ಸಿರಿಗೆರೆ ಶ್ರೀಗಳಿಂದ ಸಮುದಾಯ ಬಯಸುವುದೇನು ?

ತಮ್ಮ ಪಾಂಡಿತ್ಯದಿಂದಲೇ  ವಿಶ್ವ ಮನ್ನಣೆ ಗಳಿಸಿಕೊಂಡಿರುವ ಸಿರಿಗೆರೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು 74 ನೇ ವಸಂತಕ್ಕೆ ಪಾದಾರ್ಪಣೆ ಮಾಡಿದ್ದಾರೆ. ತಮ್ಮ ಜ್ಞಾನದ ಬಲದಿಂದ ಸಮಾಜ ಎಂದಿಗೂ ಮರೆಯದಂತಹ ಅದ್ಭುತ, ಅಪ್ರತಿಮ ಕಾರ್ಯಗಳನ್ನು ಮಾಡುತ್ತಿದ್ದಾರೆ. ಶಿಕ್ಷಣ, ಸಾಹಿತ್ಯ, ವಿಜ್ಞಾನ, ಸಂಶೋಧನೆ, ಧಾರ್ಮಿಕ ಹೀಗೆ ಅನೇಕ ಕ್ಷೇತ್ರಗಳಲ್ಲಿ ಅವರ ಅವಿರತ ಸಾಧನೆ ಕೆಲವರಿಗೆ ಹುಬ್ಬೇರಿಸುವಂತೆ ಮಾಡಿದ್ದರೆ, ಹಲವರಿಗೆ ಕಣ್ಣು ಕುಕ್ಕುವಂತೆ ಮಾಡಿದೆ. 

 ಹಿರಿಯ ಶ್ರೀ ತರಳಬಾಳು ಜಗದ್ಗುರುಗಳು ಅನೇಕ ಕನಸುಗಳನ್ನು ಕಂಡಿದ್ದು ಅವೆಲ್ಲವೂ ಕೂಡ ನನಸಾಗಿವೆ. ಅದರಲ್ಲಿ ಬಹುಮುಖ್ಯವಾಗಿ ಶ್ರೀ ಮಠದ ಉತ್ತರಾಧಿಕಾರಿ ಆಗುವಂತಹ ವ್ಯಕ್ತಿ ಶಿವಾನುಭವ ಹಾಗೂ ಲೋಕಾನುಭವ ಉಳ್ಳವರಾಗಿರಬೇಕು. ಈ ನಿಟ್ಟಿನಲ್ಲಿ ನೋಡಿದಾಗ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಶಿವಾನುಭವ ಹಾಗೂ ಲೋಕಾನುಭವದಲ್ಲಿ ಹಿರಿಯ ಜಗದ್ಗುರುಗಳ ಆಶಯವನ್ನು ನನಸು ಮಾಡಿದ್ದಾರೆ. ಬರೀ ಹೆಸರಿನಿಂದ ಮಾತ್ರ ಜಗದ್ಗುರುವಾಗದೇ ಅನೇಕ ಅಂತರರಾಷ್ಟ್ರೀಯ ಶಾಂತಿ ಸಮ್ಮೇಳನಗಳಲ್ಲಿ ಭಾಗವಹಿಸಿ ಶಾಂತಿ ಸಂದೇಶವನ್ನು ಸಾರಿದ್ದಲ್ಲದೆ ನಮ್ಮ ಸಮಾಜದ ಹಿರಿಮೆ, ಗರಿಮೆಯನ್ನು ಎತ್ತಿ ಹಿಡಿದಿದ್ದಾರೆ. ಆ ಮೂಲಕ ನೈಜ ಜಗದ್ಗುರುವಾಗಿ ಕಂಗೊಳಿಸುತ್ತಿದ್ದಾರೆ. ಒಂದು ಮಠದ ಪೀಠಾಧಿಪತಿಯಾಗಿ ತಂತ್ರಾಂಶ ಸೃಜಿಸಿದ್ದು ಗಣಕ ಲೋಕದ ವಿಜ್ಞಾನಿಗಳೇ ಬೆರಗಾಗುವಂತೆ ಮಾಡಿದೆ. ಅವರ ಹಸ್ತದಿಂದ ಪಾಣಿನಿಯ ಅಷ್ಟಾಧ್ಯಾಯಿ ಕೃತಿ ತಂತ್ರಾಂಶಕ್ಕೆ ಒಳಪಟ್ಟು ಗಣಕಾಷ್ಟಧ್ಯಾಯಿಯಾಗಿ ಜಗತ್ತಿನ ಸಂಸ್ಕೃತ ಪಂಡಿತರ ಮನಸೂರೆಗೊಂಡಿದೆ. ಭಾರತದಲ್ಲಿ ಸಂಸ್ಕೃತ ಒಂದು ವರ್ಗದ ಭಾಷೆ ಎಂಬುದನ್ನು ಹುಸಿ ಮಾಡಿದ್ದಲ್ಲದೆ ಯಾರು ಬೇಕಾದರೂ ಸಾಧಿಸಬಹುದೆಂದು ಪ್ರಯೋಗಾತ್ಮಕವಾಗಿ ತೋರಿಸಿದ್ದಾರೆ. 

