ಕೊರಚ, ಕೊರಮ, ಭೋವಿ ಮತ್ತು ಲಂಬಾಣಿ ಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ಕೈಬಿಡದಿರಿ

ಹರಪನಹಳ್ಳಿಯಲ್ಲಿ ಪ್ರಧಾನಿ, ಮುಖ್ಯಮಂತ್ರಿಗೆ ಪತ್ರ ಬರೆವ ಮೂಲಕ ಚಳವಳಿ

ಹರಪನಹಳ್ಳಿ, ಜೂ.10- ಕೇಂದ್ರ ಸರ್ಕಾರ ಕೊರಚ, ಕೊರಮ, ಭೋವಿ ಮತ್ತು ಲಂಬಾಣಿ ಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ಕೈ ಬಿಡುವಂತೆ ಹೇಳಿರುವುದು ಸರಿಯಲ್ಲ. ಯಥಾಸ್ಥಿತಿಯಲ್ಲಿ ಮುಂದುವರೆಸಿಕೊಂಡು ಹೋಗಬೇಕು ಎಂದು ಪಟ್ಟಣದ ಕೊರಮ, ಕೊರಚ ಜನಾಂಗದ ಸದಸ್ಯರು ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗಳಿಗೆ ಪತ್ರ ಬರೆವ ಮೂಲಕ ಚಳುವಳಿ ನಡೆಸಿದರು.

ಪಟ್ಟಣದ ಅರಸಿಕೇರಿ ರಸ್ತೆಯಲ್ಲಿರುವ 9ನೇ ವಾರ್ಡ್‌ನ ಕೊರವರ ಓಣಿಯಲ್ಲಿನ ಭರ್ಮ ದೇವರ ದೇವಸ್ಥಾನದ ಹತ್ತಿರ ಕೊರಮ, ಕೊರಚ ಸಮಾಜದ ಕುಟುಂಬದವರು ಹಾಗೂ ಪಟ್ಟಣದ ಪೋಸ್ಟ್‌ ಆಫೀಸ್ ಹತ್ತಿರ ಲಂಬಾಣಿ ಸಮುದಾಯದ  ಸದಸ್ಯರು ತಮ್ಮ ವೃತ್ತಿಯ ಈಚಲ ಗಿಡ ಹಾಗೂ ಪುಟ್ಟಿಯನ್ನು ಹೆಣೆ ಯುವ ಬಳ್ಳಿಗಳನ್ನು, ನುಲಿಯ ಚನ್ನಣ್ಣನವರ ಭಾವಚಿತ್ರ ಇಟ್ಟುಕೊಂಡು ಸರ್ಕಾರಕ್ಕೆ ಬರೆದಿರುವ ಪತ್ರಗಳನ್ನು ಪ್ರದರ್ಶಿಸಿದರು.

ಈ ವೇಳೆ ಮುಖಂಡ ಬಸವರಾಜ ಮಾತನಾಡಿ, ಹಿಂದಿನ ಕಾಲದಿಂದಲೂ ಅತ್ಯಂತ ಬಡತನದ ಅವಮಾನಿತ ಬುಡಕಟ್ಟು ಜನಾಂಗದವರಾಗಿದ್ದು, ಸಮಾಜದಲ್ಲಿ ಶೋಷಿತರಾಗಿ ಮುಖ್ಯವಾಹಿನಿಗೆ ಬರುವ ಮೊದಲೇ ಈ ಸಮುದಾಯಗಳನ್ನು ಎಸ್‍ಸಿ ಪಟ್ಟಿಯಿಂದ ಕೈಬಿಡಲು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹುನ್ನಾರ ನಡೆಸುತ್ತಿದ್ದು ಕೂಡಲೇ ಸರ್ಕಾರ ನಮ್ಮನ್ನು ಎಸ್‍ಸಿ ಪಟ್ಟಿಯಲ್ಲಿಯೇ ಮುಂದುವರೆಸಬೇಕು ಎಂದು ಪತ್ರ ಮುಖೇನ ಸರ್ಕಾರಕ್ಕೆ ಒತ್ತಾಯಿಸಿದರು.

