ಮಲೇಬೆನ್ನೂರು, ಜೂ.16- ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಯಾವುದೇ ಕಾಯಿಲೆ ಬರದಂತೆ ತಡೆಗಟ್ಟಬಹುದೆಂದು ಹೊಳೆ ಸಿರಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರೇಖಾ ಹೇಳಿದರು.
ಜಿಗಳಿ ಗ್ರಾ.ಪಂ ಕಛೇರಿಯಲ್ಲಿ ಇಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಸ್ಕ್ ಧರಿಸುವುದರಿಂದ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಹಾಗೂ ಸ್ವಚ್ಛತೆ ಕಾಪಾಡುವುದರಿಂದ ಕೊರೊನಾ ವೈರಸ್ ಅಷ್ಟೇ ಅಲ್ಲ, ಸೋಂಕು ಹರಡುವ ಎಲ್ಲಾ ಕಾಯಿಲೆಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದೆಂದರು.
ಗ್ರಾಮದಲ್ಲಿ ಮತ್ತು ನಮ್ಮ ಮನೆಯ ಸುತ್ತಲಿನ ವಾತಾವರಣವನ್ನು ನಾವು ಸ್ವಚ್ಛ ಹಾಗೂ ಸುಂದರವಾಗಿ ಇಟ್ಟುಕೊಂಡರೆ ಸೊಳ್ಳೆ ಉತ್ಪತ್ತಿ ಆಗದಂತೆ ನೋಡಿಕೊಳ್ಳಬಹುದು. ಸೊಳ್ಳೆ ಉತ್ಪತ್ತಿ ಆಗದಿದ್ದರೆ ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ ದಂತಹ ಕಾಯಿಲೆಗಳು ಬರುವುದಿಲ್ಲ ಎಂದು ರೇಖಾ ಹೇಳಿದರು.
ಜಿಲ್ಲಾ ಮಲೇರಿಯಾ ಕಛೇರಿಯ ಆರೋಗ್ಯ ಮೇಲ್ವಿಚಾರಕ ವಿಜಯ್ ಗಟ್ಟಿ ಮಾತನಾಡಿ, ಕೊಳಚೆ ನೀರು ನಿಲ್ಲುವ ಏರಿಯಾವನ್ನು `ಮಲೇರಿಯಾ’ ಎನ್ನಲಾಗುವುದು. ಮನೆಯ ಹತ್ತಿರ ನೀರು ನಿಲ್ಲದಂತೆ ಮತ್ತು ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಂಡರೆ ಸೊಳ್ಳೆ ಉತ್ಪತ್ತಿ ಆಗುವುದನ್ನು ನಿಯಂತ್ರಿಸಬಹುದೆಂದರು.
ಸೊಳ್ಳೆಯಿಂದ ಮಲೇರಿಯಾ, ಚಿಕನ್ಗುನ್ಯಾ, ಡೆಂಗ್ಯೂ ಕಾಯಿಲೆಗಳ ಜೊತೆಗೆ ಆನೆ ಕಾಲು ರೋಗ, ಮೆದುಳು ಜ್ವರವೂ ಬರುತ್ತದೆ ಎಂದು ವಿಜಯ್ ಗಟ್ಟಿ ಎಚ್ಚರಿಸಿದರು.
ಹರಿಹರ ತಾಲ್ಲೂಕಿನ ಹಿರಿಯ ಆರೋಗ್ಯ ಸಹಾಯಕ ಹೊರಕೇರಿ ಮಾತನಾಡಿ, ಈ ವರ್ಷ ಮಲೇರಿಯಾ ವಿರೋಧಿ ಮಾಸಾಚರಣೆಯನ್ನು `ಶೂನ್ಯ ಮಲೇರಿಯಾ ನನ್ನಿಂದಲೇ ಪ್ರಾರಂಭ’ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.
ಮಲೇರಿಯಾ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ, ಯಾವುದೇ ಜ್ವರವಿರಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ, ಹೊರಗಿನಿಂದ ಮನೆಗೆ ಬಂದ ತಕ್ಷಣ ಕಾಲು-ಕೈಗಳನ್ನು ತೊಳೆದುಕೊಳ್ಳಿ, ಸಾಂಕ್ರಾಮಿಕ ರೋಗಗಳು ಹರಡದಂತೆ ಎಲ್ಲರೂ ಎಚ್ಚರ ವಹಿಸಿ ಎಂದು ಹೊರಕೇರಿ ಮನವಿ ಮಾಡಿದರು.
ಗ್ರಾ.ಪಂ ಸದಸ್ಯೆ ಗೀತಮ್ಮ ಮಂಜುನಾಥ್, ಪಿಡಿಓ ದಾಸರ ರವಿ, ಸ.ಹಿ. ಪ್ರಾ.ಶಾಲೆಯ ಮುಖ್ಯ ಶಿಕ್ಷಕ ಕರಿಬಸಪ್ಪ, ಕಿರಿಯ ಆರೋಗ್ಯ ಸಹಾಯಕರಾದ ಸವಿತಾ ಮಾತನಾಡಿದರು.
ಗ್ರಾ.ಪಂ ಉಪಾಧ್ಯಕ್ಷರಾದ ಪದ್ದಮ್ಮ ಮಂಜಪ್ಪ, ಗ್ರಾ.ಪಂ ಸದಸ್ಯರಾದ ಎಂ.ವಿ ನಾಗರಾಜ್, ಡಿ.ಎಂ ಹರೀಶ್, ಜಿಲ್ಲಾ ಮಲೇರಿಯಾ ಕಛೇರಿಯ ಹಿರಿಯ ಆರೋಗ್ಯ ಸಹಾಯಕ ಪ್ರಹ್ಲಾದ್, ಕಿರಿಯ ಆರೋಗ್ಯ ಸಹಾಯಕರಾದ ಪ್ರಕಾಶ್ನಾಯ್ಕ, ಆಶಾ, ಭಾಗ್ಯಮ್ಮ, ಆರೋಗ್ಯವಾಣಿ, ಶಿಕ್ಷಕ ಶ್ರೀನಿವಾಸ್ ರೆಡ್ಡಿ, ಬೇವಿನಹಳ್ಳಿಯ ಎ.ಕೆ ರಂಗನಾಥ್ ಸೇರಿದಂತೆ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಕಿರಿಯ ಆರೋಗ್ಯ ಸಹಾಯಕ ಪ್ರಹ್ಲಾದ್ ಸ್ವಾಗತಿಸಿದರೆ, ಗ್ರಾ.ಪಂ. ಬಿಲ್ ಕಲೆಕ್ಟರ್ ಮೌನೇಶ್ ವಂದಿಸಿದರು.