ಪ್ರಸ್ತುತ ಕೊರೊನಾ ವೈರಸ್ ಸಂಬಂಧಿತ ರೋಗ ಇಡೀ ಭೂ ಮಂಡಲವನ್ನು ಕಾರ್ಮೋಡದಂತೆ ವ್ಯಾಪಿಸಿದೆ. ವಿಶ್ವ ರೋಧಿಸುತ್ತಿದೆ, ಪ್ರಕೃತಿ ಮಾತೆ ಸದ್ದಿಲ್ಲದೆ ವಿಶ್ವಯುದ್ಧ ಘೋಷಿಸಿದ್ದು ಗೊತ್ತಾಗಲೇ ಇಲ್ಲ. ಜಗತ್ತಿನ ಘಟಾನುಘಟಿ ರಾಷ್ಟ್ರಗಳ ಬುಡವನ್ನೇ ಅಲ್ಲಾಡಿಸಿ ಬಿಟ್ಟಿದೆ, ಜಗತ್ತೇ ನಾಳೆ ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಮನುಕುಲ ನಡುಗಿ ಹೋಗಿದೆ.
ಒಂದಂತೂ ನಿಜ. ಹುಲ್ಲು ಮಾನವರಿಗೆ ಬುದ್ಧಿ ಕಲಿಸಬೇಕೆಂದು ಪ್ರಕೃತಿ ಮನಸ್ಸು ಮಾಡಿದರೆ ಹೆಚ್ಚು ಹೊತ್ತು ಬೇಕಾಗಿಲ್ಲ ಎಂಬುದಕ್ಕೆ ಇದೇ ನಿದರ್ಶನ.
`ಈ ಜಗತ್ತು ಅವಶ್ಯಕತೆಗಳ ನಿಯಮದಿಂದ ನಡೆ ಯುತ್ತದೆ. ಚಳಿಗಾಲದಲ್ಲಿ ಯಾವ ಸೂರ್ಯನ ನಿರೀಕ್ಷೆ ಇರುತ್ತೋ ಅದೇ ಸೂರ್ಯನಿಗೆ ಬೇಸಿಗೆ ಕಾಲದಲ್ಲಿ ತಿರ ಸ್ಕಾರವೂ ಇರುತ್ತೆ’ ಎನ್ನುವಂತೆ ಮಕ್ಕಳನ್ನು ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ದೂರವಿಡಬೇಕು ಎಂದು ಹೇಳುತ್ತಿದ್ದ ಶಾಲೆಗಳೇ ಇಂದು ಸಣ್ಣ ಮಕ್ಕಳನ್ನು ಗಂಟೆಗಟ್ಟಲೇ ಆನ್ಲೈನ್ ಕಲಿಕೆ ನೆಪದಲ್ಲಿ ಮೊಬೈಲ್ ಫೋನ್ ಮುಂದೆ ಕೂರುವಂತೆ ಮಾಡಿವೆ. ಇದರ ಅಡ್ಡ ಪರಿಣಾಮಗಳ ಗಂಭೀರತೆಯನ್ನು ನಾವು ಯೋಚಿಸಬೇ ಕಾಗಿದೆ. ನಿಮಾನ್ಸ್ ಆಸ್ಪತ್ರೆಯ ತಜ್ಞರು ಈ ಬಗ್ಗೆ ವರದಿ ನೀಡಿದ್ದು, ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಆನ್ಲೈನ್ ಬೋಧನೆ ಅಗತ್ಯವೇ ಇಲ್ಲವೆಂದು ಸ್ಪಷ್ಟಪಡಿಸಿದೆ.
