`
ವಿಧಿವಿಲಾಸವೆನೆ ಇದೇನಾ…! ಜಡಿದು ಬಾರಿಸಿದೆ ಕರೊನಾ…!!’ ಬೆಳ್ಳಂಬೆಳಿಗ್ಗೆ ಗುಂಡನ ಈ ಗೋಳು ಗಾಯನ ಕೇಳಿ ಹೆಂಡತಿಯ ನಿದ್ದೆಗೆ ಘಾಸಿಯಾಯಿತು. `ಏನ್ರೀ ಬಾಯ್ಮುಚ್ಕೊಂಡಿರಕ್ಕೀಗ ಏನು ತಗೋತೀರಿ? ರಾತ್ರಿಯೆಲ್ಲ ಸೆಖೆಗೆ ನಿದ್ದೆ ಬಂದಿಲ್ಲ. ಏನೋ ಮುಂಜಾನೆ ಒಂದ್ಗಳಿಗೆ ಹಾಯಾಗಿ ನಿದ್ರಿಸೋಣಾಂದ್ರೆ ಇದ್ಯಾವ್ದೋ ಪ್ಯಾಥೋ ಸಾಂಗನ್ನು ಪ್ರಪಂಚವೆಲ್ಲ ಕೇಳೋ ಥರ ಹೇಳ್ತಿದಿರಲ್ಲ…’
ಹೆಂಡತಿಯ ಗದರುವಿಕೆಗೆ ಗರಬಡಿದಂತಾದ ಗುಂಡ, ತಕ್ಷಣವೇ ಸಾವರಿಸಿಕೊಂಡು `ಅಲ್ವೇ ಗುಂಡಾಣಿ, ನನ್ಹೊಟ್ಟೆ ಸಂಕ್ಟ ನಿನಗ್ಹೇಗೆ ಅರ್ಥವಾಗ್ಬೇಕು?’ ಎಂದು ಗೋಗರೆದ.
`ಏನು? ನಾನು ಗುಂಡಾಣಿನಾ? ನಮ್ಮಪ್ಪ ನನಗೆ ಲಕ್ಷಣವಾಗಿ ವಾರಿಧಿ ಅಂತ ಇಟ್ಟಿರೋ ಹೆಸರಿಂದ ನನ್ನನ್ನು ಕರೆದಿರೋ ಸರಿ. ಇಲ್ಲಾಂದ್ರೆ…’ ಎಂದು ವಾರ್ನಿಂಗಿಸಿದಳು.
ಆಗ ಗುಂಡ `ರುದ್ರನ ಹೆಂಡತಿ ರುದ್ರಾಣಿ. ಇಂದ್ರನ ಹೆಂಡತಿ ಇಂದ್ರಾಣಿ. ಅದೇ ರೀತಿ ನನ್ಹೆಂಡ್ತಿಯಾದ ನೀನು ಗುಂಡಾಣಿಯಲ್ವಾ?’ ಅಂದ.
`ಇಂಥ ತಲೆಹರಟೆಗೇನೂ ಕಮ್ಮಿಯಿಲ್ಲ. ಅದ್ಸರಿ, ಈಗ ನಿಮಗಾಗಿರೋ ಹೊಟ್ಟೆ ಸಂಕ್ಟ ಏನದು?’
`ವರ್ಷಪೂರ್ತಿ ಕತ್ತೆ ಥರ ದುಡಿದು ಪರ್ಫಾರ್ಮೆನ್ಸ್ ತೋರಿಸಿದ್ದೆ. ಈ ಹಾಳು ಕೊರೊನಾ ಬಂದು ಈ ವರ್ಷ ನನಗೆ ಪ್ರೊಮೋಷನ್ನು ಕೈತಪ್ಪಿತು. ಕಂಪನಿಯವರು ಯಾರಿಗೂ ಈ ಸಲ ರೇಟಿಂಗೇ ಕೊಟ್ಟಿಲ್ಲ.’
`ಅಷ್ಟೇ ತಾನೇ?! ಹೋದ್ವರ್ಷ ಇದೇ ಟೈಮಲ್ಲಿ ಒಳ್ಳೇ ರೇಟಿಂಗ್ ಬಂದಿದ್ದಾಗ ನನ್ನ ಬರ್ತ್ಡೇಗೆ ಸ್ಟಾರ್ ಹೋಟೆಲ್ನಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್ ಕೊಡುಸ್ತೀನಿ ಅಂತ ನಂಬಿಸಿ ಕೊನೆಗೆ ಮೋಸ ಮಾಡಿದಿರಲ್ಲ! ಅದರ ಪ್ರತೀಕಾರವೇ ಇದು. ಅನುಭವಿಸಿ!!’ ಎಂದು ಗುಂಡನ ಮೂತಿ ತಿವಿದಳು.
`ಅಯ್ಯೋ ವಾರ್-ಇಧಿ! ಎಂಥಾ ಪವರ್ಫುಲ್ ಪ್ರತೀಕಾರನೇ ನಿಂದು’ ಅಂದ ಗುಂಡ ಮತ್ತೆ ವಿಧಿ ವಿಪರೀತಾ… ಹಾಡನ್ನು ವಿಲಾಪಿಸಲಾರಂಭಿಸಿದ.
ಬಿ.ಆರ್.ಸುಬ್ರಹ್ಮಣ್ಯ
9902024924
[email protected]