ಅಳಿಸಲಾರದ ಚಿತ್ರ ಪ್ರಕೃತಿ…

ಭಾರತದಲ್ಲಿ ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿ ರುವ ಕೋವಿಡ್-19 ಸಾಂಕ್ರಾಮಿಕ ರೋಗ ಜನರ ಒಗ್ಗಟ್ಟನ್ನು ಹಿಂದೆಂದಿಗಿಂತ ಹೆಚ್ಚು ಪರೀಕ್ಷಿಸುತ್ತಿದೆ. ಮಾನವನ ತಾಳ್ಮೆಯ ಕಟ್ಟೆಯೊಡೆದಿದೆ. ಭೂಮಿ-ಆಕಾಶದ ಅಂತರ ಕಡಿಮೆಯಾಗುತ್ತಿದೆ. ಮಾನವ-ಮಾನವರ ಅಂತರ ಹೆಚ್ಚುತ್ತಿದೆ. ಸಂಘಜೀವಿ ಎನಿಸಿಕೊಂಡ ಮನುಷ್ಯ ಏಕಾಂಗಿಯಾಗುತ್ತಿದ್ದಾನೆ. ಪ್ರತಿಯೊಂದು ಊರೂರಿಗೆ ಯೋಜನೆಗಳು ಹೆಚ್ಚುತ್ತಿದ್ದರೂ ಮನ-ಮನಗಳ ಕೊಂಡಿ ಸಡಿಲವಾಗುತ್ತಿದೆ. ಉಣ್ಣುವ ಬಾಯಿಗಳು ಹೆಚ್ಚಾಗುತ್ತಿವೆ. ದುಡಿಯುವ ಕೈಗಳ ಕೊರತೆ ಕಾಣುತ್ತಿದೆ. ಉತ್ಪಾದನೆಗಳು ನಿಂತಿವೆ. ಸರ್ಕಾರದ, ಸಂಘ – ಸಂಸ್ಥೆಗಳ, ಕಾರ್ಖಾನೆಗಳ ಬೊಕ್ಕಸ ಖಾಲಿಯಾಗುತ್ತಿದೆ. ಆರ್ಥಿಕ ಮುಗ್ಗಟ್ಟು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಾಹ್ಯವಾಗಿ ಸಿರಿಸಂಪತ್ತು ಹೆಚ್ಚಿದರೂ ಆಂತರಿಕವಾಗಿ ಬಡತನ ಬೆಳೆಯುತ್ತಿದೆ.  ಗುಣಮಟ್ಟವಿಲ್ಲದ, ಘನತೆಯಿಲ್ಲದ, ಕಲೆ-ಸಾಹಿತ್ಯಗಳ ವ್ಯಾಪ್ತಿ ಹೆಚ್ಚುತ್ತಿದೆ. ಆಧುನಿಕ ನಾಗರಿಕತೆ ಬೆಳೆಯುತ್ತಲಿದೆ. ಪರಸ್ಪರ ಪ್ರೀತಿ, ನಂಬಿಕೆ, ವಿಶ್ವಾಸಗಳು ಇಲ್ಲದಂತಾಗುತ್ತಿವೆ. ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರುತ್ತಿವೆ. ಮನುಷ್ಯ ಮಾತ್ರ ಬೆಲೆಯಿಲ್ಲದೆ ಸಣ್ಣವನಾಗಿ ಅಗ್ಗವಾಗುತ್ತಿದ್ದಾನೆ.