ಆಡುತ್ತಾ, ಕುಣಿಯುತ್ತಾ ಕಲಿಯಬೇಕಾದ ಶಾಲಾ ಮಕ್ಕಳನ್ನು ಗಂಟೆಗಟ್ಟಲೆ ಮೊಬೈಲ್, ಲ್ಯಾಪ್ಟಾಪ್ ಮುಂದೆ ಕೂರಿಸಿ ಪಾಠ ಹೇಳಿಕೊಡುವ ಆನ್ಲೈನ್ ತರಗತಿಗಳಿಂದ ದೈಹಿಕ ಮತ್ತು ಮಾನಸಿಕ ದೌರ್ಬಲ್ಯಗಳು ಹೆಚ್ಚಾಗುತ್ತಿವೆ. ಮಕ್ಕಳ ಆರೋಗ್ಯ ಏನಾಗಬೇಕು? ಎಲ್ಲರ ಬಳಿ ಸ್ಮಾರ್ಟ್ ಮೊಬೈಲ್ ಇರುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆ ಇದೆ. ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಮೊಬೈಲ್, ಕಂಪ್ಯೂಟರ್, ಇಂಟರ್ನೆಟ್ ಸಂಪರ್ಕ ಕಲ್ಪಿಸಿಕೊಡಲು ಎಲ್ಲಿಂದ ಹಣ ತರಬೇಕು? ಆನ್ಲೈನ್ ತರಗತಿ ಅರ್ಥವಾಗದ ಪದ್ಧತಿ. ಆನ್ಲೈನ್ ನೆಪದಲ್ಲಿ ಮಕ್ಕಳು ವೆಬ್ಸೈಟ್ಗಳಲ್ಲಿ ಕಣ್ಣಾಡಿಸಬಹುದು.
ಆನ್ಲೈನ್ನಲ್ಲಿ ಪಠ್ಯ ಚಟುವಟಿಕೆ ಶುರುವಾಗಿದ್ದು, ಸ್ಮಾರ್ಟ್ ಫೋನ್ಗಳು ಅಪ್ರಾಪ್ತರ ಕೈ ಸೇರುತ್ತಿವೆ. ವಾಟ್ಸಾಪ್, ಫೇಸ್ಬುಕ್, ಟೆಲಿಗ್ರಾಂ, ಇನ್ ಸ್ಟಾ ಗ್ರಾಂ ಇನ್ನಿತರೆ ಜಾಲತಾಣಗಳ ಬಳಕೆ ಹೆಚ್ಚುತ್ತಿರುವುದರಿಂದ ಸೈಬರ್ ಕಳ್ಳರು ಮುಗ್ಧ ಮಕ್ಕಳನ್ನು ಅನ್ಯ ಚಟುವಟಿಕೆಗಳಿಗೆ ಸೆಳೆಯುತ್ತಿದ್ದಾರೆ. ಅವರಲ್ಲಿ ಲೈಂಗಿಕ ಆಸಕ್ತಿ ಹೆಚ್ಚಿಸಿ ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ `ಕುರುಡನ ಮೇಲೆ ಕುಳಿತುಕೊಂಡು ಪಯಣಿಸಿದಂತೆ ನಮ್ಮ ಅಂತರ್ಜಾಲ ಶಿಕ್ಷಣ’. ಒಂದು ಅರ್ಥಪೂರ್ಣ ಮಾತಿಗೆ Every new born Child is genius, but school turn them to block heads. ಹುಟ್ಟುವ ಪ್ರತಿಯೊಂದು ಮಗುವು ಪ್ರತಿಭೆಯೊಂದಿಗೆ ಇರುತ್ತದೆ. ಆದರೆ, ಶಾಲೆಗಳು ಅದನ್ನು ಪೆದ್ದುಗೊಳಿಸುತ್ತವೆ.
