ಪಾಲಿಕೆಯಿಂದ ನಗರದಲ್ಲಿ 1 ಲಕ್ಷ ಸಸಿ ನೆಡಲು ಚಾಲನೆ

ದಾವಣಗೆರೆ, ಜೂ. 5- ಪರಿಸರ ಉತ್ತಮವಾಗಿದ್ದರೆ ಮಾತ್ರ ನಾವೆಲ್ಲಾ ಆರೋಗ್ಯವಂತರಾಗಿರಲು ಸಾಧ್ಯ. ಆದ್ದರಿಂದ ಗಿಡಗಳನ್ನು ಬೆಳೆಸಿ, ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ವಿಶ್ವ ಪರಿಸರ ದಿನದ ಅಂಗವಾಗಿ ಇಲ್ಲಿನ ವಿನಾಯಕ ಬಡಾವಣೆಯ ಸೌಜನ್ಯ ಉದ್ಯಾನವನದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಲವೆಡೆ ಸಸಿ ನೆಟ್ಟು ಸರಿಯಾಗಿ ಪೋಷಿಸುವುದಿಲ್ಲ. ಆದರೆ ದಾವಣಗೆರೆಯಲ್ಲಿ ಉತ್ತಮ ಪೋಷಣೆಯಿಂದ  ಶೇ.75ರಷ್ಟು ಸಸಿಗಳು ಬದುಕುಳಿಯುತ್ತವೆ. ಲಾಕ್‌ಡೌನ್‌ ಸಮಯದಲ್ಲಿಯೂ ಮಾಲಿನ್ಯ ಕಡಿಮೆಯಾಗಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆ 1 ಲಕ್ಷ ಸಸಿ ನೆಡುವ ಶಪಥ ಮಾಡಿರುವುದು ಉತ್ತಮ ತೀರ್ಮಾನ. ಸಸಿ ನೆಟ್ಟ ನಂತರ ಆಯಾ ಭಾಗದ ಸದಸ್ಯರು, ನಾಗರಿಕರು ಸಸಿಗಳ ಮುತುವರ್ಜಿ ವಹಿಸಬೇಕು. ಆಗ ಮಾತ್ರ  ಪರಿಸರ ದಿನಾಚರಣೆಗೆ  ಶೋಭೆ ತಂದಂತೆ ಎಂದರು.

ನಗರದ ವಾರ್ಡುಗಳಲ್ಲಿ ವಿಪಕ್ಷ ಸದಸ್ಯರು ಸಸಿಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ, ನಮ್ಮ ಪಕ್ಷದ ಸೋತ ಅಭ್ಯರ್ಥಿಗಳೇ ಜವಾಬ್ದಾರಿ ವಹಿಸಿಕೊಳ್ಳಲಿ ಎಂದು ಸಲಹೆ ನೀಡಿದರು.

ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಪಾಲಿಕೆ ನೆಡುವ 1 ಲಕ್ಷ ಸಸಿಗಳಲ್ಲಿ ಕನಿಷ್ಟ 50 ಸಾವಿರವಾದರೂ ಉಳಿಯುವಂತೆ ರಕ್ಷಿಸಲಿ ಎಂದರು. 

ಮೈಸೂರು ಮಾಲೀನ್ಯ ರಹಿತ ನಗರ ಎಂದು ಗುರುತಿಸಿಕೊಂಡಿದೆ. ದಾವಣಗೆರೆಯಲ್ಲಿಯೂ ಎಲ್ಲಾ ರೀತಿಯ ಸವಲತ್ತುಗಳಿವೆ. ಅವುಗಳನ್ನು ಬಳಸಿಕೊಂಡು ದಾವಣಗೆರೆಯನ್ನು ಉತ್ತಮ ನಗರವನ್ನಾಗಿಸಲು ಪಾಲಿಕೆ ಸದಸ್ಯರು ಶ್ರಮಿಸಬೇಕು. ಪ್ರಾಣಿಗಳು ತಿನ್ನುವಂತಹ ಗಿಡಗಳ ಹೊರತಾಗಿ ಬೇರೆ ಗಿಡಗಳನ್ನು ನೆಡುವುದು ಉತ್ತಮ ಎಂದು ಅಭಿಪ್ರಾಯಿಸಿದರು.

