ಜಗಳೂರು, ಜೂ.10- ತಾಲ್ಲೂಕಿನ ಶಾಖಾ ಕಾಲುವೆ ನಿರ್ಮಾಣ ಕಾಮಗಾರಿಯನ್ನು ಶೀಘ್ರವೇ ಪ್ರಾರಂಭಿಸುವಂತೆ ಭದ್ರಾ ಮೇಲ್ದಂಡೆ ಹೋರಾಟ ಸಮಿತಿ ಒತ್ತಾಯಿಸಿದೆ.
ಚಿತ್ರದುರ್ಗ ನೀರಾವರಿ ಕೇಂದ್ರ ಕಚೇರಿಯಲ್ಲಿ ಜಗಳೂರು ತಾಲ್ಲೂಕು ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಹೋರಾಟ ಸಮಿತಿ ವತಿಯಿಂದ ಮುಖ್ಯ ಇಂಜಿನಿಯರ್ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ರಾಘವನ್ ಅವರು, ಜಗಳೂರು ಶಾಖಾ ಕಾಲುವೆಗೆ 2.40 ಟಿ.ಎಂ.ಸಿ. ನೀರು ಹಂಚಿಕೆ ಯಾಗಿದ್ದು, ನಿಗದಿತ ಮಾರ್ಗದಲ್ಲಿಯೇ ಕಾಮಗಾರಿ ಪ್ರಾರಂಭ ಮಾಡಲು ಡಿ.ಪಿ.ಆರ್. ಸಿದ್ದಪಡಿಸಲಾಗಿದೆ .
ನಿಕೇತನ್ ಖಾಸಗಿ ಏಜೆನ್ಸಿ ಮೂಲಕ ಡಿ.ಪಿ.ಆರ್. ಸಿದ್ದಪಡಿಸಲಾಗುತ್ತಿದ್ದು, ಇನ್ನು ಹದಿನೈದು ದಿನಗಳೊಳಗೆ ನಮಗೆ ನೀಡಲಿದ್ದಾರೆ. ಡಿ.ಪಿ.ಆರ್. ನಂತರ ಕಾಮಗಾರಿ ಪ್ರಾರಂಭದ ಬಗ್ಗೆ ಹಣಕಾಸು ಇಲಾಖೆ ಅನುಮೋದನೆಗೆ ವರದಿ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿ ಸದಸ್ಯರಾದ ಆರ್. ಓಬಳೇಶ್, ನಾಗಲಿಂಗಪ್ಪ, ಚಿತ್ರದುರ್ಗ ಜಿಲ್ಲಾ ಸೇರ್ಪಡೆ ಹೋರಾಟ ಸಮಿತಿ ಅಧ್ಯಕ್ಷ ತಿಮ್ಮಾರೆಡ್ಡಿ, ಸಮಿತಿ ಸದಸ್ಯರಾದ ಜೆ. ಯಾದವ ರೆಡ್ಡಿ, ಬಿ.ಡಿ. ಹನುಮಂತ ರೆಡ್ಡಿ, ಕೆ.ಟಿ. ವೀರಸ್ವಾಮಿ, ಸಿದ್ದಪ್ಪ, ಧನ್ಯಕುಮಾರ್, ಬಸವರಾಜ್, ಜೆ. ಮಹಾಲಿಂಗಪ್ಪ, ಹೇಮಾ ರೆಡ್ಡಿ, ಖಾದರ್ ಸಾಬ್, ಅನಂತ್ ರಾಜ್, ಸೇರಿದಂತೆ ರೈತ ಸಂಘದ ಮುಖಂಡರು, ಸಮಿತಿ ಸದಸ್ಯರು ಇದ್ದರು.