ಶಿಕ್ಷಣದ ಗುರಿ ಮಗುವಿನ ಸರ್ವಾಂಗೀಣ ಬೆಳ ವಣಿಗೆ. ಇದರ ಆಶಯ ವಿದ್ಯಾರ್ಥಿಗಳಲ್ಲಿ ಜೀವ ಪ್ರಜ್ಞೆ ಯನ್ನು ಅರಳಿಸುವುದು. ಅದಕ್ಕಾಗಿ ಮಕ್ಕಳಿಗೆ ಅನು ಕರಣೆಯ ಶಿಕ್ಷಣದ ಜೊತೆಗೆ ಅನುಭವದ ಶಿಕ್ಷಣವನ್ನು ಜಾಣ್ಮೆಯ ಶಿಕ್ಷಣದ ಜೊತೆಗೆ ಜೀವನ ಶಿಕ್ಷಣ, ವಿದ್ವತ್ತಿನ ಶಿಕ್ಷಣದ ಜೊತೆಗೆ ವಿವೇಕದ ಶಿಕ್ಷಣವನ್ನು ನೀಡಿ ಅವರ ಉಜ್ವಲ ಭವಿಷ್ಯ ನಿರ್ಮಾಣ ಮಾಡಲಿ ಮತ್ತು ಮಗುವಿನ ಸ್ವಂತಿಕೆಯನ್ನು, ಆತ್ಮ ವಿಶ್ವಾಸ ಹಾಗೂ ನಾಯಕತ್ವ ಗುಣವನ್ನು ಬೆಳೆಸುವಲ್ಲಿ ಗುರುವಿನ ಬೋಧನೆಯಿಂದ ಮಾತ್ರ ಸಾಧ್ಯ. ಇಲ್ಲದೇ ಹೋದರೆ ವಿದ್ಯಾರ್ಥಿಗಳನ್ನು ಕೇವಲ ನಡೆದಾಡುವ ಗ್ರಂಥಾಲಯಗಳನ್ನಾಗಿ ಸೃಷ್ಟಿಸಿದಂತಾಗುತ್ತದೆ. ಮುಂದೆ ಮಗು ಆಧುನಿಕ ಸಮಾಜದಲ್ಲಿ ಒಂದು ಕಾಡು ಮೃಗವಾಗಿ ಜೀವಿಸುತ್ತದೆ.
ಇದು 4 ಜಿ ಯುಗ. ವಿಶ್ವ ಬದಲಾಗುತ್ತಿದೆ. ಅದೇ ರೀತಿ ಶಿಕ್ಷಣ ಪದ್ಧತಿಯೂ ಬದಲಾಗುತ್ತಿದೆ. ಪ್ರಾಚೀನ ಯುಗದಲ್ಲಿ ಸದ್ಗುಣವೇ ಶಕ್ತಿಯಾಗಿದ್ದರೆ ಇಂದು ಜ್ಞಾನವೇ ಶಕ್ತಿ. ಇಂದು ಶಿಕ್ಷಣ ನಾಲ್ಕು ಗೋಡೆಗೆ ಸೀಮಿತವಾಗಿಲ್ಲ. ಇದರ ವ್ಯಾಪ್ತಿ ವಿಸ್ತಾರವಾಗಿದೆ. ತಂತ್ರಜ್ಞಾನದ ಅಬ್ಬರ, ಮೊಬೈಲ್, ಕಂಪ್ಯೂಟರ್, ಸಾಮಾಜಿಕ ಅಂತರ್ಜಾಲ ಬಳಕೆಯಿಂದ ಊಹಿಸಲಾರದಷ್ಟು ವಿದ್ಯಾರ್ಥಿಗಳು ಮುಂದುವರೆದಿದ್ದಾರೆ. ಆದರೆ, ಅವರಲ್ಲಿ ವೈಚಾರಿಕ ಪ್ರಜ್ಞೆ, ಕಲ್ಪನಾ ಶಕ್ತಿ, ಆಲೋಚನಾ ಶಕ್ತಿ, ಸ್ಪರ್ಧಾ ಮನೋಭಾವ ಬೆಳೆಸುವಲ್ಲಿ, ಕ್ರಿಯಾಶೀಲತೆಯನ್ನು ಹೆಚ್ಚಿಸಿ ಅವರ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ.