ಪಾಲಿಕೆ ಮೇಯರ್ ಬಿ.ಜಿ. ಅಜಯ್‌ಕುಮಾರ್ ಮಾತನಾಡಿ, ಪಾಲಿಕೆ ಮೇಯರ್ ಆಗಿ ಅಧಿಕಾರ ವಹಿಸಿಕೊಂಡಾಗ ಮುಂದಿನ ಪೀಳಿಗೆಗೂ ಅನುಕೂಲವಾಗುವಂತಹ ಕೆಲಸ ಮಾಡುವಂತೆ ಇಲ್ಲಿನ ಸಂಸದರು, ಶಾಸಕರು ಸಲಹೆ ನೀಡಿದ್ದರು. ಅದರಂತೆ ಮೊದಲ ಹಂತದಲ್ಲಿ 45 ವಾರ್ಡ್‌ಗಳಲ್ಲಿ 1 ಲಕ್ಷ ಸಸಿ ನೆಡುವ ಯೋಜನೆಯನ್ನು ಬಜೆಟ್‌ನಲ್ಲಿ ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಸಸಿಗಳನ್ನು ಸಂರಕ್ಷಿಸಲು ಟೆಂಡರ್ ಕರೆಯಲಾಗುವುದು ಎಂದರು.

ಮಾಜಿ ಶಾಸಕ  ಕಾಮ್ರೆಡ್ ಪಂಪಾಪತಿಯವರ ಅವಧಿಯಲ್ಲಿ ನಗರದಲ್ಲಿ 30 ಸಾವಿರ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಂದು ಆ ಗಿಡಗಳು ಹೆಮ್ಮರವಾಗಿವೆ. ಅದನ್ನು ಜನರು ಸ್ಮರಿಸುತ್ತಿದ್ದಾರೆ. ಅವರ ಕಾರ್ಯ ಇಂದು ನಮಗೆ ಸ್ಫೂರ್ತಿಯಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿ, ಮಳೆಯ ನೀರನ್ನು ಸಂರಕ್ಷಿಸಿ, ನಗರದಲ್ಲಿಯೇ ಇಂಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. ಒಂದು ಲಕ್ಷ ಸಸಿಗಳಲ್ಲಿ ಒಂದು ಸಸಿಯೂ ಹಾಳಾಗದಂತೆ ಪಾಲಿಕೆ ಸದಸ್ಯರು, ಪೌರ ಕಾರ್ಮಿಕರು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ರಕ್ಷಿಸುತ್ತಾರೆಂಬ ನಂಬಿಕೆ ಇರುವುದಾಗಿ ಮೇಯರ್ ಹೇಳಿದರು.

ಕಾರ್ಯಕ್ರಮದಲ್ಲಿ ಪಾಲಿಕೆ ಉಪ  ಮೇಯರ್ ಸೌಮ್ಯ ನರೇಂದ್ರ ಕುಮಾರ್, ಆಯುಕ್ತ ವಿಶ್ವನಾಥ್ ಮುದಜ್ಜಿ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಜಯಮ್ಮ ಗೋಪಿನಾಯ್ಕ್, ಗೌರಮ್ಮ ಗಿರೀಶ್, ಪ್ರಸನ್ನ ಕುಮಾರ್, ಎಸ್.ಟಿ. ವೀರೇಶ್, ಪಾಲಿಕೆ ಸದಸ್ಯರುಗಳಾದ ವೀಣಾ ನಂಜಪ್ಪ, ಕೆ.ಎಂ. ವೀರೇಶ್‌ ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಮುಖ್ಯ ಇಂಜಿನಿ ಯರ್ ಎಂ. ಸತೀಶ್‌, ಪಾಲಿಕೆ ಆರೋಗ್ಯಾಧಿಕಾರಿ ಸಂತೋಷ್‌ಕುಮಾರ್‌, ಸುನೀಲ್‌ಕುಮಾರ್, ಬಿಜೆಪಿ ಮುಖಂಡರಾದ ನರೇಂದ್ರಕುಮಾರ್, ಎ.ಆರ್. ಉಜ್ಜಿನಪ್ಪ, ವಿನಯ್‌ ದಿಳ್ಳೆಪ್ಪ, ಮುಖಂಡ ಎನ್.ಜಿ. ಪುಟ್ಟಸ್ವಾಮಿ, ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!