ಜಗಳೂರು, ಜೂ.12- ರಾಜಕೀಯ ದುರುದ್ಧೇಶದಿಂದ ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜೆಸಿಬಿ ಯಂತ್ರಗಳೊಂದಿಗೆ ಹಿರೇಅರಕೆರೆ ಕೆರೆ ಸಮೀಪದ ಸ.ನಂ. 107 ರಲ್ಲಿ ಕೋಳಿ ಫಾರಂ, ಮಿಷನ್, ಎರಡು ವಸತಿ ಗೃಹಗಳನ್ನು ತೆರವುಗೊಳಿಸಿ ಲಕ್ಷಾಂತರ ರೂ. ನಷ್ಟವುಂಟು ಮಾಡಿದ್ದಾರೆ. ಕೂಡಲೇ ಸರ್ಕಾರದಿಂದ ಪರಿಹಾರ ಕೊಡಿಸಬೇಕು ಎಂದು ದೇವಿಕೆರೆ ಗ್ರಾ.ಪಂ ಮಾಜಿ ಅಧ್ಯಕ್ಷ ಗುರುಸ್ವಾಮಿ ಒತ್ತಾಯಿಸಿದ್ದಾರೆ.
ಪಟ್ಟಣದ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲ್ಲೂಕಿನ ಹಿರೇಅರಕೆರೆ ಸಮೀಪದ ಸ.ನಂ. 107ರಲ್ಲಿ ಸುಮಾರು ವರ್ಷಗಳಿಂದ ಕೋಳಿ ಫಾರಂ, ಸಿಮೆಂಟ್ ಇಟ್ಟಿಗೆ ಸೇರಿದಂತೆ ಇತರೆ ಕೆಲಸಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದ ನನಗೆ ರಾಜಕೀಯ ದುರುದ್ಧೇಶದಿಂದ ಕೆರೆ ಒತ್ತುವರಿಯ ನೆಪದಲ್ಲಿ ತಹಶೀಲ್ದಾರ್ ಅವರ ಮೂಲಕ ನನ್ನ ಸ್ವಂತ ಜಾಗವನ್ನು ತೆರವು ಮಾಡಿ ಸಾಕಷ್ಟು ನಷ್ಟ ಉಂಟು ಮಾಡಿರುವುದು ತುಂಬಾ ಬೇಸರ ತಂದಿದೆ ಎಂದರು.
ನಾನು ಮೂಲತಃ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ, ನಾನು ಅಲ್ಪಸಂಖ್ಯಾತನೆಂದು ನಮ್ಮ ಮೇಲೆ ಪಿತೂರಿ ಮಾಡಿ ಈ ಕಾರ್ಯಕ್ಕೆ ಕೈಹಾಕಿದ್ದಾರೆ. ಆ ದೇವರು ಕೂಡ ನಿಮ್ಮನ್ನು ಕ್ಷಮಿಸುವುದಿಲ್ಲ ವೆಂದು ಶಾಸಕ ಎಸ್.ವಿ.ರಾಮಚಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ವಿಎಸ್‍ಎಸ್‌ಎನ್ ಅಧ್ಯಕ್ಷ ಬಸವಾಪುರ ರವಿಚಂದ್ರ ಮಾತನಾಡಿ, ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಗುರುಸ್ವಾಮಿಯಂತಹ ಕಾರ್ಯಕರ್ತರ ದುಡಿಮೆಗೆ ನಷ್ಟವಾಗಿದೆ. ಅವರು ತಾಲ್ಲೂಕು ಬಿಟ್ಟು ಹೋಗುವುದಿಲ್ಲ. ಅವರ ಜೊತೆಗೆ ನಾವಿದ್ದೇವೆ. ಮುಂದಿನ ದಿನಗಳಲ್ಲಿ ನಾವು ಶಾಸಕರಿಗೆ ತಕ್ಕ ಪಾಠ ಕಲಿಸುತ್ತೇವೆ. ಶಾಸಕರ ಅಧಿಕಾರ ಶಾಶ್ವತವಲ್ಲ. ಕೇವಲ 5 ವರ್ಷ ಎಂದು ಕಿಡಿಕಾರಿದರು.
ವಕೀಲ ಆರ್.ಓಬಳೇಶ್ ಮಾತನಾಡಿ, ದೇವಿಕೆರೆ ಗುರುಸ್ವಾಮಿಯನ್ನು ಮೇಲೆ ಟಾರ್ಗೆಟ್ ಮಾಡುತ್ತಿರುವುದು ರಾಜಕೀಯ ದುರುದ್ಧೇಶ ದಿಂದ ಕೂಡಿದೆ. ಜಗಳೂರು, ಜಮ್ಮಾಪುರ ಸೇರಿದಂತೆ, ತಾಲ್ಲೂಕಿನ ಹಲವಾರು ಕೆರೆಗಳೂ ಒತ್ತುವರಿಯಾದರೂ ಶಾಸಕರು ಕಣ್ಣು ಮುಚ್ಚಿಕೊಂಡಿದ್ದಾರೆ ಎಂದರು.
ಎಲ್. ಭೈರೇಶ್ ಮಾತನಾಡಿ, ತಾಲ್ಲೂಕು ಅಧೋಗತಿಗೆ ಹೋಗುತ್ತಿದೆ. ಕಾಂಗ್ರೆಸ್ ಸರ್ಕಾರದ ಅನುದಾನದಲ್ಲಿ ಭೂಮಿ ಪೂಜೆ, ಉದ್ಘಾಟನೆ ಮಾಡುತ್ತಿದ್ದಾ ರೆಯೇ ಹೊರತು, ಬಿಜೆಪಿ ಸರ್ಕಾರದಿಂದ ಒಂದು ನಯಾಪೈಸೆ ಅನುದಾನ ಬಿಡುಗಡೆ ಯಾಗಿಲ್ಲ. ಶಾಸಕರು ಪುಕ್ಕಟೆ ಪ್ರಚಾರ ತೆಗೆ ದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಗಿರೀಶ್ ಒಡೆಯರ್, ಅಪ್ಸರ ಮಂಜುನಾಥ್, ವೆಂಕಟೇಶ್, ವೀರೇಂದ್ರ ಪಾಟೀಲ್, ಗೋಡೆ ಪ್ರಕಾಶ್, ಸುರೇಶ್, ಬಿ.ಲೋಕೇಶ್ ಸೇರಿದಂತೆ ಮತ್ತಿತರರಿದ್ದರು.