ಭದ್ರಾ ಜಲಾಶಯಕ್ಕೆ ಒಳ ಹರಿವು ಆರಂಭ

ಅಚ್ಚುಕಟ್ಟಿನ ರೈತರಲ್ಲಿ ವಿಶ್ವಾಸ ಮೂಡಿಸಿದ ಮುಂಗಾರು

ಮಲೇಬೆನ್ನೂರು, ಜೂ.15- ಮಧ್ಯ ಕರ್ನಾಟಕದ ಜೀವನಾಡಿ ಭದ್ರಾ ಜಲಾಶಯಕ್ಕೆ ಭಾನುವಾರ ದಿಂದ ಒಳಹರಿವು ಆರಂಭವಾಗಿದ್ದು, ಅಚ್ಚುಕಟ್ಟಿನ ರೈತರ ಗಮನ ಸೆಳೆದಿದೆ.

ಕಳೆದ 4-5 ದಿನಗಳಿಂದ ಮಲೆ ನಾಡಿನಲ್ಲಿ ಮುಂಗಾರು ಮಳೆ ನಿಧಾನ ವಾಗಿ ಶುರುವಾಗಿದ್ದು, ಭದ್ರಾ ನದಿ ಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ.

ಭದ್ರಾ ಜಲಾಶಯಕ್ಕೆ ಶನಿವಾರ 157 ಕ್ಯೂಸೆಕ್ಸ್‌ ಇದ್ದ ನೀರಿನ ಒಳಹರಿವು ಭಾನುವಾರ ದಿಢೀರ್‌ 3097 ಕ್ಯೂಸೆಕ್ಸ್‌ಗೆ ಏರಿಕೆ ಆಗಿತ್ತು. ಭಾನುವಾರ ಆ ಭಾಗದಲ್ಲಿ ಮಳೆ ಕಡಿಮೆಯಾಗಿದ್ದರಿಂದ ಸೋಮವಾರ ಒಳಹರಿವು 1917 ಕ್ಯೂಸೆಕ್ಸ್‌ಗೆ ಇಳಿಕೆ ಕಂಡಿತು.

ಶನಿವಾರ 133 ಅಡಿ ಇದ್ದ ಜಲಾ ಶಯದ ನೀರಿನ ಮಟ್ಟ ಭಾನುವಾರ 133 ಅಡಿ 6 ಇಂಚು, ಸೋಮವಾರ 133 ಅಡಿ 9 ಇಂಚು ಆಗಿತ್ತು. ಕಳೆದ ವರ್ಷ ಈ ದಿನ ಜಲಾಶಯದಲ್ಲಿ 124 ಅಡಿ 9½ ಇಂಚು ನೀರು ಇತ್ತು. ಒಳ ಹರಿವು ಇರಲಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಲಾಶ ಯದಲ್ಲಿ 9 ಅಡಿ ನೀರು ಹೆಚ್ಚಿದ್ದು, 5 ಟಿ.ಎಂ.ಸಿ. ನೀರು ಹೆಚ್ಚು ಸಂಗ್ರಹವಿದೆ. ಸದ್ಯ ಜಲಾಶಯದಲ್ಲಿ 22.842 ಟಿಎಂಸಿ ನೀರಿನ ಸಂಗ್ರಹವಿದೆ. ಕಳೆದ ವರ್ಷ ಈ ದಿನ 17.841 ಟಿಎಂಸಿ ನೀರು ಸಂಗ್ರಹವಿತ್ತು.

ರೈತರ ಚಿತ್ತ ಭದ್ರಾ ಡ್ಯಾಂನತ್ತ : ಭತ್ತದ ಕಟಾವು ಮುಗಿಸಿಕೊಂಡಿರುವ ರೈತರು ಚಳಿಗಾಲದ ಬೆಳೆಗಾಗಿ ಭದ್ರಾ ಜಲಾಶಯದತ್ತ ಮುಖ ಮಾಡಿದ್ದಾರೆ.

ಮಲೆನಾಡಿನಲ್ಲಿ ಮಳೆ ಬಂದರೆ ಸಾಕು ನಮ್ಮ ಡ್ಯಾಂಗೆ ಎಷ್ಟು ಒಳಹರಿವು  ಬರುತ್ತದೆ ಎಂದು ರೈತರು ವಿಚಾರಿಸುತ್ತಾರೆ.

ಕಳೆದ ವರ್ಷ ಜುಲೈ ತಿಂಗಳು ಕಳೆದರೂ ಉತ್ತಮ ಮಳೆ ಇಲ್ಲದ ಕಾರಣ ಜಲಾಶಯಕ್ಕೆ ನೀರು ಹರಿದು ಬಂದಿರಲಿಲ್ಲ.

ಈ ವರ್ಷ ಜೂನ್‌ ತಿಂಗಳಲ್ಲೇ ಜಲಾಶಯಕ್ಕೆ ಒಳಹರಿವು ಆರಂಭ ಆಗಿರುವುದು ಮತ್ತು ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ನೀರು ಸಂಗ್ರಹವಿರುವುದು ಸಹಜವಾಗಿಯೇ ಅಚ್ಚುಕಟ್ಟಿನ ರೈತರಲ್ಲಿ ಹೆಚ್ಚು ವಿಶ್ವಾಸ ಮೂಡಿಸಿದೆ.

ಸಸಿ ಮಡಿ ಚೆಲ್ಲಿದ ರೈತರು : ಮಳೆಗಾಲ ಆಗಿರುವುದರಿಂದ ಭದ್ರಾ ಡ್ಯಾಂ ತುಂಬುತ್ತದೆ ಎಂಬ ಅಚಲ ನಂಬಿಕೆಯಲ್ಲಿರುವ ರೈತರು ಬೋರ್‌ವೆಲ್‌ ನೀರಿನ ಸಹಾಯದಿಂದ ಸಸಿ ಮಡಿ ಚೆಲ್ಲುವ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

ತುಂಗಭದ್ರಾ ನದಿ ನೀರು ಮತ್ತು ದೇವರಬೆಳಕೆರೆ ಪಿಕಪ್‌ ಡ್ಯಾಂ ನೀರಿನ ಆಶ್ರಿತ ರೈತರು ಈಗಾಗಲೇ ಸಸಿ ಮಡಿ ಚೆಲ್ಲಿದ್ದಾರೆ.

error: Content is protected !!