ಗಿಡ ನೆಡುವುದು ಪರಿಸರ ದಿನಕ್ಕೆ ಸೀಮಿತವಾಗದಿರಲಿ

ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಸಲಹೆ

ಹರಿಹರ, ಜೂ.14- ಭೂಮಿ ಮೇಲಿರುವ ಜೀವಿಗಳಿಗೆ ಪರಿಸರವೇ ಜೀವಾಳ. ಗಿಡ ನೆಡುವುದು ಕೇವಲ ಪರಿಸರ ದಿನಾಚರಣೆಗೆ ಮಾತ್ರ ಸೀಮಿತವಾಗದಿರಲಿ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಸಲಹೆ ನೀಡಿದರು.

ಹರಿಹರದ ವೀರಶೈವ ಪಂಚಮಸಾಲಿ ಜಗ ದ್ಗುರು ಪೀಠದ ಆವರಣದಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಮಹಿಳಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಸಸಿ ನೆಟ್ಟು ಚಾಲನೆ ನೀಡಿ ಮಾತನಾಡಿದರು.

ಮುಂದಿನ ಪೀಳಿಗೆಗೆ ಶುದ್ಧವಾದ ಗಾಳಿ, ನೀರು ಸಿಗಬೇಕಾದರೆ ನಾವೆಲ್ಲರೂ ಈಗಲೇ ಎಚ್ಚೆತ್ತುಕೊಳ್ಳಬೇಕು. ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಪೋಷಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕೆಂದರು.

ನಮಗೆ ಪ್ರಕೃತಿ ಏನು ಕೊಡುತ್ತದೆ ಎನ್ನುವುದಕ್ಕಿಂತ ನಾವು ಪ್ರಕೃತಿಗೆ ಏನು ಕೊಡುಗೆ ಕೊಟ್ಟಿದ್ದೇವೆ ಎಂಬುದನ್ನು ಅರಿಯಬೇಕು ಎಂದರು. ಸಾಲು ಮರದ ತಿಮ್ಮಕ್ಕ ಅವರ ವೃಕ್ಷ ಬೆಳೆಸುವ ಸೇವೆ ಅವಿಸ್ಮರಣೀಯ. ಮರಗಳಿಗೂ ಭಾವನೆಗಳಿವೆ. ಅಂತಹ ಭಾವನೆಗಳಿಗೆ ಧಕ್ಕೆಯಾಗದಂತೆ ನಾವುಗಳು ನಡೆದುಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಪೀಠದ ಪ್ರಧಾನ ಕಾರ್ಯದರ್ಶಿ ಬಿ.ಸಿ. ಉಮಾಪತಿ, ಸಮಾಜದ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ. ಲೋಕೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಶಿನಾಥ್‌, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಶ್ಮಿ ನಾಗರಾಜ್, ನಗರಾಧ್ಯಕ್ಷೆ ವಾಣಿ ಗುರು, ಶಶಿಕಲಾ ಸಿದ್ಧಲಿಂಗಪ್ಪ, ಯುವ ಘಟಕದ ಕೆ. ಶಿವಕುಮಾರ್, ನಗರಾಧ್ಯಕ್ಷ ಕೈದಾಳ ಶಿವಶಂಕರ್, ಗೌರಮ್ಮ ಐಗೂರು, ನಾಗವೇಣಿ ಎಸ್‌.ಎನ್. ಚಂದ್ರಶೇಖರ್‌, ಸ್ವರೂಪ ಅಂಗಡಿ, ಬಾದಾಮಿ ಜಯ್ಯಣ್ಣ ಮತ್ತಿತರರಿದ್ದರು.

error: Content is protected !!