ಹಳ್ಳಿಗೆ ಹೋಗಿ, ಕೆಲಸ ಮಾಡಿದ್ದನ್ನು ವಾಟ್ಸ್ಅಪ್‌ಗೆ ಕಳಿಸಿ

ಕೆಲಸ ಮಾಡದೇ ಇದ್ದರೆ ಕ್ರಮ ತೆಗೆದುಕೊಳ್ಳುವುದಾಗಿ ಪಶುಪಾಲನಾ ಸಚಿವ ಚವ್ಹಾಣ್ ಎಚ್ಚರಿಕೆ

ದಾವಣಗೆರೆ, ಜೂ. 15 -ಪಶುಪಾಲನಾ ಇಲಾಖೆಯ ವೈದ್ಯರು ಹಳ್ಳಿಗಳಿಗೆ ಹೋಗು ತ್ತಿಲ್ಲ ಎಂಬ ದೂರುಗಳು ತಮಗೆ ಬರುತ್ತಿದ್ದು, ಇನ್ನು ಮುಂದೆಯೂ ಇದೇ ವರ್ತನೆ ಮುಂದುವರೆಸಿದರೆ ಕ್ರಮ ತೆಗೆದು ಕೊಳ್ಳುವುದಾಗಿ ಪಶುಪಾಲನಾ ಇಲಾಖೆಯ ಸಚಿವ ಪ್ರಭು ಚವ್ಹಾಣ್ ಎಚ್ಚರಿಸಿದ್ದಾರೆ.

ತಮ್ಮ ಅಧ್ಯಕ್ಷತೆಯಲ್ಲಿ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ಎಚ್ಚರಿಕೆ ನೀಡಿದ್ದಾರೆ.

ವೈದ್ಯರು ಆಸ್ಪತ್ರೆಗಳಿಗೆ ಬರುತ್ತಿಲ್ಲ. ಹೊಂದಾಣಿಕೆಯ ಮೇಲೆ ವಾರದಲ್ಲಿ ಮೂರು ದಿನ ಗೈರಾಗುತ್ತಿದ್ದಾರೆ, ದನ – ಕರುಗಳನ್ನು ಉದಾಸೀನ ಮಾಡುವ ಬಗ್ಗೆ ಜನರು ಆಕ್ಷೇಪಿಸುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.

ಉಪ ನಿರ್ದೇಶಕರು ತಾಲ್ಲೂಕುಗಳಿಗೆ ಭೇಟಿ ನೀಡಬೇಕು. ಸಹಾಯಕ ನಿರ್ದೇಶಕರು ಗ್ರಾಮಗಳಿಗೆ ತೆರಳಬೇಕು. ಉಪ ನಿರ್ದೇಶಕರು ಹಠಾತ್ ಭೇಟಿ ನೀಡಿ ವೈದ್ಯರು ಆಸ್ಪತ್ರೆಗಳಿಗೆ ಬರುತ್ತಿರುವುದನ್ನು ಖಚಿತ ಪಡಿಸಿಕೊಳ್ಳಬೇಕು. ಮತ್ತೆ ದೂರು ಬಂದರೆ ಸುಮ್ಮನಿರುವುದಿಲ್ಲ ಎಂದವರು ಹೇಳಿದರು.

ಕೇವಲ ಕಾಗದದ ಮೇಲೆ ವರದಿ ಸಲ್ಲಿಸಿದರೆ ಸಾಲದು. ಪ್ರಾಯೋಗಿಕವಾಗಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದ ಅವರು, ಸಹಾಯಕ ನಿರ್ದೇಶಕರು ಗ್ರಾಮಗಳಿಗೆ ಹೋಗಿ ಕೆಲಸ ಮಾಡಿದ ಬಗ್ಗೆ ವಾಟ್ಸ್‌ಅಪ್‌ ಮೂಲಕ ಫೋಟೋ ಹಾಗೂ ವಿವರಗಳನ್ನು ನೇರವಾಗಿ ತಮ್ಮ ಮೊಬೈಲ್‌ಗೆ ಕಳಿಸಬೇಕು ಎಂದು ತಾಕೀತು ಮಾಡಿದರು.

ನಾನು ಹಲವು ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ 17-18 ಜನರನ್ನು ಅಮಾನತ್ತುಗೊಳಿಸಿದ್ದೇನೆ. ಇದೇ ರೀತಿ ಉಪ ನಿರ್ದೇಶಕರೂ ಸಹ ಹಠಾತ್ ಭೇಟಿ ನೀಡಿ ಕ್ರಮ ತೆಗೆದುಕೊಳ್ಳಬೇಕು ಎಂದವರು ತಿಳಿಸಿದರು.

ವಕ್ಫ್ ಆಸ್ತಿಗಳನ್ನು ರಕ್ಷಿಸಿ : ವಕ್ಫ್ ಆಸ್ತಿಗಳಿಗೆ ಕಾಂಪೌಂಡ್ ವಾಲ್ ನಿರ್ಮಿಸುವ ಮೂಲಕ ಸಂರಕ್ಷಣೆ ಮಾಡಬೇಕು. ವಕ್ಫ್ ಕೌನ್ಸಿಲ್ ಸಾಲ ಯೋಜನೆಯನ್ನು ಅನುಪಾಲಿಸಬೇಕು. ಸರ್ಕಾರದ ಯೋಜನೆಗಳನ್ನು ಪ್ರತಿ ಅರ್ಹರಿಗೆ ತಲುಪಿಸಬೇಕು ಎಂದು ವಕ್ಫ್ ಅಧಿಕಾರಿಗಳಿಗೆ ವಕ್ಫ್ ಸಚಿವ ಪ್ರಭು ಚವ್ಹಾಣ್ ಸೂಚಿಸಿದ್ದಾರೆ. ಅಧಿಕಾರಿ ಗಳು ನಿಯಮಿತವಾಗಿ ತಾಲ್ಲೂಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಹಾಗೂ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕೆಂದು ಅವರು ತಿಳಿಸಿದ್ದಾರೆ. ವಕ್ಫ್ ಅಧಿಕಾರಿ ಸೈಯದ್ ಮೊಅಜಂ ಅವರು ಸಚಿವರಿಗೆ ಪ್ರಗತಿ ವರದಿ ಸಲ್ಲಿಸಿದರು. 

