ಕೊರೊನಾ ಬಂದರೂ ಜಗ್ಗದ ಜಲಮಾಲಿನ್ಯ

ಲಾಕ್‌ಡೌನ್‌ ಅವಧಿಯಲ್ಲಿ ತುಂಗಭದ್ರಾ ಮಾಲಿನ್ಯದ ಪ್ರಮಾಣ ಯಥಾಸ್ಥಿತಿ : ಕೊಟ್ರೇಶ್

ದಾವಣಗೆರೆ, ಜೂ. 5 – ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಾಯುಮಾಲಿನ್ಯ ಶೇ.80ರವರೆಗೆ ಕಡಿಮೆಯಾಗಿದೆಯಾದರೂ, ತುಂಗಭದ್ರಾ ನದಿಯಲ್ಲಿನ ಮಾಲಿನ್ಯ ಯಥಾಸ್ಥಿತಿ ಯಲ್ಲಿ ಮುಂದುವರೆದಿದೆ ಎಂದು ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್ ತಿಳಿಸಿದ್ದಾರೆ.

ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು  ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂದು ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡುತ್ತಿದ್ದರು. 

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಿಕಲ್ ಎಜುಕೇಷನ್, ಎನ್ಎಸ್ಎಸ್ ಹಾಗೂ ಯುವ ರೆಡ್‌ಕ್ರಾಸ್‌ ಘಟಕಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಲಾಕ್‌ಡೌನ್‌ ಅವಧಿಯಲ್ಲಿ ಪ್ರತಿ ವಾರ ತುಂಗಭದ್ರಾ ನದಿ ನೀರಿನ  ಗುಣಮಟ್ಟದ ಮೇಲೆ ನಿಗಾ ವಹಿಸಲಾಗಿತ್ತು. ಈ ಅವಧಿಯಲ್ಲೂ ಸಹ ನದಿಯ ನೀರಿನ ಗುಣಮಟ್ಟ ಮುಂಚಿನ ರೀತಿಯಲ್ಲೇ ಮಲಿನವಾಗಿದ್ದುದು ಕಂಡು ಬಂತು ಎಂದು ಹೇಳಿದರು.

ಒಬ್ಬನ ಕೊಳಚೆ, ಮತ್ತೊಬ್ಬನ ಕುಡಿಯುವ ನೀರು ! : ದಾವಣಗೆರೆಯಲ್ಲಿನ ಚರಂಡಿಗಳ ನೀರಿನಲ್ಲಿ ಶೇ.40-50 ಮಾತ್ರ ಸಂಸ್ಕರಣೆ ಯಾಗುತ್ತಿದೆ. ಉಳಿದದ್ದು ಹಾಗೆಯೇ ನದಿ ಹಾಗೂ ಕೆರೆಗಳಿಗೆ ಸೇರುತ್ತಿದೆ ಎಂದು ಬಿಐಇಟಿ ಪ್ರಾಂಶುಪಾಲ ಡಾ. ಹೆಚ್.ಬಿ. ಅರವಿಂದ ತಿಳಿಸಿದ್ದಾರೆ.
ಶಿವಮೊಗ್ಗ, ಭದ್ರಾವತಿ ಮುಂತಾದ ನಗರಗಳಿಂದ ಹಿಡಿದು ಹಳ್ಳಿಗಳ ತ್ಯಾಜ್ಯ ನೀರು ಪೂರ್ಣ ಸಂಸ್ಕರಣೆಯಾಗದೇ ನದಿಗಳಿಗೆ ಸೇರುತ್ತಿದೆ. ಇದರಿಂದಾಗಿ ಒಬ್ಬರ ಕೊಳಚೆ ನೀರು, ಮತ್ತೊಬ್ಬರಿಗೆ ಕುಡಿಯುವ ನೀರಾಗುತ್ತಿದೆ ಎಂದವರು ವಿಷಾದಿಸಿದ್ದಾರೆ. ನಗರದ ಎಸಿಸಿ ಬಡಾವಣೆ, ಆಂಜನೇಯ ಬಡಾವಣೆ, ಎಸ್‌ಎಸ್‌ ಲೇಔಟ್ ಸೇರಿದಂತೆ ಹಲವು ಬಡಾವಣೆಗಳ ಚರಂಡಿಗಳ ನೀರು ಸಂಸ್ಕರಣೆಯಾಗದೇ ಬಾತಿ ಕೆರೆ ಸೇರಿ, ಅಲ್ಲಿ ವಿಷಕಾರಿ ಪಾಚಿ ಹರಡಿದೆ. ಇದರಿಂದಾಗಿ ಅಲ್ಲಿನ ಜಲ ಜೀವಿಗಳು ನಾಶವಾಗಿವೆ ಎಂದು ಅವರು ಹೇಳಿದರು.

