ಗುಡಿಯಾಗುವುದಿಲ್ಲ ಮನವೇ
ನಿನ್ನೊಳಮನೆಯು :
ಅಲ್ಲಿ ಭ್ರಷ್ಟಾಚಾರಿಯಿದ್ದರೆ!
ಭ್ರಷ್ಟವದು : ಕೋಪ
ಮದ ಮತ್ಸರ ದ್ವೇಷವು
ನಾನು ನನ್ನದು ನನ್ನಿಂದ
ಎಂಬ ನಿನ್ನ ಬೆವರ ಶ್ರಮವಿರದ ಏಕತ್ವ
ಸ್ಥಾಪನೆಯ ನಿನ್ನ ವಿಜೃಂಭಣೆಯು
ಸ್ವಾರ್ಥತನದ ಶೀತಲ ಕ್ರೌರ್ಯವು!
ಬಿಡು ಭ್ರಷ್ಟನನು ಹೊರದೂಡು
ಒಳಗೆ ನೆಲೆಯೂರಿಸಬೇಡ ಕಳಿಸು
ಒಳಬರದಂತೆ ಬಿಗಿಯಾಗಿ ಅಗುಣಿ ಹಾಕು
ನಿನ್ನೊಳಮನೆಯಲಿ ಸದಾ
ನೆಲೆಸಲಿ ದೈವೀಕ ಸೊಬಗು!
ಬಾಗುವುದರಿಂದ ಸುಕೃತಿ
ಭೇದವಿಲ್ಲದ್ದು ಪ್ರಕೃತಿ!
ಬಾಗು ಮನವೇ ಬೆಳಕಿಗಾಗಿ
ಬೆಳಕನ್ನು ಕಂಡು ಕರುಬಬೇಡ
ಮನ ಮನ ಸರಿಗಮವಾಗದೆ
ನಾದವಿಲ್ಲ ನಾಡಿಗೆ!
ಕಲ್ಯಾಣವಾಗಲು ಕಂಕಣ ಕಟ್ಟು
ಬಾಗಿನವಾಗು ಮನವೇ ಸುಮ್ಮನೆ ಬೆಳಗು!
ನಿನಗೆ ನೀನು ಅರಿವಾಗು
ಕಳಚು ಮುಖವಾಡ
ಧರಿಸು ದೈವೀಕತೆಯನು
ಅದು ಬಹುಪಾಡ!
ಸುಮ್ಮನೆ ಕೃತಿಸು
ವಿಷವಿಲ್ಲದ ಅಮೃತನಾಗು
ನಿಜ ಭಕ್ತನಾಗುವೆ
ದೇವರ ಚಿತ್ಕಳೆ ಎನಿಸುವೆ!
ಭೋಗವಿರದ ಭಕ್ತನಾಗು
ಸಾವಿಲ್ಲದ ಶರಣ ನೀನಾಗು
ಸಕಲಕ್ಕೂ ಬರಿ ಶರಣಾಗುಮನವೇ ಬರೀ ಶರಣಾಗು!
ಪರಿಸರವೆನಿಸುವೆ
ಮಲಿನವೇ ಇರದ
ಪರಿಸರವೆನಿಸುವೆ !
ಎ. ಸಿ. ಶಶಿಕಲಾ ಶಂಕರಮೂರ್ತಿ
ಕನ್ನಡ ಭಾಷಾ ಶಿಕ್ಷಕಿ,
ದಾವಣಗೆರೆ.
[email protected]