ಸಂಘಟನೆಯಿಂದ ಮಾತ್ರ ಕೊರೊನಾ ತಡೆ

ಆಶಾ ಕಾರ್ಯಕರ್ತೆಯರಿಗೆ ಸಹಾಯಧನ ವಿತರಿಸಿದ ಶಾಸಕ ಎಸ್ಸೆಸ್

ದಾವಣಗೆರೆ, ಜೂ. 17- ವೈದ್ಯರು, ಶುಶ್ರೂಷಕರು, ಟೆಕ್ನೀಷಿಯನ್‌ಗಳು, ಆಶಾ ಕಾರ್ಯಕರ್ತೆಯರು ಸೇರಿದಂತೆ ಎಲ್ಲರೂ ಸಂಘಟಿತರಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಕೊರೊನಾ ಸೋಂಕು ತಡೆಯಲು ಸಾಧ್ಯ ಎಂದು ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.

ಜಿಲ್ಲಾ ಸಹಕಾರ ಪಟ್ಟಣ ಬ್ಯಾಂಕುಗಳ ಒಕ್ಕೂಟದ ನೇತೃತ್ವದಲ್ಲಿ ನಗರದ ದಾವಣಗೆರೆ – ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಇಂದು ಏರ್ಪಾಡಾಗಿದ್ದ ಒಕ್ಕೂಟದ ಸದಸ್ಯ ಪಟ್ಟಣ ಸಹಕಾರ ಬ್ಯಾಂಕುಗಳಿಂದ ಆಶಾ ಕಾರ್ಯಕರ್ತೆಯರಿಗೆ ಧನ ಸಹಾಯದ ಚೆಕ್ ವಿತರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ವೈದ್ಯರು ಹಾಗೂ ಸಹಾಯಕ ವೈದ್ಯರು ಕೋವಿಡ್ 19 ಸೋಂಕಿತರಿಗೆ ಚಿಕಿತ್ಸೆ ನೀಡಿದರೆ,  ಶುಶ್ರೂಷಕರು ರೋಗಿಗಳ ಆರೈಕೆ ಮಾಡುತ್ತಾರೆ. ಟೆಕ್ನೀಷಿಯನ್‌ಗಳು ಸೋಂಕು ಇರುವ ಬಗ್ಗೆ ದೃಢ ಪಡಿಸುತ್ತಾರೆ. ಆಶಾ ಕಾರ್ಯಕರ್ತೆಯರು ರೋಗ ಹರಡದಂತೆ ತಡೆಯಲು ಅರಿವು ಮೂಡಿಸುವಲ್ಲಿ ಶ್ರಮಿಸುತ್ತಾರೆ. ಹೀಗೆ ಒಬ್ಬರಿಗೊಬ್ಬರು ಸಂಘಟಿತರಾಗಿ ಕಾರ್ಯ ನಿರ್ವಹಿಸಿರುವುದ ರಿಂದಲೇ ದಾವಣಗೆರೆ ಜಿಲ್ಲೆಯಲ್ಲಿ ಸೋಂಕು ಹರಡಿಕೆ ನಿಯಂತ್ರಣಕ್ಕೆ ಬಂದಿದೆ ಎಂದರು.

