ಹರಪನಹಳ್ಳಿ, ಜೂ.12- ಲಾಕ್‍ಡೌನ್ ನಂತರ ಹರಪನಹಳ್ಳಿಯಿಂದ ದಾವಣಗೆರೆಗೆ ಕಂಚಿಕೇರಿ ಮಾರ್ಗವಾಗಿ ತೆರಳಲು ರೂ.50 ಆದರೆ, ದಾವಣಗೆರೆಯಿಂದ ಹರಪನಹಳ್ಳಿಗೆ ವಾಪಸ್ ಬರಲು ರೂ.45. ಈ ಇಬ್ಬಗೆಯ ದರಗಳು ರಾಜ್ಯ ರಸ್ತೆ ಸಾರಿಗೆ ಬಸ್‍ಗಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಕಿರಿಕಿರಿಯಾಗುತ್ತಿದೆ.
ಹೋಗುವಾಗ ಒಂದು ದರ, ಬರುವಾಗ ಬೇರೆ ದರ ಏಕೆ? ಎಂದು ಪ್ರಯಾಣಿಕರು ನಿರ್ವಾ ಹಕರೊಂದಿಗೆ ಮಾತಿನ ಚಕಮಕಿ ಪ್ರತಿದಿನ ನಡೆಯುತ್ತಿದೆ. ಪ್ರತಿದಿನ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಹೆಚ್ಚು ಹೊರೆಯಾಗುತ್ತಿದೆ ಎಂದು ಗೊಣಗಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಡಿಪೋ ವ್ಯವಸ್ಥಾಪಕರೊಂದಿಗೆ ವಾಗ್ವಾದ ಮಾಡಿದ ಘಟನೆಗಳೂ ಜರುಗುತ್ತಿವೆ.
ಇದಕ್ಕೆ ನಿರ್ವಾಹಕರು ಹೇಳುವ ಕಾರಣ ಹರಪನಹಳ್ಳಿ ಘಟಕದಿಂದ ಸಂಚರಿಸುವ ಬಸ್‍ಗಳಲ್ಲಿ ರೂ. 50 ದರವಿದೆ. ದಾವಣಗೆರೆ ಘಟಕದಿಂದ ಸಂಚರಿಸುವ ಬಸ್‍ಗಳಲ್ಲಿ ರೂ.45 ದರವಿದೆ. ಘಟಕಗಳಲ್ಲಿ ಕೈಗೊಳ್ಳುವ ನಿರ್ಧಾರದಂತೆ ದರ ನಿಗದಿಯಾಗುತ್ತದೆ. ಅದರಂತೆ ಪ್ರಯಾಣಿಕರಿಗೆ ಸಂಬಂಧಿಸಿದ ಘಟಕಗಳ ಟಿಕೆಟ್ ದರ ನೀಡಲಾಗುವುದು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಘಟಕ ವ್ಯವಸ್ಥಾಪಕರಲ್ಲಿ ವಿಚಾರಣೆ ಮಾಡಿ ಎಂದು ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಾರೆ. ವ್ಯತ್ಯಾಸದ ಹೆಚ್ಚಿನ ಹೊರೆಯನ್ನು ಪ್ರಯಾಣಿಕ ಅನುಭವಿಸಬೇಕು. ಲಾಕ್‍ಡೌನ್‍ಗಿಂತ ಮುಂಚೆ ಈ ರೀತಿ ದರದಲ್ಲಿ ವ್ಯತ್ಯಾಸವಿರಲಿಲ್ಲ ಎನ್ನುವುದು ಪ್ರಯಾಣಿಕರ ಪ್ರಶ್ನೆಯಾಗಿದೆ.
ಪ್ರತಿದಿನ ಪ್ರಯಾಣ ಮಾಡುವ ಪ್ರಯಾಣಿಕ ಗುರುನಾಥ ಮಾತನಾಡಿ, ಹರಪನಹಳ್ಳಿ ಘಟಕದ ಬಸ್‍ಗಳಲ್ಲಿ ಪ್ರತಿ ದಿನ ಪ್ರಯಾಣ ಮಾಡಿದರೆ ತಿಂಗಳಿಗೆ ರೂ.300 ನಷ್ಟ ವರ್ಷಕ್ಕೆ ಮೂರು ಸಾವಿರಕ್ಕೂ ಅಧಿಕ ಹಣ ಹೆಚ್ಚು ನೀಡಬೇಕಾಗಿದೆ. ಕೂಡಲೇ ಈ ವ್ಯತ್ಯಾಸವನ್ನು ಸರಿದೂಗಿಸಬೇಕು ಎಂದು ಹೇಳಿದರು.
ಹರಪನಹಳ್ಳಿ ಘಟಕದ ವ್ಯವಸ್ಥಾಪಕ ಸಚಿನ್ ಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಯಾಣಿಕರಿಗೆ ಪ್ರೋತ್ಸಾಹ ದರವನ್ನು ಕೆಲವು ಮಾರ್ಗಗಳಲ್ಲಿ ನೀಡಲಾಗುತ್ತಿದೆ. ಅದೇ ರೀತಿ ಕಂಚಿಕೇರಿ ಮಾರ್ಗವಾಗಿ ಹರಪನಹಳ್ಳಿ –ದಾವಣಗೆರೆಗೆ ಸಂಚರಿಸುವ ನಾನ್‍ಸ್ಟಾಪ್ ಬಸ್‍ಗಳಿಗೆ ಪ್ರೋತ್ಸಾಹ ದರವನ್ನು ರದ್ದು ಪಡಿಸ ಲಾಗಿತ್ತು. ಏಕೆಂದರೆ ಕೇವಲ 30 ಪ್ರಯಾಣಿಕರು ಮಾತ್ರ ಪ್ರಯಾಣ ಮಾಡುತ್ತಿರುವುದರಿಂದ. ಈ ದರ ಪ್ರಯಾಣಿಕರಿಗೆ ಹೊರೆಯಾಗುತ್ತಿರುವ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಶೀಘ್ರ ದಲ್ಲೇ ಸರಿಪಡಿಸುವುದಾಗಿ ಭರವಸೆ ನೀಡಿದರು.