ಪಶು ವೈದ್ಯರ ಕೊರತೆ ನಿವಾರಿಸಲು ಪಶು ವೈದ್ಯಕೀಯ ವಿದ್ಯಾರ್ಥಿಗಳನ್ನು ಇಂಟರ್ನ್‌ಶಿಪ್ ಮೇಲೆ ನೇಮಿಸಿಕೊಳ್ಳಬೇಕು. ಇದರಿಂದ ವೈದ್ಯರ ಕೊರತೆ ನೀಗುವ ಜೊತೆಗೆ ಅವರಿಗೆ ತರಬೇತಿಯೂ ಆಗುತ್ತದೆ ಎಂದು ಸಚಿವ ಚವ್ಹಾಣ್ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಇಲಾಖೆಯ ಉಪ ನಿರ್ದೇಶಕ ಭಾಸ್ಕರ್ ನಾಯಕ್, ಜಿಲ್ಲೆಯಲ್ಲಿ 612 ಮಂಜೂರಾದ ಹುದ್ದೆಗಳ ಪೈಕಿ 303 ಮಾತ್ರ ಭರ್ತಿ ಇದ್ದು, 309 ಖಾಲಿ ಇವೆ. ಡಿ ದರ್ಜೆಯ 237 ಹುದ್ದೆಗಳಲ್ಲಿ 174 ಖಾಲಿ ಇವೆ ಎಂದು ತಿಳಿಸಿದರು.

86 ಹುದ್ದೆಗಳು ಹೊರ ಗುತ್ತಿಗೆ ಮೇರೆಗೆ ಕಾರ್ಯ ನಿರ್ವಹಿಸುತ್ತಿದ್ದು, 20 ಸಂಸ್ಥೆಗಳಲ್ಲಿ ಒಬ್ಬ ಡಿ ದರ್ಜೆ ಸಿಬ್ಬಂದಿಯೂ ಇಲ್ಲದೇ ದೈನಂದಿನ ಕೆಲಸ ಗಳಿಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.

ವಿಮೆ ರಹಿತ ಜಾನುವಾರುಗಳು ಸಾವನ್ನಪ್ಪಿದಾಗ ಸರ್ಕಾರದಿಂದ 10 ಸಾವಿರ ರೂ.ಗಳ ಪರಿಹಾರ ನೀಡಲಾಗುತ್ತದೆ. ಆದರೆ, ಕಳೆದ ಎರಡು ವರ್ಷಗಳಿಂದ ಸರ್ಕಾರದಿಂದ ಪರಿಹಾರ ಬಂದಿಲ್ಲ. ಒಟ್ಟು 1,405 ಪ್ರಸ್ತಾವನೆಗಳು ಬಾಕಿ ಇದ್ದು, ಇದಕ್ಕೆ 1.4 ಕೋಟಿ ರೂ.ಗಳ ಅಗತ್ಯವಿದೆ ಎಂದು ನಾಯಕ್ ಇದೇ ಸಂದರ್ಭದಲ್ಲಿ ತಿಳಿಸಿದರು.

ಗೋಮಾತಾ ಮೇರಿ ಮಾತಾ : ಗೋವುಗಳ ಸುರಕ್ಷತೆಯ ಜವಾಬ್ದಾರಿ ನಿಮ್ಮ ಮೇಲಿದೆ. ಗೋಮಾತಾ ಮೇರಿ ಮಾತಾ ಎಂಬುದು ಸರ್ಕಾರದ ನಿಲುವಾಗಿದೆ ಎಂದು ಸಚಿವ ಚವ್ಹಾಣ್ ಈ ಸಂದರ್ಭದಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ನಾಲ್ಕು ಗೋಶಾಲೆಗಳಿದ್ದು, ಅವು ಗಳ ಮೂಲಕ ಗೋವುಗಳನ್ನು ನಿರ್ವಹಿಸಲಾಗುತ್ತಿದೆ. ಇವುಗಳಿಗೆ ಸರ್ಕಾರದ ವತಿಯಿಂದ 12 ಲಕ್ಷ ರೂ. ನೀಡಲಾಗಿದೆ ಎಂದು ಭಾಸ್ಕರ್ ನಾಯಕ್ ತಿಳಿಸಿದ್ದಾರೆ.

ಸಭೆಯಲ್ಲಿ ಕುರಿ ಮತ್ತು ಉಣ್ಣೆ ಯೋಜನಾಧಿಕಾರಿ ಡಾ.ಚಂದ್ರ ಶೇಖರ್ ಸುಂಕದ್, ತಾಲ್ಲೂಕು ಪಶುಪಾಲನಾ ಇಲಾಖೆಯ ಅಧಿಕಾರಿಗಳಾದ ಡಾ. ವೀರೇಶ್, ಡಾ.ದೇವೇಂದ್ರಪ್ಪ, ಡಾ.ಲಿಂಗರಾಜ್, ವಿಜ್ಞಾನಿ ಡಾ.ನಾಗರಾಜ್, ಡಾ.ಶಿವಕುಮಾರ್, ಡಾ.ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!