ಹರಿಹರ, ಜೂ.12- ರಾಜ್ಯ ಸರ್ಕಾರದ ಕೃಷಿ ಇಲಾಖೆಯಲ್ಲಿ (ರೈತ ಅನುವುಗಾರರಾಗಿ) ತಾಂತ್ರಿಕ ಉತ್ತೇಜಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಸದ್ಯ 2020-21 ರ ಕೃಷಿ ಇಲಾಖೆಯ ಚಟುವಟಿಕೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಅಳವಡಿಸಿಕೊಂಡು ಅವರ ಸೇವೆಯನ್ನು ಮುಂದುವರೆಸುವಂತೆ ಕೋರಿ ಸಹಾಯಕ ಕೃಷಿ ನಿರ್ದೇಶಕರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಈ ವರ್ಷದ ಆಯ-ವ್ಯಯ ಮಂಡಿಸುವ ಮುನ್ನ ನಮ್ಮ ಸಂಘದ ಪ್ರತಿನಿಧಿಗಳಿಗೆ ತಮ್ಮನ್ನು ಮುಂದುವರೆಸುವ ಯೋಜನೆ ಇದ್ದು, ತಾವು ಭಯಪಡಬೇಡಿ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದು, ಬಜೆಟ್ ಅನುಮೋದನೆಯಾದ ನಂತರ ದಿಢೀರನೇ ತಮ್ಮನ್ನು ವಜಾಗೊಳಿಸಿ, ತಮ್ಮ ಸ್ಥಾನದಲ್ಲಿ ಎರಡು ಗ್ರಾಮ ಪಂಚಾಯ್ತಿಗೆ ಒಬ್ಬರಂತೆ ರೈತ ಮಿತ್ರರನ್ನು ನೇಮಕ ಮಾಡಿ ಕೊಳ್ಳುವ ಹೇಳಿಕೆ ನೀಡಿ 12 ವರ್ಷದಿಂದ ಅಲ್ಪಸ್ವಲ್ಪ ಸಂಬಳದಲ್ಲೇ ಕಾರ್ವನಿರ್ವಹಿಸುತ್ತಿ ರುವ ಸುಮಾರು 6000 ರೈತ ಅನುವುಗಾರರನ್ನು ಬೀದಿ ಪಾಲು ಮಾಡಿದಂತಾಗುವುದು.
ಮುಖ್ಯಮಂತ್ರಿಗಳು ಮಾನವೀಯತೆಯ ದೃಷ್ಟಿಯಿಂದ ಅನುವುಗಾರರನ್ನು ಮುಂದುವರೆಸಿ, 10,000 ರೂಪಾಯಿ ಮಾಸಿಕ ಗೌರವ ಧನ ನೀಡುವಂತೆ ಒತ್ತಾಯಿಸುತ್ತೇವೆ. ಇತ್ತೀಚೆಗೆ ಕಲಬುರ್ಗಿಯಲ್ಲಿ ಧರಣಿ ಸತ್ಯಾಗ್ರಹ ಮಾಡಿದ್ದು, ಗೋವಿಂದ ಕಾರಜೋಳ ಅವರು ಭರವಸೆ ನೀಡಿದ್ದು, ಧರಣಿ ಹಿಂಪಡೆಯಲಾಯಿತು. ಧಾರವಾಡದಲ್ಲಿ ರೈತ ಅನುವುಗಾರರು ಸಭೆ ಸೇರಿ ಚರ್ಚೆ ನಡೆಸಿದಾಗ ರಂಜಾನ್ ನದಾಫ್ ಎಂಬ ರೈತ ಅನುವುಗಾರ ಹೃದಯಾಘಾತಕ್ಕೆ ಒಳಗಾಗಿ ಅಸುನೀಗಿದ್ದಾರೆ.
12 ವರ್ಷ ದುಡಿಸಿಕೊಂಡು ಈ ಮಧ್ಯೆ ಅನೇಕ ರೈತ ತರಬೇತಿಗಳು ನೀಡಿ, ಈಗ ಖಾಯಂ ಉದ್ಯೋಗಗಳನ್ನು ಸೃಷ್ಟಿಸಿ, ಪೂರ್ಣ ಸಂಬಳದೊಂದಿಗೆ ಹೊಸಬರನ್ನು ನೇಮಕ ಮಾಡಿಕೊಳ್ಳುವುದಾಗಿ ತಿಳಿಸಿರುವುದು ಆತಂಕ ಮೂಡಿಸಿದೆ. ಸೂಕ್ತ ಸ್ಪಂದನೆ ಸಿಗದೇ ಹೋದಲ್ಲಿ ಕೋವಿಡ್-19 ನಿರ್ಬಂಧ ಮುಗಿದ ತಕ್ಷಣ ರಾಜ್ಯಾದ್ಯಂತ ಬೀದಿಗಿಳಿದು ಅನಿರ್ದಿಷ್ಟ ಹೋರಾಟ ಮಾಡಬೇಕಾಗುತ್ತದೆ ಎಂದು ತಾಲ್ಲೂಕು ರೈತ ಅನುವುದಾರರಾದ ಆರ್.ಕೆ. ಉಮೇಶ್, ಬಿ. ಹಾಲೇಶ, ಕೆ.ಸಿ. ಪಾಟೀಲ್, ಕುಬೇರಗೌಡ, ಹೆಚ್. ಹನುಮಂತಪ್ಪ ಎಚ್ಚರಿಸಿದ್ದಾರೆ.