ಕೈಗಾರಿಕೆ, ವಾಹನ ಇತ್ಯಾದಿಗಳು ಬಂದ್ ಆಗಿದ್ದರಿಂದ ವಾಯುಮಾಲಿನ್ಯ ಶೇ.80ರವರೆಗೆ ಕಡಿಮೆಯಾಗಿತ್ತು. ಆದರೆ, ಮನೆಗಳ ಮೂಲಕ ಬರುವ ಕೊಳಚೆ ನೀರು ನದಿಗೆ ಸೇರುವುದು ಮುಂದುವರೆದಿತ್ತು. ಕೃಷಿ ಚಟುವಟಿಕೆಗಳಿಗೂ ಅನುಮತಿ ಇತ್ತು. ಅಲ್ಲದೇ ಕೊರೊನಾ ಕಾರಣಕ್ಕೆ ಪದೇ ಪದೇ ಕೈ ತೊಳೆಯುತ್ತಿದ್ದುದರಿಂದಲೂ ಅದರ ನೊರೆ ಸೇರಿ ಮಾಲಿನ್ಯ ಹೆಚ್ಚಾಯಿತು ಎಂದು ಕೊಟ್ರೇಶ್ ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ವಾಹನಗಳ ಟೈರ್‌ಗಳ ಸವೆತದಿಂದಾಗಿ ಅದರ ಅಂಶ ಮಣ್ಣಿನಲ್ಲಿ ಸೇರುವುದೂ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಇಂತಹ ಟೈರ್ ತ್ಯಾಜ್ಯದಿಂದ ಮಣ್ಣಿನ ಗುಣಮಟ್ಟ ಕಡಿಮೆಯಾಗುತ್ತಿದೆ ಹಾಗೂ ಅಂತರ್ಜಲದ ಮೇಲೆ ಪರಿಣಾಮವಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮುಂದಾಗಬೇಕಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಹೆಚ್.ಬಿ. ಅರವಿಂದ್, `ತುಂಗಾ ಪಾನ – ಗಂಗಾ ಸ್ನಾನ’ ಎಂಬ ಮಾತು ಮಾಲಿನ್ಯದಿಂದ ಬದಲಾಗಿದೆ. ದೇಶದ ಬಹುತೇಕ ನದಿಗಳು ಈಗ ಜಾನುವಾರುಗಳ ಸ್ನಾನಕ್ಕಷ್ಟೇ ಯೋಗ್ಯವಾಗಿ ಉಳಿದಿವೆ. ತುಂಗಾ ನೀರು ಕುಡಿಯುವಂತಿಲ್ಲ, ಗಂಗಾ ನೀರು ಸ್ನಾನ ಮಾಡುವಂತಿಲ್ಲ ಎಂದು ವಿಷಾದಿಸಿದರು.

ಕಾಲೇಜಿನ ಸಂಶೋಧನಾ ವಿಭಾಗದ ಡೀನ್ ಡಾ. ಬಿ.ಇ. ರಂಗಸ್ವಾಮಿ ಮಾತನಾಡಿ, ಕೊರೊನಾ ಮೂಲಕ ಪರಿಸರ ನಮಗೆ ಸಂದೇಶ ನೀಡುತ್ತಿದೆ. ಆ ಸಂದೇಶವನ್ನು ಅರಿತುಕೊಂಡು ನಾವು ಪರಿಸರ ಕಾಳಜಿ ವಹಿಸಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಶೈಕ್ಷಣಿಕ ವಲಯ ಹಾಗೂ ಪರಿಸರ ಇಲಾಖೆಗಳು ಜೊತೆಗೂಡಿ ಪರಿಸರದ ಮೇಲೆ ನಿಗಾ ವಹಿಸುವ ಮೂಲಕ ಹಲವಾರು ವಿಷಯಗಳು ಸುಧಾರಣೆಯಾಗಿವೆ. ಇಂತಹ ಸಹಭಾಗಿತ್ವ ಹೆಚ್ಚಬೇಕು ಎಂದು ತಿಳಿಸಿದರು.

ಎಂ.ಡಿ. ನಾಗರಾಜ್ ಪ್ರಾರ್ಥಿಸಿದರು. ಡಾ. ಜಿ.ಪಿ.ದೇಸಾಯಿ ನಿರೂಪಿಸಿದರೆ, ಡಾ. ಬಿ. ಪೂರ್ಣಿಮ ವಂದಿಸಿದರು.

error: Content is protected !!