ಹರಪನಹಳ್ಳಿ, ಜೂ.16- ಕೊರೊನಾ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ರೈತರು, ಕೃಷಿ ಕೂಲಿಕಾರರು ಹಾಗೂ ಗ್ರಾಮೀಣ ಕಸುಬುದಾರರ ವಿವಿಧ ಬೇಡಿಕೆ ಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಸಿಪಿಐ (ಎಂ) ತಾಲ್ಲೂಕು ಘಟಕ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿವೆ.
ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಟಿ.ವಿ.ರೇಣುಕಮ್ಮ ಮಾತನಾಡಿ, ಲಾಕ್‍ಡೌನ್‍ನಿಂದಾಗಿ ಆರೋಗ್ಯ, ಸಾಮಾಜಿಕ, ಆರ್ಥಿಕ
ಸಂಕಷ್ಟವಾಗಿ ಮಾರ್ಪಟ್ಟಿದ್ದು, ಕೃಷಿ ಬದುಕನ್ನು ಅವಲಂಬಿಸಿದ ಕೃಷಿ ಕೂಲಿಕಾರರು, ಗ್ರಾಮೀಣ ಕಸುಬುದಾರರಾದ ಕ್ಷೌರಿಕ, ಅಗಸ, ಬಡಗಿ ಸೇರಿದಂತೆ ಇತರೆ ಕಟ್ಟಡ ಕಾರ್ಮಿಕರನ್ನು ಒಳಗೊಂಡು ಇತರೆ ವಿಭಾಗದ ಜನರು ಅತಿ ಹೆಚ್ಚು ಸಂಕಷ್ಟ ಎದುರಿಸುತಿದ್ದಾರೆ. ಸಂಕಷ್ಟ ಗಳ ನಡುವೆ ಎಪಿಎಂಸಿ ಕಾಯ್ದೆ ತಿದ್ದುಪಡಿ, ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಹುನ್ನಾರ ಕೈಬಿಡಬೇಕು ಎಂದು ಆಗ್ರಹಿಸಿದರು.
ರೇಷನ್ ಪಡಿತರವನ್ನು ಎಪಿಎಲ್, ಬಿಪಿಎಲ್ ಎನ್ನುವ ತಾರತಮ್ಯವಿಲ್ಲದೆ ಎಲ್ಲರಿಗೂ ವಿತರಿಸಬೇಕು. ರೈತರು, ಸ್ತ್ರೀಶಕ್ತಿ ಸಂಘಗಳ ಗುಂಪು ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು, ರೈತರ ಕೃಷಿ ಉತ್ಪನ್ನಗಳನ್ನು ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಸಬೇಕು, ವಿದ್ಯುತ್ ಕ್ಷೇತ್ರ ಖಾಸಗೀಕರಣ ಕೈಬಿಡಬೇಕು, ಕಟ್ಟಡ ಕಾರ್ಮಿಕರಿಗೆ ತಕ್ಷಣ ಪರಿಹಾರ ವಿತರಣೆಯಾಗಬೇಕು ಎಂಬ ವಿವಿಧ ಬೇಡಿಕೆಗಳ ಮನವಿಯನ್ನು ತಹಶೀಲ್ದಾರರಿಗೆ ನೀಡಿದ್ದಾರೆ.
ಹೆಚ್.ರಹಮತ್‌ವುಲ್ಲಾ, ಹುಲಿಕಟ್ಟಿ ಕೆ.ರಾಜಪ್ಪ, ಬಿ.ಬಸವರಾಜ್, ಮುತ್ತಮ್ಮ, ಬಸಮ್ಮ, ಭೋವಿ ನಾಗರಾಜ್, ಸದಾಶಿವಪ್ಪ, ಸೇರಿದಂತೆ ಇತರರು ಪ್ರತಿ ಭಟನೆಯಲ್ಲಿ ಭಾಗವಹಿಸಿದ್ದರು.