ಜಿ.ಪಂ. ನೂತನ ಅಧ್ಯಕ್ಷರಾಗಿ ದೀಪಾ ಜಗದೀಶ್ ಆಯ್ಕೆ

ದಾವಣಗೆರೆ, ಜೂ. 11-    ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಹೊನ್ನಾಳಿ ತಾಲ್ಲೂಕು ಕುಂದೂರು ಕ್ಷೇತ್ರದ ಸದಸ್ಯೆ ದೀಪಾ ಜಗದೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲಾ ಪಂಚಾಯ್ತಿ ಸಭಾಂಗಣ ದಲ್ಲಿ ಗುರುವಾರ ನಡೆದ ಚುನಾವಣೆಗೆ ಬೆಳಿಗ್ಗೆ 9.30 ರಿಂದ 10.30 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ಅವಧಿಯಲ್ಲಿ ದೀಪಾ ಜಗದೀಶ್ ಒಬ್ಬರೇ 2 ನಾಮಪತ್ರ ಸಲ್ಲಿಸಿದ್ದರು. ಸೂಚಕರಾಗಿ ಜಿ.ಪಂ ಸದಸ್ಯೆ ಶಾಂತಕುಮಾರಿ ಸಹಿ ಹಾಕಿದ್ದರು.

ಪ್ರಾದೇಶಿಕ ಆಯುಕ್ತ ವಿ.ಪಿ.ಇಕ್ಕೇರಿ ಅಧ್ಯಕ್ಷತೆಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಒಟ್ಟು 29 ಸದ ಸ್ಯರಲ್ಲಿ 22 ಮಂದಿ ಭಾಗವಹಿಸಿದ್ದರು. ಚುನಾವಣಾ ಕಾರ್ಯಸೂಚಿಯಂತೆ ಆಯುಕ್ತರು ನಾಮಪತ್ರ ಸಲ್ಲಿಸಲಾದ ಏಕೈಕ ಅಭ್ಯರ್ಥಿ ದೀಪಾ ಜಗದೀಶ್  ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.

ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಕ್ಷೇತ್ರದ ಯಶೋಧಮ್ಮ ಮರುಳಪ್ಪ ಅವರ ರಾಜೀನಾಮೆಯಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಸಾಮಾನ್ಯ ಮಹಿಳೆಗೆ ಮೀಸಲಾದ ಸ್ಥಾನಕ್ಕೆ ದೀಪಾ ಜಗದೀಶ್ ಪ್ರಬಲ ಆಕಾಂಕ್ಷಿಯಾಗಿದ್ದರು. ಇವರೊಟ್ಟಿಗೆ ಜಗಳೂರು ತಾಲ್ಲೂಕಿನ ಅಣಬೂರು ಕ್ಷೇತ್ರದ ಕೆ.ವಿ. ಶಾಂತಕುಮಾರಿ ಸಹ ಆಕಾಂಕ್ಷಿಗಳ ರೇಸ್‌ನಲ್ಲಿದ್ದರು. ಆದರೆ ಶಾಸಕ ಎಂ.ಪಿ. ರೇಣುಕಾಚಾರ್ಯರ ಪ್ರಭಾವದಿಂದ ಇದೀಗ ದೀಪಾ ಜಗದೀಶ್ ಅವರಿಗೆ ಅಧ್ಯಕ್ಷ ಸ್ಥಾನ ಒಲಿದಿದೆ.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಪಂ ಸಿಇಒ ಪದ್ಮಾ ಬಸವಂತಪ್ಪ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಹಾಗು ಇತರರು ಆಯ್ಕೆ ವೇಳೆ ಉಪಸ್ಥಿತರಿದ್ದರು.

ದೀಪಾ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಕಾರ್ಯಕರ್ತರು, ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮುಖ್ಯಮಂತ್ರಿಗಳ ರಾಜ ಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಬಿ.ಎಸ್. ಜಗದೀಶ್ ಸೇರಿದಂತೆ ಜಿ.ಪಂ. ಮಾಜಿ ಅಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಹೂಗುಚ್ಛ ನೀಡಿ ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.

error: Content is protected !!