ಕೇಂದ್ರೀಕೃತ ಕಮ್ಯಾಂಡ್ ಕಂಟ್ರೋಲ್ ರೂಂ ಗೆ ಚಾಲನೆ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ
ದಾವಣಗೆರೆ, ಜೂ.15- ಅಪರಾಧ ಪ್ರಕರಣಗಳಿಗೆ ಎಡೆ ಮಾಡಿಕೊಡುವ ಮಟ್ಕಾ, ಕ್ಲಬ್ ಇತರೆ ಆರ್ಥಿಕ ಅಪರಾಧ ಗಳಾದ ಬ್ಯಾಂಕ್ ಖಾತೆಯಿಂದ ಹಣ ದೋಚುವುದು, ಕ್ರೆಡಿಟ್ ಕಾರ್ಡ್ ವಂಚನೆ, ಎಟಿಎಂ ಮೂಲಕ ಹಣ ದೋಚುವುದು ಹೀಗೆ ವಿವಿಧ ಸೈಬರ್ ಕ್ರೈಂಗಳ ಕುರಿತು ನಿಗಾ ವಹಿಸಲು ಸೂಚನೆ ನೀಡಲಾಗಿದ್ದು, ಇಲಾಖೆಯು ಅತ್ಯಾ ಧುನಿಕ ಟೆಕ್ನಾಲಜಿ ಬಳಕೆ ಮಾಡುವಂತೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಇಲಾಖಾ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಪರಾಧಿಗಳಿಗಿಂತ ಮುಂದುವರೆದ ಟೆಕ್ನಾಲಜಿ ಬಳಕೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು.
ಲಾಕ್‍ಡೌನ್ ತೆರವುಗೊಂಡ ಬಳಿಕ ಅಪರಾಧ ಪ್ರಕರಣಗಳು ಹೆಚ್ಚುವ ಸಂಭವ ಹೆಚ್ಚಿದ್ದು, ನಿಯಂತ್ರಣ ಕ್ರಮಗಳ ಬಗ್ಗೆ ಸೂಚನೆ ನೀಡಲಾಗಿದೆ. ಜೊತೆಗೆ ಅಪರಾಧ ತಡೆಗೆ ವಿಶೇಷ ಆಂದೋಲನ ಮಾಡುವಂತೆ ಸೂಚಿಸಲಾಗಿದೆ.
ಹೊರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳು ಬಳಸಬಹುದಾದ ಮಾದಕ ವಸ್ತುಗಳಿಗೆ ಸಂಬಂಧಿಸಿದಂತೆ ಹಾಗೂ ಡಾರ್ಕ್‍ವೆಬ್, ಹ್ಯಾಕಿಂಗ್ ಇತರೆ ಅಪರಾಧ ಪತ್ತೆಗೆ ಒಂದು ತಂಡ ರಚಿಸಲಾಗುವುದು. ಜೊತೆಗೆ ಸುಧಾರಣಾ ಕ್ರಮವಾಗಿ ಇಂಟೆಲಿಜೆನ್ಸ್ ಪೊಲೀಸಿಂಗ್ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕೋವಿಡ್ ಹಿನ್ನೆಲೆಯಲ್ಲಿ ಇಲಾಖೆ ಕ್ರಮಗಳ ಬಗ್ಗೆ ಪರಿಶೀಲಿಸಿದ್ದು, ಸೀಲ್‍ಡೌನ್, ಕ್ವಾರಂಟೈನ್ ಮತ್ತು ಸೋಂಕಿನ ಮೂಲ ಪತ್ತೆ ಹಚ್ಚುವಲ್ಲಿ ಹಾಗೂ ಚೆಕ್‍ಪೋಸ್ಟ್‍ಗಳಲ್ಲಿ ಪೊಲೀಸ್ ಇಲಾಖೆ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ ಎಂದರು.
ಕ್ಯಾಮೆರಾ ಮೂಲಕ ನಗರದ ಟ್ರಾಫಿಕ್ ನಿಯಂತ್ರಣ : ಜಿಲ್ಲೆಯಲ್ಲಿ ಸ್ಮಾರ್ಟ್ಸಿಟಿ ವತಿಯಿಂದ ವಿನೂತನವಾಗಿ ಕೇಂದ್ರೀಕೃತ ಕಮ್ಯಾಂಡ್ ಮತ್ತು ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಸುಮಾರು 28 ಜಂಕ್ಷನ್ಗಳಲ್ಲಿ ಕ್ಯಾಮೆರಾ ಅಳವಡಿಸಿ, ಕಂಟ್ರೋಲ್ ರೂಂನಿಂದ ಈ ಕ್ಯಾಮೆರಾಗಳ ಮೂಲಕ ಟ್ರಾಫಿಕ್ ನಿಯಂತ್ರಣ, ಆಟೋಮ್ಯಾಟಿಕ್ ಸಿಗ್ನಲ್ಗಳು, ಅಪರಾಧಗಳ ಪ್ರಕರಣಗಳಿಗೆ ಸಂಬಂಧಿಸಿ ದಂತೆ ಸಂಪೂರ್ಣವಾಗಿ ವೀಕ್ಷಣೆ ಮಾಡಿ ವರದಿ ಮಾಡಲಾಗುವುದು. ದಾವಣಗೆರೆಯಲ್ಲಿ ಆಧುನಿಕವಾಗಿ ಕಮ್ಯಾಂಡ್ ರೂಂನಲ್ಲಿ ಕೆಲಸ ಆರಂಭಿಸಲಾಗಿದೆ. ಈ ವ್ಯವಸ್ಥೆ ಉತ್ತಮವಾಗಿದ್ದು ಇದರ ಬಳಕೆ ನಿರಂತರವಾಗಿ ಆಗಬೇಕು. ಈ ಕೇಂದ್ರದ ನಿರ್ವಹಣೆಗೆ ಸಂಬಂಧಿಸಿ ದಂತೆ ಒಂದಿಷ್ಟು ಸಲಹೆ, ಸೂಚನೆಗಳನ್ನು ನೀಡಿದ್ದೇನೆ.