ಸಹೋದರಿ ನಿವೇದಿತಾ ತನ್ನ ಬೆಳವಣಿಗೆಯಲ್ಲಿ ಒಂದಿಬ್ಬರ ಶಿಕ್ಷಕರ ನಡೆ-ನುಡಿಗಳು, ಅವರ ವ್ಯಕ್ತಿತ್ವ, ನನ್ನ ಪಾಲಿಗೆ ಪಾಠಗಳು ಎಂದು ನುಡಿದಿದ್ದಾಳೆ. ಮಹಾತ್ಮಾ ಗಾಂಧೀಜಿಯವರು ವಿದ್ಯಾರ್ಥಿಯ ಪೂರ್ಣ ಪಠ್ಯ ಪುಸ್ತಕವೇ ಶಿಕ್ಷಕನೆಂದಿದ್ದರು. ಒಬ್ಬ ಕವಿ ಒಂದು ಕಡೆ ಉಸಿರಾಗಿ ಹೋಗಿ ಬರುವ ಗಾಳಿಗೆ ದಾರಿ ತಿಳಿದಿರಬೇಕು. ಅದು ದಾರಿ ತಪ್ಪಿದರೆ ಗಾಳಿ ಬೀದಿ ಪಾಲು ದೇಹ ಮಣ್ಣುಪಾಲು, ಅಂತೆಯೇ ವಿದ್ಯಾರ್ಥಿಗಳ ಬದುಕಿಗೆ ಶಿಕ್ಷಕರೇ ಉಸಿರೆಂದು ನಾವು ಭಾವಿಸುತ್ತೇವೆ.
ಕಂಪ್ಯೂಟರ್ ಮತ್ತು ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ಸೋಷಿಯಲ್ ಸ್ಕಿಲ್ ನಾಶವಾಗಿದೆ. ಜೀವಂತ ಸಂವಹನವನ್ನೇ ಕಳೆದುಕೊಳ್ಳುತ್ತಿದ್ದೇವೆ. ಗ್ಯಾಜೆಟ್ ಸಾಂಗತ್ಯದಿಂದಾಗಿ ಮಕ್ಕಳಿಗೆ ಜ್ಞಾನ ವೃದ್ಧಿಯಾಗು ತ್ತದೆಯೇ ವಿನಃ ಜ್ಞಾನದರ್ಶವಾಗುವುದಿಲ್ಲ. ದರ್ಶನ ವಾಗದ ಜ್ಞಾನ ಅಜ್ಞಾನವೆಂದು ನಮ್ಮ ಹಿರಿಯರು ಹೇಳಿ ದ್ದಾರೆ. ಜಗತ್ತನ್ನು ನೋಡುತ್ತಾ ಅನುಭವದಿಂದ ಬದುಕ ಬಹುದಾದ ಮಕ್ಕಳು, ಅರ್ಥವಾಗದ ಜಗತ್ತನ್ನು ಕುತೂ ಹಲದಿದ ವೀಕ್ಷಿಸುತ್ತಾ ಮೌನ ಮುನಿಗಳಾಗಿ ಮೌನ ಜಗತ್ತನ್ನು ಸೃಷ್ಟಿಸುತ್ತಿದ್ದಾರೆ. ಆ ನಿರ್ಜೀವ ವಸ್ತುಗಳಿಂದ ಪಡೆಯುವ ಶಿಕ್ಷಣದಿಂದ ಏನು ಪ್ರಯೋಜನ.
ಚಿಕ್ಕ ವಯಸ್ಸಿನ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಬೇಡವೇ ಬೇಡ. ಭಾರತಕ್ಕೆ ಇದು ಹೊಸ ರೀತಿಯ ಪರಿಕಲ್ಪನೆಯಾಗಿದೆ. ಇದರಿಂದಾಗುವ ಅನುಕೂಲತೆಗಳಿಗಿಂತ ಅನಾನುಕೂಲಗಳೇ ಹೆಚ್ಚು.
ಡಾ. ಹೆಚ್.ಎಸ್. ಮಂಜುನಾಥ್ ಕುರ್ಕಿ
ಮೊ : 94800 65533