ಇನ್ನು ಕೆಲವೇ ದಿನಗಳಲ್ಲಿ ಜಿಲ್ಲೆಯು ಮತ್ತೆ ಹಸಿರು ವಲಯಕ್ಕೆ ಸೇರ್ಪಡೆಯಾಗಲಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೂ ಸಹ ಭರವಸೆ ನೀಡಿದ್ದಾರೆ. ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದು, ಎಲ್ಲರೂ ಗುಣಮುಖರಾಗಿ ಬಿಡುಗಡೆ ಹೊಂದುತ್ತಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ವೈದ್ಯರು, ಶುಶ್ರೂಷಕರ ಕರ್ತವ್ಯ ಏನೆಂಬುದು ಕೊರೊನಾ ವೇಳೆಯಲ್ಲಿ ಸರ್ಕಾರಕ್ಕೆ ಮನದಟ್ಟಾಗಿದೆ. ಈ ಹಿಂದೆ ವೈದ್ಯರ ಮೇಲೆ ಹಲ್ಲೆಗಳು ನಡೆಯುತ್ತಿದ್ದರೂ ಅಷ್ಟಾಗಿ ಕ್ರಮ ಕೈಗೊಳ್ಳುತ್ತಿರಲಿಲ್ಲ. ಆದರೆ, ಇಂದು ವೈದ್ಯರು ಸೇರಿದಂತೆ ಕೊರೊನಾ ವಾರಿಯರ್ಸ್‌ಗಳ ಮೇಲೆ ಹಲ್ಲೆಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕ್ರಮ ಕೈಗೊಂಡ ಸರ್ಕಾರಕ್ಕೆ ಎಲ್ಲರೂ ಅಭಿನಂದಿಸಬೇಕು ಎಂದರು.

ಪ್ರಸ್ತುತ ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿ ರುವ ಹಣ ಕಡಿಮೆಯೇ ಆದರೂ, ಸರ್ಕಾರ ನಿಮ್ಮ ಸೇವೆಯನ್ನು ಗುರುತಿಸಿ ಅಭಿನಂದಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಎಲ್ಲರಿಗೂ ಶುಭವಾಗಲಿ ಎಂದರು.

ಜಿಲ್ಲಾ ಪಟ್ಟಣ ಸಹಕಾರ ಬ್ಯಾಂಕ್ ಒಕ್ಕೂಟದ  ಪ್ರಧಾನ ಕಾರ್ಯದರ್ಶಿ ಕೋಗುಂಡಿ ಬಕ್ಕೇಶಪ್ಪ, ದಾವಣಗೆರೆ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರುಗಳಾದ ಬಿ.ಸಿ. ಉಮಾಪತಿ, ದೇವರಮನೆ ಶಿವಕುಮಾರ್, ಅಂದನೂರು ಮುಪ್ಪಣ್ಣ, ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್  ಉಪಾಧ್ಯಕ್ಷ ಕಿರುವಾಡಿ ಸೋಮಶೇಖರ್, ನಿರ್ದೇಶಕರುಗಳಾದ ನಿರ್ದೇಶಕ ರಮಣ್ ಲಾಲ್ ಸಂಘವಿ, ಎಸ್.ಕೆ.  ವೀರಣ್ಣ, ಎ.ಹೆಚ್. ಕುಬೇರಪ್ಪ, ಕೆ.ಹೆಚ್. ಶಿವಯೋಗಪ್ಪ, ಕನ್ನಿಕಾ ಪರಮೇಶ್ವರಿ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ  ಆರ್.ಜಿ. ಶ್ರೀನಿವಾಸ ಮೂರ್ತಿ, ಉಪಾಧ್ಯಕ್ಷರಾದ ಆರ್.ಎನ್. ಸುಜಾತ, ನಿರ್ದೇಶಕ ಆರ್.ಎಲ್. ಪ್ರಭಾಕರ್, ಸಹಕಾರ ಸಂಘಗಳ ಉಪ ನಿಬಂಧಕ ಬಿ.ಜಯಪ್ರಕಾಶ್, ಆಶಾ ಕಾರ್ಯಕರ್ತೆಯರ ಮೇಲ್ವಿಚಾರಕರಾದ ಸುರೇಖ ಹಾಗೂ ಇತರರು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಶಿಕಲಾ ಪ್ರಾರ್ಥಿಸಿದರು. ಕೆ. ಎಂ. ಜಗದೀಶ್ ಸ್ವಾಗತಿಸಿದರು. ಸುರೇಂದ್ರಪ್ಪ  ನಿರೂಪಿಸಿದರು. ಶಿವ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಐಗೂರು ಚಂದ್ರಶೇಖರ್  ವಂದಿಸಿದರು.

error: Content is protected !!