360 ಡಿಗ್ರಿ ಕ್ಯಾಮೆರಾ ಬಳಕೆ, ಫೇಸ್ ರೀಡಿಂಗ್ ಕ್ಯಾಮೆರಾಗಳು, ಥರ್ಮಲ್ ಎಂಗೇಜಿಂಗ್, ನಂಬರ್ ಪ್ಲೇಟ್ ಪತ್ತೆ ಹಚ್ಚುವ ಕ್ಯಾಮೆರಾಗಳನ್ನು ಅಳವಡಿಸಲು ಮತ್ತು ನಿರಂತರವಾಗಿ ನಿರ್ವಹಣೆ ಮಾಡುವ ಕುರಿತಾಗಿ ಸಲಹೆ ನೀಡಿದ್ದೇನೆ. ಸ್ಮಾರ್ಟ್ಸಿಟಿ ವತಿಯಿಂದ 3 ಕಮ್ಯಾಂಡೋ ವಾಹನಗಳನ್ನು ನೀಡಲಾಗಿದ್ದು, ರಕ್ಷಣೆಗೆ ಸಂಬಂಧಿಸಿದಂತೆ ಇವು ಸಹಕಾರಿಯಾಗಲಿವೆ ಎಂದರು.
ಅಪರಾಧ ಸಂಖ್ಯೆ ಕಡಿತ : ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ರೌಡಿಸಂಗೆ ಸಂಬಂಧಿಸಿದಂತೆ 2018 ರಲ್ಲಿ 1,783 ಜನರನ್ನು ಹಾಗೂ 2019 ರಲ್ಲಿ 1,600 ಜನರನ್ನು ಮುಂಜಾಗ್ರತಾ ಕ್ರಮವಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಕೋಮು ಗಲಭೆಗೆ ಸಂಬಂಧಿಸಿದಂತೆ 2018 ರಲ್ಲಿ 92 ಪ್ರಕರಣಗಳು ದಾಖಲಾದರೆ 2019 ರಲ್ಲಿ 300 ಪ್ರಕರಣಗಳನ್ನು ದಾಖಲಿಸಲಾಗಿದೆ. ಒಟ್ಟಾರೆ ಎಲ್ಲ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ 2018 ರಲ್ಲಿ 6279 ಪ್ರಕರಣಗಳನ್ನು ದಾಖಲಿಸಿದ್ದರೆ 2019 ರಲ್ಲಿ 4358 ಪ್ರಕರಣಗಳನ್ನು ದಾಖಲಿಸಲಾಗಿದೆ. 2020 ನೇ ಸಾಲಿನಲ್ಲಿ 1728 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಎಫ್‍ಎಸ್‍ಎಲ್ ಲ್ಯಾಬ್ : ಅಪರಾಧ ಪತ್ತೆಯಲ್ಲಿ ಮುಖ್ಯ ಪಾತ್ರ ವಹಿಸುವ ಎಫ್‍ಎಸ್‍ಎಲ್ ಲ್ಯಾಬ್ ಸಶಕ್ತೀಕರಣಕ್ಕೆ ಒತ್ತು ನೀಡಲಾಗುವುದು. ಎಫ್‍ಎಸ್‍ಎಲ್ ಪರೀಕ್ಷೆಗಾಗಿ ಬೇರೆಡೆ ಕಳುಹಿಸಿ ವರದಿಗಾಗಿ ಕಾಯುವುದರಿಂದ ಪತ್ತೆ ವಿಳಂಬ ಆಗುತ್ತದೆ. ಈ ನಿಟ್ಟಿನಲ್ಲಿ ದಾವಣಗೆರೆ ವಲಯ ವ್ಯಾಪ್ತಿಯಲ್ಲಿ ಅತ್ಯಾಧುನಿಕ ಉಪಕರಣಗಳುಳ್ಳ ಲ್ಯಾಬ್ ತೆರೆಯುವ ಬಗ್ಗೆ ಚಿಂತಿಸಲಾಗಿದೆ. ಸೆಲ್ ಪೊಲೀಸ್ ಠಾಣೆಗಳನ್ನು ಆಧುನೀಕರಿಸುವ ಮತ್ತು ಸಶಕ್ತಗೊಳಿಸುವ ಚಿಂತನೆ ಇದೆ ಹಾಗೂ ಪೊಲೀಸ್ ಅಧಿಕಾರಿಗಳ ಕ್ವಾಟ್ರರ್ಸ್ ನಿರ್ಮಾಣಕ್ಕೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಪ್ರೊ.ಲಿಂಗಣ್ಣ, ಐಜಿಪಿ ರವಿ.ಎಸ್, ಎಸ್‍ಪಿ ಹನುಮಂತರಾಯ, ಎಎಸ್‍ಪಿ ರಾಜೀವ್ ಇದ್ದರು.