆ?
ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ (ಸರಳ ರೇಖೆಯಲ್ಲಿ ) ಅಡ್ಡ ಬಂದಾಗ, ಸೂರ್ಯನ ಮುಖವನ್ನು ಮುಚ್ಚುವನು, ಅಂದರೆ ಮರೆ ಮಾಡುವನು. ಆಗ ಚಂದ್ರನ ನೆರಳು ಭೂಮಿಗೆ ಬೀಳುವುದೇ `ಸೂರ್ಯ ಗ್ರಹಣ’. ಆದರೆ, ಭಾನುವಾರ ಚಂದ್ರನ ತೋರಿಕೆಯ ಗಾತ್ರವು, ಸೂರ್ಯನ ತೋರುವಿಕೆಯ ಗಾತ್ರಕ್ಕಿಂತ ಕಡಿಮೆಯಿದ್ದು, ಚಂದ್ರನು ಸೂರ್ಯನ ಪೂರ್ಣ ಮುಖವನ್ನು ಮುಚ್ಚುವುದಿಲ್ಲ. ಬದಲಾಗಿ ಸೂರ್ಯನ ಅಂಚು ಬಳೆಯಾಕಾರದಲ್ಲಿ ಗೋಚರಿಸುವ ದೃಶ್ಯವೇ `ಕಂಕಣ ಸೂರ್ಯಗ್ರಹಣ (Annular Solar Eclipse)’. ಆದರೆ ನಮಗೆ ಆ ದೃಶ್ಯ ಕಾಣುವುದಿಲ್ಲ ಬದಲಾಗಿ, ಸೂರ್ಯ ಶೇ. 40 ಭಾಗ ಚಂದ್ರನಿಂದ ಮುಚ್ಚಲ್ಪಟ್ಟ `ಪಾರ್ಶ್ವ ಸೂರ್ಯಗ್ರಹಣ’ವನ್ನು ನೋಡಬಹುದು. ಭಾನುವಾರ ಬೆಳಿಗ್ಗೆ 10.17 ಗಂಟೆಗೆ ಆರಂಭವಾಗಿ ಮಧ್ಯಾಹ್ನ 1 ಗಂ. 31 ನಿ. ದವರೆಗೆ ಸುಮಾರು 3 ಗಂಟೆ 19 ನಿಮಿಷಗಳ ಕಾಲ ಗ್ರಹಣ ಜರುಗುತ್ತದೆ.

ಎಲ್ಲೆಲ್ಲಿ ಗ್ರಹಣ ಗೋಚರವಾಗುತ್ತದೆ : ಆಫ್ರಿಕಾ, ಫೆಸಿಫಿಕ್ ಮತ್ತು ಹಿಂದೂ ಮಹಾಸಾಗರ, ಪಾಕಿಸ್ತಾನ, ಭಾರತ, ಚೀನ, ಒಮನ್, ಯೆಮೆನ್ ದೇಶಗಳಲ್ಲಿ ಕಾಣಸಿಗುವುದು.