ಕನ್ನಡ ಬಲ್ಲವರು ಮಾತ್ರ ವಚನ ಅಧ್ಯಯನ ಮಾಡಿದರೆ ಅದು ವಿಶ್ವದ ಜನರಿಗೆ ಪರಿಚಯ ಆಗದಿರಬಹುದೆಂಬುದನ್ನು ಮನಗಂಡ ಶ್ರೀಗಳು,  ವಚನಗಳನ್ನು ತಂತ್ರಾಂಶದ ಮೂಲಕ ಪರಿಚಯಿಸಲು ಪಣತೊಟ್ಟು ಯಶಸ್ವಿಯಾಗಿದ್ದಾರೆ. ಈಗ ಕನ್ನಡದ ಪರಿಚಯವೇ ಇರದ ವಿಶ್ವದ ಅನೇಕ ಜನರು ತಮ್ಮ ಬೆರಳ ತುದಿಯಲ್ಲಿ ವಚನಗಳನ್ನು ತಾವಿರುವ ಜಾಗದಲ್ಲಿಯೇ ಅಧ್ಯಯನ ನಡೆಸಬಹುದಾಗಿದೆ. ಸಿರಿಗೆರೆಯ ಸಿಡಿಲ ಸಂತ ಶಿವಕುಮಾರ ಶ್ರೀಗಳ ಅಪೇಕ್ಷೆಯಂತೆ ಬಸವಾದಿ ಶರಣರ ವಚನಗಳನ್ನು ದೇಶ-ವಿದೇಶಗಳಲ್ಲಿ ಪ್ರಚಾರಕ್ಕೆ ತಂದಿದ್ದಾರೆ. ಅನೇಕ ಬಾರಿ ಭಕ್ತರೊಂದಿಗೆ ವಿದೇಶ ಯಾತ್ರೆ ಮಾಡಿ  ವಿದೇಶಿಗರಿಗೆ ಶರಣರ ಸಂದೇಶವನ್ನು ಯಶಸ್ವಿಯಾಗಿ ಮನದಟ್ಟು ಮಾಡಿಕೊಟ್ಟಿದ್ದಾರೆ. ಸಿರಿಗೆರೆಯಂತಹ ಗ್ರಾಮೀಣ ಪ್ರದೇಶಕ್ಕೂ ಕೂಡ ವಿದೇಶಿಯರು ಬಂದು ಬಸವ ತತ್ವದ ಬಗ್ಗೆ ಚರ್ಚಿಸುತ್ತಾರೆ ಎಂದರೆ ಡಾ. ಶ್ರೀಗಳ ಪ್ರಭಾವವನ್ನು ಊಹಿಸಬಹುದು. 

