ಸಚಿವ ಗೋವಿಂದ ಕಾರಜೋಳ, ಸಂಸದ ಸಿದ್ದೇಶ್ವರ ಹೇಳಿಕೆಗೆ ವಾಲ್ಮೀಕಿ ನಾಯಕ ಸಮಾಜದ ಖಂಡನೆ

ಸಚಿವ ಗೋವಿಂದ ಕಾರಜೋಳ, ಸಂಸದ ಸಿದ್ದೇಶ್ವರ ಹೇಳಿಕೆಗೆ ವಾಲ್ಮೀಕಿ ನಾಯಕ ಸಮಾಜದ ಖಂಡನೆ - Janathavaniಹರಪನಹಳ್ಳಿ, ಜೂ.5- ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಬಿಜಾಪುರದಲ್ಲಿ ರಾಜ್ಯದ ಮೂವತ್ತು ಜಿಲ್ಲೆಯ ಗಂಗಾಮತಸ್ಥರು ಅರ್ಥಾತ್‌ ‍ಅಂಬಿಗರೂ ಸಹ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರ್ಪಡೆ ಆಗಿದ್ದು ತಾವೆಲ್ಲರೂ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಪಡೆಯಲು ಅರ್ಹರು ಎಂದು, ಸಂಸದ ಜಿ.ಎಂ. ಸಿದ್ದೇಶ್ವರ ಅವರು ಗೊಲ್ಲ ಜನಾಂಗವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು, ಈರ್ವರ ಹೇಳಿಕೆಯನ್ನು ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜ  ಖಂಡಿಸುತ್ತದೆ ಎಂದು ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೋರಿಶೆಟ್ಟಿ ಉಚ್ಚೆಂಗೆಪ್ಪ ತಿಳಿಸಿದ್ದಾರೆ.

ಇತ್ತೀಚೆಗೆ ಕೇಂದ್ರ ಸರ್ಕಾರವು ವಾಲ್ಮೀಕಿ ನಾಯಕ ಸಮಾಜದ ಬಹು ದಿನಗಳ ಬೇಡಿಕೆಯಾಗಿದ್ದ ವಾಲ್ಮೀಕಿ ನಾಯಕ ಸಮಾಜದ ಪರ್ಯಾಯ ಪದಗಳಾದ ಪರಿವಾರ, ತಳವಾರ ಪದಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಿತ್ತು. ಅದರಂತೆ ರಾಜ್ಯ ಸರ್ಕಾರವು ಕೂಡ ಸುತ್ತೋಲೆ ಹೊರಡಿಸಿ, ವಾಲ್ಮೀಕಿ ನಾಯಕ ಸಮಾಜದ ಪರ್ಯಾಯ ಪದಗಳಾದ ಪರಿವಾರ, ತಳವಾರ ಇವರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ವಿತರಿಸುವಂತೆ ಸೂಚಿಸಲಾಗಿತ್ತು.

ಮಾಹಿತಿಯ ಕೊರತೆಯೋ ಅಥವಾ ತಪ್ಪು ತಿಳುವಳಿಕೆಯೊ ಗೊತ್ತಿಲ್ಲ, ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಅವರು ಗಂಗಾಮತಸ್ಥರು ಅರ್ಥಾತ್‍ ಅಂಬಿಗರೂ ಸಹ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರ್ಪಡೆ ಆಗಿದ್ದು, ತಾವೆಲ್ಲರೂ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಪಡೆಯಲು ಅರ್ಹರು ಎಂದು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ವಾಲ್ಮೀಕಿ ನಾಯಕ ಸಮಾಜದ ಜೊತೆ ಅನ್ಯ ಜಾತಿಗಳನ್ನು ಸೇರಿಸುವ ಹುನ್ನಾರ ನಡೆಸುತ್ತಿದ್ದಾರೆ. ಇದನ್ನು ರಾಜ್ಯದ ವಾಲ್ಮೀಕಿ ನಾಯಕ ಸಮಾಜ ಸಹಿಸುವುದಿಲ್ಲ. 

ರಾಜ್ಯದಲ್ಲಿಯೇ 4ನೇ ಅತೀ ದೊಡ್ಡ ವಾಲ್ಮೀಕಿ ನಾಯಕ ಸಮಾಜದಲ್ಲಿ ಈಗಿರುವ ಜನಸಂಖ್ಯೆಗೆ ಶೇಕಡಾ 3.5 ಮೀಸಲಾತಿ ಸಾಲುತ್ತಿಲ್ಲ ಎಂದು ಈ ಹಿಂದೆಯೇ ರಾಜನಹಳ್ಳಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ರಾಜನಹಳ್ಳಿಯಿಂದ ರಾಜಧಾನಿಯವರೆಗೆ ಎಂಬ ಶೀರ್ಷಿಕೆ ಅಡಿಯಲ್ಲಿ ಪಾದಯಾತ್ರೆಯ ಮೂಲಕ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಜನಸಂಖ್ಯೆಗನುಗುಣವಾಗಿ ಶೇ.7.5% ಕ್ಕಿಂತ ಹೆಚ್ಚಿನ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ 8 ತಿಂಗಳುಗಳೇ ಗತಿಸಿದರೂ ಸರ್ಕಾರ ಇದುವರೆಗೂ ಪರಿಷ್ಕೃತಗೊಳಿಸಿದ ಮೀಸಲಾತಿಯನ್ನು ಪ್ರಕಟಿಸಿಲ್ಲ. ಇದರ ನಡುವೆ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಗೊಲ್ಲ ಜನಾಂಗವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಿ, ಪ್ರತ್ಯೇಕ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿಕೊಡುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.

ಕೂಡಲೇ ರಾಜ್ಯ ಸರ್ಕಾರಕ್ಕೆ ಗೊಲ್ಲ ಜನಾಂಗವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಿದ ಪತ್ರವನ್ನು ಹಿಂಪಡೆಯಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ವಾಲ್ಮೀಕಿ ನಾಯಕ ಸಮಾಜವು ಸಚಿವ ಗೋವಿಂದ ಕಾರಜೋಳ ಹಾಗೂ ಸಂಸದ ಸಿದ್ದೇಶ್ವರ ಅವರ ವಿರುದ್ಧ   ಹೋರಾಟ ಮಾಡಬೇಕಾದೀತು ಎಂದು ಉಚ್ಚೆಂಗೆಪ್ಪ ಎಚ್ಚರಿಸಿದ್ದಾರೆ.

error: Content is protected !!