ಮನುಷ್ಯನ ದುರಾಸೆ ಹೆಚ್ಚಾಗಿ ಬದುಕು ನಲುಗಿದೆ, ದುಸ್ತರಗೊಳ್ಳುತ್ತಿದೆ. ಇಂದಿನ ಎಲ್ಲಾ ಆವಾಂತರಗಳಿಗೆ ಮನುಷ್ಯನ ಮೌಲ್ಯರಹಿತ ಜೀವನ ಕಾರಣವೆಂದರೆ ತಪ್ಪಾಗಲಾರದು. ಮಾನವನ ದುಷ್ಟ ಚಟುವಟಿಕೆಗಳಿಂದ ಕಾಡುಗಳು ನಿರ್ನಾಮವಾಗುತ್ತಿವೆ. ವನ್ಯ ಜೀವಿಗಳ ಕಣ್ಮರೆ… ನಾಶ… ಕೆಲವೊಂದು ವಿನಾಶದ ಅಂಚಿಗೆ ಹೋಗಿವೆ. ಭೂಮಿಯ ತಾಪ ಹೆಚ್ಚಿ, ಅಲ್ಲಲ್ಲಿ ಭೂಕಂಪ, ಜ್ವಾಲಾಮುಖಿ, ಅತಿವೃಷ್ಟಿ, ಅನಾವೃಷ್ಟಿ, ಸುನಾಮಿಯಂತಹ ಭೀಕರ ಸಮಸ್ಯೆಗಳು ಎದುರಾಗುತ್ತಿವೆ. ಭೂಮಂಡಲ, ಪರಿಸರ ಸಮತೋಲನ ಕಳೆದುಕೊಂಡಿದೆ. ಮೌಲ್ಯಗಳನ್ನು ಧಿಕ್ಕರಿಸಿದ, ಕಡೆಗಣಿಸಿದ ಮನುಷ್ಯನಿಗೆ ಪರಿಸರ ತಕ್ಕಪಾಠ ಕಲಿಸುತ್ತಿದೆ. ಕೆರೆ ಕಟ್ಟೆಗಳು ಬರಿದಾಗಿ, ನಾಶವಾಗಿ ಪ್ರಾಣಿ ಸಂಕುಲ ನಲುಗಿದೆ.

ಇದನ್ನೆಲ್ಲಾ ಮಾಡುತ್ತಿರುವ ಮನುಷ್ಯನಿಗೆ ಅರಿವಾದರೂ ಕಿಂಚಿತ್ತೂ ಎಚ್ಚೆತ್ತುಕೊಂಡಿಲ್ಲ. ಯಾರು ಎಷ್ಟು ಬಡಕೊಂಡರೂ ಬುದ್ಧಿ ಬಂದಿಲ್ಲ. ಸರ್ಕಾರದ, ಆರೋಗ್ಯ, ಪೊಲೀಸ್ ಇಲಾಖೆ, ನಗರಪಾಲಿಕೆಯ ಪೌರ ಕಾರ್ಮಿಕರ ನಿಸ್ವಾರ್ಥ ಸೇವೆಗೆ ಬೆಲೆ ಕೊಡುತ್ತಿಲ್ಲ. ಇವರೆಲ್ಲ ಮಹಾತ್ಮರುಗಳ ಮಾತಿಗೆ ಬೆಲೆ ಕೊಡದೆ ಮನುಷ್ಯ ಮೂಕ ಪರಿಸರದ ಮಾತಿಗೆ, ಮೂಕ ವೇದನೆಯ ಮರಗಿಡಗಳ, ಪ್ರಾಣಿ ಪಕ್ಷಿಗಳ ಕೂಗಿಗೆ ಮಣಿಯುತ್ತಾನೆಯೇ?

