ಬಡ ಕುಟುಂಬಗಳಿಗೆ 10 ಸಾವಿರ ಪರಿಹಾರಕ್ಕೆ ಆಗ್ರಹ

ಅಖಿಲ ಭಾರತ ಯುವಜನ ಫೆಡರೇಷನ್ ಪ್ರತಿಭಟನೆ

ದಾವಣಗೆರೆ, ಜೂ.18- ಲಾಕ್‍ಡೌನ್ ಸಂದರ್ಭದಲ್ಲಿ ಬಡವರು ಸಂಕಷ್ಟದಿಂದ ಬದುಕುತ್ತಿದ್ದು, ಕೇಂದ್ರ ಸರ್ಕಾರ ಈ ಕುಟುಂಬಗಳಿಗೆ ತಿಂಗಳಿಗೆ 10 ಸಾವಿರ ರೂ.ನಂತೆ ಮೂರು ತಿಂಗಳ ಪರಿಹಾರ ಧನ ನೀಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಯುವಜನ ಫೆಡರೇಷನ್ ಜಿಲ್ಲಾ ಸಮಿತಿಯಿಂದ ನಗರದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.

ಉಪ ವಿಭಾಗಾಧಿಕಾರಿ ಕಚೇರಿ ಬಳಿ ಪ್ರತಿ ಭಟಿಸಿ ನಂತರ ಉಪ ವಿಭಾಗಾಧಿಕಾರಿ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಕೊರೊನಾ ಪರಿಸ್ಥಿತಿಯಲ್ಲಿ ಬಡವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಉದ್ಯೋಗ ಇರದೆ ಬದುಕಿನ ನಿರ್ವಹಣೆ ಕಷ್ಟಕರ ವಾಗಿರುವಾಗ ವಿದ್ಯುತ್ ಮತ್ತು ಇತರೆ ಬಿಲ್‍ಗಳು ಜನರಿಗೆ ಗಾಯದ ಮೇಲೆ ಬರೆ ಎಳೆಯುವಂತಿವೆ. ಜನತೆ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂಕಷ್ಟ ಎದುರಿಸುತ್ತಿರುವಾಗ ಜನರಿಂದಲೇ ಹಣ ವಸೂಲು ಮಾಡಲು ಸರ್ಕಾರ ಮುಂದಾಗಿದ್ದು ಸರಿಯಲ್ಲ ಎಂದು ಪ್ರತಿಭಟನಾಕಾರರು ಖಂಡಿಸಿದರು.

ಲಾಕ್ ಡೌನ್ ಸಮಯದಲ್ಲಿನ ವಿದ್ಯುತ್ ಬಿಲ್‍ಗಳನ್ನು ಮನ್ನಾ ಮಾಡಬೇಕು. ಪ್ರತಿ ಬಡ ಕುಟುಂಬಕ್ಕೂ ತಿಂಗಳಿಗೆ 10 ಸಾವಿರ ರೂ.ನಂತೆ 3 ತಿಂಗಳ ಕೊರೊನಾ ಪರಿಹಾರ ನಿಧಿಯಾಗಿ ನೀಡಬೇಕು. ಕೊರೊನಾ ಬಗ್ಗೆ ಬೀದಿ ನಾಟಕಗಳ ಮೂಲಕ ಅರಿವು ಮೂಡಿಸಬೇಕು. ಕೊರೊನಾ ಸಂಕಷ್ಟ ನಿಭಾಯಿಸಲು ದೇಶದ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ರಾಷ್ಟ್ರೀಕರಣಗೊಳಿಸಬೇಕು. ಎಲ್ಲಾ ಬಡವರಿಗೆ ಚಿಕಿತ್ಸೆ ಸಿಗುವಂತೆ ಮಾಡ ಬೇಕು. ವೈದ್ಯಕೀಯ ಶಿಕ್ಷಣದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಶೇ. 27ರಷ್ಟು ತಕ್ಷಣ ಜಾರಿಗೊಳಿಸಬೇಕು. ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ನಿಲ್ಲಿಸಬೇಕು. ಯುವ ಜನರಿಗೆ ಉದ್ಯೋಗ ಭದ್ರತೆ ಕಲ್ಪಿಸಲು ಭಗತ್ ಸಿಂಗ್ ಹೆಸರಿನಲ್ಲಿ ಉದ್ಯೋಗ ಭದ್ರತಾ ಕಾಯ್ದೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ದಲಿತ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ನಿಲ್ಲಬೇಕು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೆಲಸದ ದಿನಗಳನ್ನು ಹೆಚ್ಚಿಸಬೇಕು. ಪ್ರಧಾನ ಮಂತ್ರಿ ಕೇರ್ ಫಂಡ್ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ತರಬೇಕು. ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಬಾಡಾ ಕ್ರಾಸ್‍ವರೆಗೆ ವೈಜಾನಿಕ ಹಂಪ್ಸ್ ಹಾಕಿ, ನೂತನ ಮಾದರಿಯ ಬೀದಿ ದೀಪ ಅಳವಡಿಸಿ ಅಪಘಾತಗಳನ್ನು ತಡೆಯಬೇಕು ಎಂದು ಮನವಿ ಮಾಡಿದರು.

ಎಐವೈಎಫ್ ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು, ಸಂಘಟನೆ ಮುಖಂಡರಾದ ಕೆರನಹಳ್ಳಿ ಎಚ್.ರಾಜು, ಎ. ತಿಪ್ಪೇಶಿ, ಗದಿಗೇಶ ಪಾಳೇದ, ಫಜುಲುಲ್ಲಾ ಇರ್ಫಾನ್, ಹೆಚ್.ಎಂ.ಮಂಜುನಾಥ, ಮಂಜುನಾಥ ದೊಡ್ಮನಿ, ಮಂಜುನಾಥ ಹರಳಯ್ಯ ನಗರ, ರುದ್ರೇಶ ಮಳಲ್ಕೆರೆ, ಅಂಜಿನಪ್ಪ ಮಳಲ್ಕೆರೆ, ಮಂಜುನಾಥ ಮಳಲ್ಕೆರೆ, ಎಸ್‍ಓಜಿ ಕಾಲೋನಿ ಲೋಹಿತ್, ಎ.ರಂಗಸ್ವಾಮಿ, ಮಂಜುನಾಥ ಪಗ್ನಿ, ಎಚ್. ಪರಶುರಾಮ ಗುದ್ದಾಳ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!