ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಂದ ನಂತರವೇ ಶಾಲೆ ಪ್ರಾರಂಭಿಸಿ

ಪೋಷಕರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಒತ್ತಾಯ

ಮಲೇಬೆನ್ನೂರು, ಜೂ.13- ಮಾರಕ ಕೊರೊನಾ ವೈರಸ್‌ನಿಂದಾಗಿ ಇಡೀ ಜಗತ್ತು ತಲ್ಲಣಗೊಂಡಿರುವ ಕಾರಣ ಮತ್ತು ದಿನೇ ದಿನೇ ವೈರಸ್‌ ಹರಡುತ್ತಿರು ವುದರಿಂದ ಶಾಲೆಗಳನ್ನು ಸದ್ಯಕ್ಕೆ ತೆರೆಯುವುದು ಬೇಡ ಎಂದು ಜಿಗಳಿ ಗ್ರಾಮದ ಪೋಷಕರು ಮತ್ತು ಎಸ್‌ಡಿಎಂಸಿಯವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕೋವಿಡ್‌-19 ಹಿನ್ನೆಲೆಯಲ್ಲಿ ಗ್ರಾಮದ ಉನ್ನತೀ ಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆ ಪ್ರಾರಂಭಿಸುವ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಭಿಪ್ರಾಯ ಸಂಗ್ರಹಕ್ಕಾಗಿ ಇಂದು ಕರೆದಿದ್ದ ಪೋಷಕರ ಹಾಗೂ ಎಸ್‌ಡಿಎಂಸಿ ಸಭೆಯಲ್ಲಿ ಆಗಸ್ಟ್‌ನಲ್ಲಿ ಶಾಲೆ ಪ್ರಾರಂಭಿಸಿದರೆ ಸೂಕ್ತ ಎಂಬ ನಿರ್ಧಾರ ಕೈಗೊಳ್ಳಲಾಯಿತು.

ಜುಲೈ ತಿಂಗಳಲ್ಲಿ ಶಾಲೆ ಪ್ರಾರಂಭ ಬೇಡ. ಒಂದು ವೇಳೆ ಸರ್ಕಾರ ಪ್ರಾರಂಭ ಮಾಡಿದರೂ ನಾವು ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದ ಪೋಷಕರು, ಆಗಸ್ಟ್‌ನಲ್ಲಿ ಕೊರೊನಾ ನಿಯಂತ್ರಣ ನೋಡಿಕೊಂಡು ಶಾಲೆ ಪ್ರಾರಂಭಿಸಲಿ ಎಂಬ ಸಲಹೆ ನೀಡಿದರು.

ಶಾಲೆ ಪ್ರಾರಂಭವಾದ ನಂತರವೂ ಪಾಳಿ ಪದ್ಧತಿಯಂತೆ ಅಂದರೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ 1ನೇ ತರಗತಿಯಿಂದ 5ನೇ ತರಗತಿವರೆಗೆ ಮತ್ತು ಮಧ್ಯಾಹ್ನ 1 ರಿಂದ ಸಂಜೆ 5 ಗಂಟೆವರೆಗೆ 6ನೇ ತರಗತಿಯಿಂದ 8 ನೇ ತರಗತಿವರೆಗೆ ತರಗತಿ ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಲೆ ಆವರಣ ಸ್ವಚ್ಛತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್‌ ಬಳಸಿ ಕೊಠಡಿ ಸ್ವಚ್ಛಗೊಳಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ವಾರಕ್ಕೊಮ್ಮೆ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸುವ ಬಗ್ಗೆ ಎಸ್‌ಡಿಎಂಸಿ ಯವರು ಗಮನ ಹರಿಸಬೇಕೆಂದರು. 

ಎಸ್‌ಡಿಎಂಸಿ ಅಧ್ಯಕ್ಷ ಟಿ.ಎಸ್. ಗದಿಗೆಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಜಿ. ಆನಂದಪ್ಪ, ವೈ ರುದ್ರಗೌಡ, ಜಿ.ಪಿ. ಹನುಮಗೌಡ, ಕೃಷ್ಣಕುಮಾರ್‌, ಎಸ್‌ಡಿಎಂಸಿ ಸದಸ್ಯರಾದ ಕೆ.ಎಸ್. ಮಾಲತೇಶ್, ಜಿ.ಆರ್. ಚಂದ್ರಪ್ಪ, ಶ್ರೀಮತಿ ರಶ್ಮಿ ವಿಜಯಭಾಸ್ಕರ್‌, ಶ್ರೀಮತಿ ಚಂದ್ರಮ್ಮ, ಶ್ರೀಮತಿ ಉಮಾ, ಶ್ರೀಮತಿ ಮೀನಾಕ್ಷಮ್ಮ, ಮುಖ್ಯ ಶಿಕ್ಷಕ ಕೆ. ಕರಿಬಸಪ್ಪ, ಶಿಕ್ಷಕರಾದ ನಾಗೇಶ್‌, ಕೆ.ಡಿ. ಗುಡ್ಡಪ್ಪ, ಶ್ರೀನಿವಾಸ್‌ ರೆಡ್ಡಿ, ಎಂ.ಬಿ. ಮಲ್ಲಿಕಾರ್ಜುನ್‌ ಭಾಗವಹಿಸಿದ್ದರು.

error: Content is protected !!