ಕೃಷಿಯನ್ನೇ ನಂಬಿದ ರೈತ ನಷ್ಟಕ್ಕೊಳಗಾಗಿ ಬೀದಿ ಪಾಲಾಗುವ ದುಃಸ್ಥಿತಿ ನಿರ್ಮಾಣವಾದಾಗ ಸರ್ಕಾರದ ಪರಿಹಾರ ರೈತರ ಖಾತೆಗೆ ನೇರವಾಗಿ ಜಮೆಯಾಗಲು ಶ್ರೀಗಳೇ ಕಾರಣಕರ್ತರು. ಭೂಮಿ ಆನ್ ಪರಿಹಾರ ಎಂಬ ತಂತ್ರಾಂಶವನ್ನು ಸರ್ಕಾರ ಅಭಿವೃದ್ಧಿ ಪಡಿಸಲು ಅನೇಕ ರೀತಿಯ ಮಾರ್ಗದರ್ಶನವನ್ನು ದಯಪಾಲಿಸಿ ಮಧ್ಯವರ್ತಿ ಹಾವಳಿಯನ್ನು ನಿಯಂತ್ರಿಸಿದರು. ಅಲ್ಲದೇ, ರೈತರಿಗಾಗಿ ಅನೇಕ ನೀರಾವರಿ ಯೋಜನೆಗಳು ಮೈದಾಳಲು ಶ್ರೀಗಳೇ ಪ್ರೇರಕ ಶಕ್ತಿ. ಭಾರತದ ಯಾವುದೇ ಮಠ ಮಾಡದ ಕೆಲಸವನ್ನು ಶ್ರೀಗಳು ಸರ್ಕಾರದ ನೆರವಿನೊಂದಿಗೆ ನದಿಗಳಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತಂದಿದ್ದಾರೆ. ಬರಗಾಲ ಇರಬಹುದು, ಪ್ರವಾಹ ಇರಬಹುದು. ಎಂತಹದೇ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾದಾಗಲೂ ಎದೆಗುಂದದೆ ರೈತರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. 

ಹೋದ ವರ್ಷ ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ ಉಂಟಾಗಿ, ಜನರ ಬದುಕು ಮೂರಾ ಬಟ್ಟೆಯಾಗಿತ್ತು. ಪೂಜ್ಯರು ದೂರದರ್ಶನದಲ್ಲಿ  ಬೀಭತ್ಸ ದೃಶ್ಯವನ್ನು ನೋಡಿ ದುಃಖಿತರಾದರು. ತಕ್ಷಣವೇ ಶ್ರೀಗಳು ಮಠದ ಸ್ವಯಂಸೇವಕರೊಂದಿಗೆ ನೆರೆ ಪೀಡಿತ ಪ್ರದೇಶಕ್ಕೆ ಧಾವಿಸಿ, ಸಂತ್ರಸ್ತರಿಗೆ ಭರವಸೆಯ ಬೆಳಕನ್ನು ತೋರಿದರು. ಅವಶ್ಯಕ ದಿನ ಸಾಮಗ್ರಿಗಳನ್ನು ನೀಡಿದ್ದಲ್ಲದೆ  300 ಕ್ಕೂ ಹೆಚ್ಚು ಸಂತ್ರಸ್ತ ಮಕ್ಕಳ ವಿದ್ಯಾಭ್ಯಾಸಕ್ಕೆ ಸಿರಿಗೆರೆಯಲ್ಲಿ ಆಸರೆ ಒದಗಿಸುವುದರ ಮೂಲಕ ದಯೆಯನ್ನು ತೋರಿದ್ದಾರೆ.

ಯಾವುದೋ ವಿಷ ಗಳಿಗೆಯಲ್ಲಿ  ಮನಸ್ತಾಪ ಮಾಡಿಕೊಂಡು ನ್ಯಾಯಾಲಯಗಳಿಗೆ ಅಲೆದಾಡುವ ಜನರಿಗಾಗಿ ಸದ್ಧರ್ಮ ನ್ಯಾಯಪೀಠ ಸ್ಥಾಪಿಸಿ ಉಚಿತವಾಗಿ ನ್ಯಾಯವನ್ನು ಕೊಡುವುದರ ಮೂಲಕ ಅವರ ಬದುಕಿನಲ್ಲಿ ಸಂತಸ ಕಾಣಲು ಕಾರಣೀಭೂತರಾಗಿದ್ದಾರೆ.

ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಮೂಡಿ ಬರುತ್ತಿರುವ ಬಿಸಿಲು ಬೆಳದಿಂಗಳು ಅಂಕಣ ಬರಹ ನಾಡಿನ ಓದುಗರ, ಸಾಹಿತ್ಯಾಸಕ್ತರ ಗಮನವನ್ನು ಸೂಜಿಗ ಲ್ಲಿನಂತೆ ಸೆಳೆದಿದೆ. ಬಸವಾದಿ ಪ್ರಮಥರ ವಚನಗಳ ಮೂಲಕ ಪ್ರಸ್ತುತ ಸಮಸ್ಯೆಗಳನ್ನು ವಿಶ್ಲೇಷಿಸುವ  ಅವರ ಬರವಣಿಗೆ ಶೈಲಿಯಿಂದ ಅಪರೂಪದ ಮಠಾಧಿಪತಿ ಎಂದು ಗುರುತಿಸಲ್ಪಟ್ಟಿದ್ದಾರೆ. ಶ್ರೀಗಳು ಕನ್ನಡ, ಇಂಗ್ಲಿಷ್, ಸಂಸ್ಕೃತ, ಹಿಂದಿ, ಜರ್ಮನ್ ಭಾಷೆಗಳ ವಿದ್ವಾಂಸ ರಾಗಿದ್ದು, ಬಹುಭಾಷಾ ಪಂಡಿತರೆಂದು ವಿದ್ವತ್ ಲೋಕ ಗುರುತಿಸಿರುವುದು ನಮ್ಮ ಸಮಾಜ ಹೆಮ್ಮೆ ಪಡುವಂತೆ ಮಾಡಿದೆ. ಸಂಗೀತ ಡಿಪ್ಲೋಮಾದಲ್ಲಿ  ಮೊದಲ ಸ್ಥಾನವನ್ನು ಗಳಿಸಿದ್ದು ಸಾಮಾನ್ಯ ಸಾಧನೆಯೇನಲ್ಲ. 

ಹೀಗೆ ಅನೇಕ ಕ್ಷೇತ್ರಗಳಲ್ಲಿ ಅವರ ಸಮಾಜಮುಖಿ ಕಾರ್ಯಕ್ಕೆ ಅವರೇ ಸರಿಸಾಟಿ. ಹಲವು ಸಾಧನೆಗಳನ್ನು ಮಾಡಿದ್ದರೂ ಕೂಡ ಭಕ್ತಗಣ ಅವರಿಂದ ಇನ್ನೂ ಅನೇಕ ಕಾರ್ಯಗಳನ್ನು ನಿರೀಕ್ಷೆ ಮಾಡುತ್ತಿರುವುದು ಸುಳ್ಳಲ್ಲ. ಅವರ ಶರೀರಕ್ಕೆ ವಯಸ್ಸಾಗುತ್ತಿರಬಹುದು. ಆದರೆ, ಅವರ ಉತ್ಸಾಹ, ಅಧ್ಯಯನ, ಕಾರ್ಯ ಚಟುವಟಿಕೆಗಳಿಗೆ ವಯಸ್ಸು ಅಡ್ಡಿ ಬಂದಿಲ್ಲ ಎಂಬುದು ಸತ್ಯ. ದಿನಕ್ಕೆ 15-16 ಗಂಟೆ ಸಮಾಜಕ್ಕಾಗಿ ದುಡಿಯುತ್ತಿದ್ದಾರೆ. ವಯಸ್ಸು ಎಪ್ಪತ್ತಾದರೂ ಅವರ ಮನಸ್ಸು ಇಪ್ಪತ್ತರ ಯುವಕನಂತೆ ಸದಾ ಚಟುವಟಿಕೆಯಿಂದ ಕೂಡಿದ್ದು, ಮಠದ ಅಭ್ಯುದಯಕ್ಕಾಗಿ ಶ್ರಮಿಸುತ್ತಿದ್ದಾರೆ. ಅವರ ಮಾರ್ಗದರ್ಶನ ನಮ್ಮ ಸಮಾಜಕ್ಕೆ ಅವಶ್ಯಕತೆಯಿದೆ. ಸಮಾಜಕ್ಕಾಗಿ ಪೂಜ್ಯರ ಹತ್ತಾರು ಕನಸುಗಳು, ಯೋಜನೆಗಳಿವೆ. ಅವುಗಳೆಲ್ಲಾ ಸಾಕಾರಗೊಳ್ಳಬೇಕಾಗಿದೆ. ಆದುದರಿಂದ ಅವರ ಪಾಂಡಿತ್ಯ, ಅನುಭವ, ವಿದ್ವತ್‌, ದೂರದೃಷ್ಟಿಯ ಕಳಕಳಿ ನಮ್ಮ ಮುನ್ನಡೆಗೆ ದಾರಿ ದೀಪವಾಗಲಿ ಎಂಬುದು ಭಕ್ತರ ಅಪೇಕ್ಷೆಯಾಗಿದೆ.


– ಚಂದ್ರಶೇಖರ ಕಗ್ಗಲ್ಲುಗೌಡರ,
ಶಿಕ್ಷಕರು, ಭದ್ರಾವತಿ.
[email protected]

error: Content is protected !!