ನಾಗರಿಕ ಮಾನವ ನೀತಿ, ನಿಯಮ, ನಿಯತ್ತು ಮರೆತಿದ್ದಾನೆ. ಅರ್ಥದಿಂದ ಅಕ್ಷರದ ಬೆಲೆ ಹೆಚ್ಚುವಂತೆ, ಸಂಪತ್ತಿನಿಂದ ಬದುಕಿಗೆ ಸೌಭಾಗ್ಯ ಪ್ರಾಪ್ತವಾಗುತ್ತದೆ ಎಂಬ ನೀತಿ -ನಿಯತ್ತುಗಳು, ಮಾನವೀಯ ಸಂಬಂಧಗಳನ್ನು ಜೋಡಿಸುತ್ತವೆಯೆಂಬ ನೀತಿ ಅರ್ಥವಾಗಬೇಕು. ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಗಳಿಂದ  ಮಾಡುವ ವ್ಯವಹಾರಗಳು ಬೆಳೆಯುತ್ತವೆ ಎಂಬ ಸತ್ಯದ ಅರಿವಾಗಬೇಕು. ಬುದ್ಧಿವಂತ ಮಾನವನ ವಿದ್ಯೆ ವಿನಯಕ್ಕೆ ಕಾರಣವಾಗಬೇಕೇ ಹೊರತು ದುರಹಂಕಾರಕ್ಕಲ್ಲ ಎಂದು ಮನವರಿಕೆಯಾಗಬೇಕಿದೆ.

ಜೀವನದಲ್ಲಿ ಮಧುರ ಕ್ಷಣ ಕಾಣುವಷ್ಟ ರಲ್ಲಿ ತೊಂದರೆ, ತೊಡಕು, ಸಮಸ್ಯೆಗಳಿಂದ ಬದುಕು ದುರ್ಬಲಗೊಳ್ಳುತ್ತಿದೆ. ಜೀವನದ ಗೊತ್ತು ಗುರಿ ತಿಳಿಯುವಷ್ಟರಲ್ಲಿ ಜೀವನ ಯಾತ್ರೆ ಮುಗಿದು ಹೋಗುತ್ತಿರುವುದು ತುಂಬಾ ಬೇಸರದ, ನಿರಾಸೆಯ, ಖೇದದ ಸಂಗತಿಯಾಗಿದೆ. ಸಾಕು, ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ನಾವ್ಯಾರೂ ಈ ಭೂಮಿಗೆ ಮಾಲೀಕರಾಗಿ ಬಂದಿಲ್ಲ. 3 ದಿನಗಳ ಅತಿಥಿಗಳಾಗಿ ಬಂದಿರುವೆವೆಂಬ ಸತ್ಯ ಗೊತ್ತಾಗಬೇಕಿದೆ. ಇಲ್ಲಿ ಯಾರೂ ಶಾಶ್ವತ ಅಲ್ಲ. ಕಾಣದ ಭಗವಂತನ ಶಕ್ತಿಯಿಂದ ರೂಪಿತಗೊಂಡ ಈ ಪ್ರಕೃತಿ ಮಾತ್ರ ನಿತ್ಯ, ಸತ್ಯ, ಶಾಶ್ವತ. ಆ ದೇವರಿಂದ ಬರೆಯಲ್ಪಟ್ಟ ಅಳಿಸಲಾರದ ಚಿತ್ರ ನಮ್ಮ ಪರಿಸರ.

ಶಾಶ್ವತ, ನಿತ್ಯನೂತನವಾದ ನಮ್ಮ ಪರಿಸರ ಉಳಿಯಲಿ ಅಲ್ಲ.. ಉಳಿಯಲೇ ಬೇಕು. ಜೀವನದ ಪಾಠ ಮರೆತಿರುವ ಮನುಷ್ಯನಿಗೆ ಪರಿಸರವೇ ಶಿಕ್ಷೆ ನೀಡಿದೆ. ತನ್ನ ಸ್ವಚ್ಛ ಅಭಿಯಾನದ ಆಂದೋಲನವನ್ನು ತಾನೇ ಆರಂಭಿಸಿದೆ. ಈಗಲೂ ಕಿಂಚಿತ್ತಾ ದರೂ ಎಚ್ಚೆತ್ತುಕೊಳ್ಳದಿದ್ದರೆ ಪರಿಸರದಿಂದ ಮಾನವ ಕುಲದ ಅಳಿವು ಖಚಿತ…


ಡಾ. ಅನಿತಾ ಹೆಚ್. ದೊಡ್ಡಗೌಡರ್
9902198655

error: Content is protected !!