ದಾವಣಗೆರೆ, ಜೂ.18- ಗಡಿಯಲ್ಲಿ ಹುತಾತ್ಮರಾದ ಭಾರತೀಯ ವೀರ ಯೋಧರಿಗೆ ಕುರುಬರ ಯುವ ಘಟಕ, ಸಂಗೊಳ್ಳಿ ರಾಯಣ್ಣ ಯುವ ಸೇನೆ ಸೇರಿದಂತೆ ವಿವಿಧ ಸಂಘಟನೆಗಳಿಂದ ನಗರದಲ್ಲಿ ಇಂದು ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಕುರುಬರ ಯುವ ಘಟಕದ ಕಾರ್ಯದರ್ಶಿ ಲಿಂಗರಾಜ್ ನೇತೃತ್ವದಲ್ಲಿ ಬೃಹತ್ ಬ್ಯಾನರ್ ನಲ್ಲಿ ಹುತಾತ್ಮ ಯೋಧರ ಭಾವಚಿತ್ರದ ಮುಂದೆ ಮೇಣದ ಬೆಳಕು ಚೆಲ್ಲಿ, ಮೌನಾಚರಿಸಿ ಶ್ರದ್ದಾಂಜಲಿ ಸಲ್ಲಿಸಲಾಯಿತು. ವೀರ ಜವಾನ್ ಅಮರ್ ರಹೇ ಎಂದು ಘೋಷಣೆ ಕೂಗಲಾಯಿತು.
ಈ ವೇಳೆ ಮಾತನಾಡಿದ ರಾಜನಹಳ್ಳಿ ಶಿವಕುಮಾರ್, ದೇಶದ ಗಡಿಯೊಳಗೆ ನುಸುಳಿ ಸಂಘರ್ಷ ಮಾಡಿ ಭಾರತದ ಸೈನಿಕರನ್ನು ಬಲಿ ಪಡೆದಿದ್ದಾರೆ. ಇಡೀ ಭಾರತ ದೇಶದ ಜನರೆಲ್ಲಾ ಸಾಮೂಹಿಕವಾಗಿ ಒಗ್ಗಟ್ಟಾಗಿದ್ದೇವೆ. ನರಿ ಬುದ್ಧಿಯ ಚೀನಾಗೆ ತಕ್ಕಪಾಠ ಕಲಿಸಬೇಕಿದೆ. ಹಿಂದೆ ಇದ್ದಂತಹ ಭಾರತವಲ್ಲ ನಮದೀಗ. ನಾವು ಎಲ್ಲಾ ರೀತಿ ಬಲಿಷ್ಠವಾಗಿದ್ದೇವೆ. ನಮ್ಮ ದೇಶದ ಪ್ರಧಾನಿ ಸಹಿತ ಒಳ್ಳೆಯ ನಿರ್ಧಾರ ತೆಗೆದುಕೊಳ್ಳು ತ್ತಿದ್ದು, ಇದೇ ರೀತಿ ಚೀನಾ ನರಿ ಬುದ್ಧಿ ತೋರಿದರೆ ತಕ್ಕ ಪಾಠ ಕಲಿಸಲಾಗುವುದೆಂದರು.
ದೇಶದ ರಕ್ಷಣೆಗಾಗಿ ಪ್ರಾಣ ಬಲಿದಾನ ಮಾಡಿದ ಹುತಾತ್ಮ ವೀರ ಯೋಧರ ಕುಟುಂಬ ಗಳು ಮನೆಯ ಮಕ್ಕಳನ್ನು ಕಳೆದುಕೊಂಡಿರ ಬಹುದು. ಆದರೆ, ಆ ಕುಟುಂಬಗಳ ಜೊತೆ ಇಡೀ ನಮ್ಮ ದೇಶ ಹಾಗೂ ಸರ್ಕಾರವೂ ಇರಲಿದೆ ಎಂಬ ವಿಶ್ವಾಸ ನೀಡಿದರಲ್ಲದೇ, ಚೀನಾ ವಿರುದ್ಧದ ಸಮ ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾ ರಕ್ಕೆ ಪಕ್ಷಾತೀತವಾಗಿ ಬೆಂಬಲಿಸಬೇಕೆಂದರು.
ಲಿಂಗರಾಜ್ ಮಾತನಾಡಿ, ಕುತಂತ್ರವಾಗಿ ಮುಳ್ಳು ತಂತಿಯುಳ್ಳ ಆಯುಧಗಳ ಸಮೇತ ದೇಶದೊಳಗೆ ಏಕಾಏಕಿ ಬಂದು ಗಡಿ ರಕ್ಷಣೆಯಲ್ಲಿ ನಿರತರಾಗಿದ್ದ ನಮ್ಮ ಯೋಧರ ಮೇಲೆ ದಾಳಿ ಮಾಡಿ ನರಿ ಬುದ್ದಿ ತೋರಿದ್ದಾರೆ. ಅವಶ್ಯಕ ಆಯುಧಗಳು ಇಲ್ಲದಿದ್ದರೂ ಬಲಿಷ್ಠವಾಗಿರುವ ನಮ್ಮ ಯೋಧರೂ ಸಹ ಚೀನಾ ಯೋಧರ ವಿರುದ್ಧ ಸಮರ ಸಾರಿದ್ದಾರೆ. ನಮ್ಮ ಯೋಧರು ಚೀನಾ ವಿರುದ್ಧದ ಯುದ್ಧ ಗೆದ್ದೇ ಗೆಲ್ಲುತ್ತಾರೆ. ನಮ್ಮ ಯೋಧರಿಗೆ ಬಲವಾಗಿ ಇಡೀ ನಮ್ಮ ದೇಶವೇ ಯುದ್ಧ ಸಾರಲು ಸಿದ್ಧವಿದೆ ಎಂದರು.