ನೋಡುವ ಬಗೆ ಹೇಗೆ? :
* ಯಾವುದೇ ಕಾರಣಕ್ಕೂ ಬರಿಗಣ್ಣಿ ನಿಂದ ಸೂರ್ಯಗ್ರಹಣ ವೀಕ್ಷಿಸಲೇಬಾರದು.
* ಎಕ್ಸ್‌-ರೇ, ವೆಲ್ಡಿಂಗ್‌ ಗ್ಲಾಸ್‌ಗಳ ಮೂಲಕವೂ ನೋಡಬಾರದು.
* ವೈಜ್ಞಾನಿಕ ಸಂಸ್ಥೆಗಳಿಂದ ದೊರೆಯುವ ಅಧಿಕೃತ ಸೌರ ಕನ್ನಡಕ `Solar Spect’ ನ ಮೂಲಕ ನೋಡಬಹುದು.
* ನೇರ ಕನ್ನಡಕಗಳಿಂದಲೂ ನಿರಂತರ ವಾಗಿ ನೋಡದೆ, ಕೆಲ ನಿಮಿಷಗಳ ಬಿಡುವು ನೀಡಿ ಕಣ್ಣಿಗೆ ಆಯಾಸವಾಗದಂತೆ ನೋಡಬೇಕು.
* ತೆಳುವಾದ ಕಾರ್ಡ್‌ ಬೋರ್ಡ್‌ನಲ್ಲಿ ಸಣ್ಣ ರಂಧ್ರ ಮಾಡಿ, ಕನ್ನಡಿಯ ಮುಂಭಾಗದಲ್ಲಿಟ್ಟು, ಸೂರ್ಯನ ಪ್ರತಿಬಿಂಬವನ್ನು ಗೋಡೆಯ ಮೇಲೆ ಬಿಟ್ಟು ನೋಡಬಹುದು.
* ಟೆಲಿಸ್ಕೋಪ್‌ಗಳ ಮೂಲಕ ಸೂರ್ಯನ ಪರೋಕ್ಷ ಪ್ರತಿಬಿಂಬವನ್ನು ಪರದೆ ಮೇಲೆ ಬಿಟ್ಟು ವೀಕ್ಷಿಸಬಹುದು.
* ಬೈನಾಕುಲರ್‌ನಿಂದಲೂ ಸೂರ್ಯನ ನೇರ ವೀಕ್ಷಣೆ ಮಾಡಲೇ ಬಾರದು. ಬದಲಾಗಿ ಸೂರ್ಯನ ಪ್ರತಿಬಿಂಬವನ್ನು ಮಾತ್ರ ನೋಡಬಹುದು.

ಗ್ರಹಣ ಭಯವೇ? : ಖಂಡಿತಾ ಸೂರ್ಯ ಗ್ರಹಣ, ಚಂದ್ರ ಗ್ರಹಣಗಳು ಭಯವಲ್ಲ. ಬದಲಾಗಿ ಪ್ರಕೃತಿ ಸಹಜ ನೆರಳು ಬೆಳಕಿನ ಆಟವಷ್ಟೇ. ಅನೇಕರು ಮಾಧ್ಯಮಗಳ ಮೂಲಕ ಗ್ರಹಣದಿಂದ ಅನೇ ಕರಿಗೆ ತೊಂದರೆ, ಪ್ರಕೃತಿಯ ಅವಘಡಗ ಳಾಗುತ್ತವೆಂದು ಅವೈಜ್ಞಾನಿಕವಾಗಿ ಹೆದರಿಸುತ್ತಾರೆ. ಆದರೆ ಇದಕ್ಕೆ ಯಾವುದೇ ಆಧಾರಗಳಿಲ್ಲ. ಸೂರ್ಯಗ್ರಹಣ ನಿಸರ್ಗದ ಅದ್ಭುತ ವಿದ್ಯಮಾನ, ಸುರಕ್ಷಿತವಾಗಿ ವೀಕ್ಷಿಸಿ ಆನಂದಿಸಬೇಕಷ್ಟೆ.

2020 ರ ಗ್ರಹಣಗಳು : ಈ ವರ್ಷ 2 ಸೂರ್ಯಗ್ರಹಣಗಳು ಮತ್ತು 4 ಚಂದ್ರ ಗ್ರಹಣಗಳು ಒಟ್ಟು 6 ಗ್ರಹಣಗಳು ಜರುಗುತ್ತವೆ. ಮುಂದಿನ ಸೂರ್ಯಗ್ರಹಣವು ಡಿಸೆಂಬರ್‌ 14 ರಂದು ಜರುಗುತ್ತದೆ.


ಹರೋನಹಳ್ಳಿ ಸ್ವಾಮಿ
ಮೊ : 98804-98300

error: Content is protected !!