ಟೈಲರ್ಸ್ ಕಲ್ಯಾಣ ಮಂಡಳಿ ಜಾರಿಗೆ ತರಲು ಆಗ್ರಹ

ದಾವಣಗೆರೆ, ಜೂ.8- ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮಾದರಿಯಲ್ಲಿ ಟೈಲರ್ ಕಲ್ಯಾಣ ಮಂಡಳಿಯನ್ನು ಜಾರಿಗೆ ತರುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಹೊಲಿಗೆ ಕೆಲಸಗಾರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಕೆ.ಜಿ. ಯಲ್ಲಪ್ಪ ನೇತೃತ್ವದಲ್ಲಿ ನಗರದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು. 

ಜಯದೇವ ವೃತ್ತದಲ್ಲಿ ಜಮಾಯಿಸಿದ್ದ ಟೈಲರ್ ಮತ್ತು ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಟೈಲರ್ ವೃತ್ತಿ ಮಾಡುವವರು ಅಸಂಘಟಿತ ವಲಯದವರಾಗಿದ್ದು, ಯಾವುದೇ ಸೌಲಭ್ಯಗಳಿಲ್ಲದೆ ಬಳಲುತ್ತಿದ್ದಾರೆ. ಟೈಲರ್ ವೃತ್ತಿಯಲ್ಲಿ ತೊಡಗಿರುವವರಲ್ಲಿ ಬಹುತೇಕ ಮಹಿಳೆಯರಿದ್ದಾರೆ. ಮನೆಗಳಲ್ಲಿ ಹಾಗೂ ಶಾಪ್ ಗಳಲ್ಲಿ ಬಟ್ಟೆ ಹೊಲಿಯುವ ಕಾಯಕದಲ್ಲಿ ತೊಡಗಿದ್ದಾರೆ. ಕಾರ್ಮಿಕರ ಕಾಯ್ದೆ ಅನ್ವಯಿಸದೇ ಇರುವ ಸಣ್ಣ – ಸಣ್ಣ ಗಾರ್ಮೆಂಟ್ಸ್ ಘಟಕಗಳಲ್ಲಿ ಟೈಲರಿಂಗ್ ಮಾಡುವ ಟೈಲರ್ ಗಳು ರಾಜ್ಯದಲ್ಲಿ ಸುಮಾರು 20 ಲಕ್ಷದಷ್ಟಿದ್ದಾರೆ. ಟೈಲರ್ ವೃತ್ತಿ ಮಾಡುತ್ತಿರುವವರಲ್ಲಿ ಪ್ರೌಢಶಿಕ್ಷಣ, ಪದವಿ ಪಡೆದವರಿದ್ದಾರೆ. ಸರ್ಕಾರಿ ಕೆಲಸ ಕಾಯದೆ ಸ್ವಯಂ ಉದ್ಯೋಗ ಹುಡುಕಿಕೊಳ್ಳುವಲ್ಲಿ ಮುಂದಾಗಿ ಟೈಲರಿಂಗ್ ತರಬೇತಿ ಪಡೆದು ಸ್ವತಃ ಟೈಲರ್ ವೃತ್ತಿ ಮಾಡುತ್ತಿದ್ದಾರೆ. ಕೆಲವರು ಸಣ್ಣ – ಪುಟ್ಟ ಗಾರ್ಮೆಂಟ್ ಗಳಲ್ಲಿ ಕೆಲಸ ಮಾಡುತ್ತಿದ್ದರೂ ಅಲ್ಲಿನ ಕೆಲಸಗಾರರು ಇಪ್ಪತ್ತರ ಸಂಖ್ಯೆಯ ಒಳಗಿರುವುದರಿಂದ ಕಾರ್ಮಿಕ ಕಾಯ್ದೆ ಅನ್ವಯಿಸದೇ ಇರುವುದರಿಂದ ಸೌಲಭ್ಯಗಳು ಸಿಗುತ್ತಿಲ್ಲ. ಇವರೆಲ್ಲರೂ ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದಾರೆ. ಲಾಕ್ ಡೌನ್ ನಿಂದಾಗಿ ಕಷ್ಟದಲ್ಲಿರುವ ಟೈಲರ್ ಗಳಿಗೆ 5 ಸಾವಿರ ಸಹಾಯಧನ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು. 

ಪ್ರತಿಭಟನೆಯಲ್ಲಿ ಜಗನ್ನಾಥ್ ಎಸ್. ಗಂಜಿಗಟ್ಟಿ, ಅಶೋಕ್ ಎಂ.ಆರ್. ಚಂದ್ರಶೇಖರ್ ಕೆ. ಗಣಪಾ, ಗಿರೀಶ್ ನವಲೆ, ಮನ್ಸೂರ್, ಸಂದೀಪ್, ಆನಂದರಾವ್, ವಿಜಯಕುಮಾರ್, ರಾಜೀವ್, ಜಿತೇಂದ್ರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

error: Content is protected !!