22 ಕೆರೆಗಳಿಗೆ 22ರಂದೇ ಜಲ ಯೋಗ

ದಾವಣಗೆರೆ, ಜೂ. 13 – ಬರುವ ಜೂನ್ 22ರಂದು ಇಪ್ಪತ್ತೆರಡು ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲೇಬೇಕು. ಇದಕ್ಕಾಗಿ ನೀರಾವರಿ ನಿಗಮ, ಹೆದ್ದಾರಿ ಹಾಗೂ ಬೆಸ್ಕಾಂ ಸೇರಿದಂತೆ ಸಂಬಂಧಿಸಿದ ಎಲ್ಲರೂ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಸಂಸದ ಜಿ.ಎಂ. ಸಿದ್ದೇಶ್ವರ ತಾಕೀತು ಮಾಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ 22 ಕೆರೆಗಳಿಗೆ ನೀರು ತುಂಬಿಸುವ ಕುರಿತ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ನಾನು ಹಾಗೂ ಶಾಸಕರು ಅಂದು ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಸ್ವಿಚ್ ಒತ್ತುವ ಮೂಲಕ ಚಾಲನೆ ನೀಡುತ್ತೇವೆ. ಇದರಲ್ಲಿ ಯಾವುದೇ ವಿಳಂಬವಾದರೂ ಸಹಿಸುವುದಿಲ್ಲ. ಅಷ್ಟರೊಳಗೆ ಬಾಕಿ ಉಳಿದಿರುವ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಿರ ಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಹೆದ್ದಾರಿ ಕಾಮಗಾರಿಯ ಹಿನ್ನೆಲೆಯಲ್ಲಿ ಶಿಫ್ಟ್ ಆಗಿರುವ ಪೈಪ್‌ಲೈನ್ ಹಾಗೂ ಹಳೆಯ ಪೈಪ್‌ಲೈನ್ ಜೋಡಿಸಿಯೇ ನೀರು ಹರಿಸಬೇಕಿದೆ. ನದಿಗೆ ಅಡ್ಡವಾಗಿ ನಿರ್ಮಿಸಲಾಗಿರುವ ಬ್ಯಾರೇಜ್ ನೀರು ಸಮರ್ಪಕವಾಗಿ ಪಂಪ್‌ಹೌಸ್‌ಗೆ ಬರುವಂತೆ ಮಾಡಬೇಕಿದೆ. ಪಂಪ್‌ಹೌಸ್‌ನ 250 ಮೀಟರ್ ಉದ್ದದ ಕಾಲುವೆಯಲ್ಲಿರುವ ಒಂದು ಅಡಿ ಶಿಲ್ಟ್ ತೆಗೆಯಬೇಕಿದೆ. ವಿದ್ಯುತ್ ನಿಗಮದ ಮೂಲಕ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ತೆಗೆದುಕೊಳ್ಳ ಬೇಕಿದೆ ಎಂದವರು ಅಧಿಕಾರಿಗಳಿಗೆ ತಿಳಿಸಿದರು. ಈ ವರ್ಷ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ಬಾರಿ ಕೆರೆಗಳಿಗೆ ನೀರು ತುಂಬಿಸುವ ಪೂರ್ಣ ವಿಶ್ವಾಸವಿದೆ ಎಂದ ಅವರು, ನಿಯಮಗಳ ಪ್ರಕಾರ ಒಂದು ಕೆರೆಯಲ್ಲಿ ಗರಿಷ್ಠ ಶೇ.75ರಷ್ಟು ಮಾತ್ರ ನೀರು ತುಂಬಬಹುದಾಗಿದೆ. ರೈತರೂ ಇದಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.

ಕೆರೆಗೆ ನೀರು ತುಂಬಿಸುವ ಯೋಜನೆಯ ಪ್ರಗತಿಯ ಕುರಿತು ಪ್ರತಿನಿತ್ಯ ನಿಗಾ ವಹಿಸುವುದಾಗಿ ಈ ಸಂದರ್ಭ ದಲ್ಲಿ ತಿಳಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಶಾಮನೂರು ಬಳಿ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳುವ ಕುರಿತ ತೊಡಕನ್ನು ತಾವೇ ನಿಂತಿದ್ದು ಬಗೆಹರಿಸುವುದಾಗಿ ಹೇಳಿದರು. 22 ಕೆರೆ ಯೋಜನೆಯ ವಾರ್ಷಿಕ ನಿರ್ವಹ ಣೆಯ ಗುತ್ತಿಗೆ ಜುಲೈ ತಿಂಗಳಲ್ಲಿ ಅಂತ್ಯವಾಗಲಿದೆ. ಮುಂ ದಿನ ವರ್ಷದ ಗುತ್ತಿಗೆಗಾಗಿ ಈಗಲೇ ಟೆಂಡರ್ ಕರೆಯು ವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಶಾಸಕ ಪ್ರೊ. ಲಿಂಗಣ್ಣ ಮಾತನಾಡಿ, ಪದೇ ಪದೇ ವಿದ್ಯುತ್ ನಿಲುಗಡೆಯಾಗುತ್ತಿದೆ. ಇದನ್ನು ತಪ್ಪಿಸಿ ನಿರಂತರವಾಗಿ ವಿದ್ಯುತ್ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ 22 ಕೆರೆ ಹೋರಾಟ ಸಮಿತಿಯ ಅಧ್ಯಕ್ಷ ಡಾ. ಮಂಜುನಾಥ ಗೌಡ, ರಾಜನಹಳ್ಳಿ ಪಂಪ್‌ಹೌಸ್ ಹಾಗೂ ಮಲ್ಲಶೆಟ್ಟಿಹಳ್ಳಿಯ ಪಂಪ್‌ಹೌಸ್‌ನ ಮೂರೂ ಮೋಟರ್‌ಗಳು ನಿರಂತರವಾಗಿ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಪದ್ಮಾ ಬಸವಂತಪ್ಪ, ಎಎಸ್‌ಪಿ ರಾಜೀವ್, ಎಸಿ ಮಮತಾ ಹೊಸಗೌಡರ್, ದಾವಣಗೆರೆ ತಹಶೀಲ್ದಾರ್ ಗಿರೀಶ್, ಹರಿಹರ ತಹಶೀಲ್ದಾರ್ ರಾಮಚಂದ್ರಪ್ಪ, ನೀರಾವರಿ ನಿಗಮದ ಇ.ಇ. ಮಲ್ಲೇಶ್, ಬೆಸ್ಕಾಂ ಅಧಿಕಾರಿ ಎಸ್.ಕೆ. ಪಾಟೀಲ್,  ಎನ್.ಹೆಚ್.ಎ.ಐ. ಜಂಟಿ ಸಲಹೆಗಾರ ಮಲ್ಲಿಕಾರ್ಜುನ ಮತ್ತಿತರರು ಉಪಸ್ಥಿತರಿದ್ದರು.

error: Content is protected !!