ಕೊರಮ ಸಮಾಜದ ಯುವ ಅಧ್ಯಕ್ಷ ರಾಜಕುಮಾರ ಮಾತನಾಡಿ, ಕೊರಮ ಜನಾಂಗ ಸೇರಿದಂತೆ, ಇತರೆ ಜನಾಂಗದವರು ಇನ್ನೂ ಕುಲಕಸುಬಿನ ಮೇಲೆ ಜೀವನ ನಡೆಸುತ್ತಿದ್ದು, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ಬಾರದೆ ಶೋಷಿತರಾಗಿ ಉಳಿದಿದ್ದೇವೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ನಮ್ಮ ಮನವಿಯನ್ನು ಪರಿಶೀಲಿಸಿ ಎಸ್‍ಸಿ ಪಟ್ಟಿಯಲ್ಲಿ ಉಳಿಸಬೇಕು ಎಂದು ಆಗ್ರಹಿಸಿದರು.

ಲಂಬಾಣಿ ಸಮುದಾಯದ ಈಶ್ವರನಾಯ್ಕ, ಬಾನ್ಯನಾಯ್ಕ ಮಾತನಾಡಿ, ಕೊರಚ, ಕೊರಮ, ಭೋವಿ  ಮತ್ತು ಲಂಬಾಣಿ ಜಾತಿಗಳನ್ನು ಪರಿಶಿಷ್ಟರ ಪಟ್ಟಿಯಿಂದ ಕೈಬಿಡಬೇಕೆಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ ಎಂದು ಸುಳ್ಳು ಹೇಳಿಕೆ ನೀಡಿದೆ ಎಂದು ಜಾಲತಾಣಗಳಲ್ಲಿ ವಿಷಯ ಹರಿಬಿಟ್ಟು ಸಮಾಜದಲ್ಲಿ ಸಂಘರ್ಷ ಸೃಷ್ಟಿ ಮಾಡುವವರ ವಿರುದ್ಧ ಪ್ರಕರಣ ದಾಖಲು ಮಾಡಬೇಕು. ದುರುದ್ದೇಶಿತ ಅರ್ಜಿ ಗಳನ್ನು  ತಿರಸ್ಕಾರ ಮಾಡಬೇಕು ಎಂದು ತಾಲ್ಲೂಕಿನಲ್ಲಿ 1 ಲಕ್ಷ   ಪತ್ರಗಳನ್ನು  ಬರೆದು ಸರ್ಕಾರಕ್ಕೆ ಕಳಹಿಸಲಾಗುವುದು ಎಂದರು. 

ಈ ಸಂದರ್ಭದಲ್ಲಿ ತಾಲ್ಲೂಕು ಕೊರಮ ಸಮಾಜದ ಅಧ್ಯಕ್ಷ ಮೀಸಿ ದುರುಗಪ್ಪ, ಮುಖಂಡರಾದ ಆನಂದಪ್ಪ, ಬಸವರಾಜಪ್ಪ, ತೆಲಿಗಿ ನಾಗರಾಜ, ಲಕ್ಷ್ಮಪ್ಪ, ಪ್ರಕಾಶ್, ಕೆಂಚಪ್ಪ, ಪರಮೇಶ್, ನಾಗಪ್ಪ, ವೀರಮ್ಮ, ಮಂಜಮ್ಮ, ಕೆಂಚಮ್ಮ, ದುರುಗಮ್ಮ, ಗಂಗಪ್ಪ, ಲಕ್ಷ್ಮಣ ರಾಮವತ್, ಪ್ರಕಾಶ ನಾಯ್ಕ, ಸೇರಿದಂತೆ ಇತರರು ಇದ್ದರು.

error: Content is protected !!