ಜಗಳೂರು, ಜೂ. 4- ತಾಲ್ಲೂಕಿನ ಗ್ರಾಮೀಣ ಪ್ರದೇಶ ಗಳಲ್ಲಿ ಶುದ್ಧ ನೀರಿನ ಘಟಕಗಳು ದುರಸ್ತಿಗೆ ಬಂದಿದ್ದು, ಜನ ಶುದ್ಧ ನೀರು ಸಿಗದೆ ಪರದಾಡುವಂತಾಗಿದೆ.
ಕೆಲವೆಡೆ ನೀರಿನ ಘಟಕಗಳು ಆರಂಭವಾಗಿ ಮೂರು ತಿಂಗಳು ಮಾತ್ರ ಕಾರ್ಯನಿರ್ವಹಿಸಿವೆ. ಮತ್ತೆ ಕೆಲವು ಆರಂಭವಾದಾಗಿನಿಂದಲೂ ಅನುಪಯುಕ್ತವಾಗಿವೆ. ಈ ಬಗ್ಗೆ ಗ್ರಾಮ ಪಂಚಾಯ್ತಿ ಅಧಿಕಾರಿಗಳಾ ಗಲೂ, ಗ್ರಾಮೀಣ ಮತ್ತು ನೀರು ನೈರ್ಮಲ್ಯ ಇಲಾಖೆ ಅಧಿಕಾರಿ ಗಳಾಗಲೂ ಗಮನ ಹರಿಸುತ್ತಿಲ್ಲ.
ತಾಲ್ಲೂಕಿನ ದೊಣ್ಣೆಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಬರುವ ಮರೆನಹಳ್ಳಿ ಸೇರಿದಂತೆ ತಾಲ್ಲೂಕಿನ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶುದ್ದ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕೆಲಸ ನಿರ್ವಹಿಸದೆ ದುಸ್ಥಿತಿಯಲ್ಲಿವೆ.
ಘಟಕಗಳ ನಿರ್ವಹಣೆ ಹೊತ್ತ ಏಜೆನ್ಸಿಯ ಸಿಬ್ಬಂದಿಗಳೂ ಸ್ಥಳಕ್ಕೆ ಬಾರದೇ ಸರ್ಕಾರದ ಲಕ್ಷಾಂತರ ರೂ. ಮೌಲ್ಯದ ಕುಡಿಯುವ ನೀರಿನ ಯಂತ್ರಗಳು ತುಕ್ಕು ಹಿಡಿಯುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಒಂದೆಡೆ ರಿಪೇರಿ ಆಗದೆ ಘಟಕಗಳು ನೆನೆಗುದಿಗೆ ಬಿದ್ದಿದ್ದರೆ ಮತ್ತೊಂದೆಡೆ ತಾಲ್ಲೂಕಿಗೆ ಹೊಸದಾಗಿ 56 ಘಟಕಗಳು ಮಂಜೂರಾಗಿವೆ.
ಹಾಳಾಗಿರುವ ಘಟಕಗಳನ್ನು ರಿಪೇರಿ ಮಾಡುವಂತೆ ಖಾಸಗಿ ಏಜೆನ್ಸಿಗಳಿಗೆ ಸೂಚನೆ ನೀಡಿರುವು ದಾಗಿ ತಾ.ಪಂ. ಇಒ ಮಲ್ಲಾನಾಯ್ಕ ಹೇಳಿದರು. ಪಿಡಿಒಗಳು ಹಾಗೂ ಇಲಾಖೆಯ ಅಧಿಕಾರಿಗಳು ತಕ್ಷಣ ಘಟಕಗಳನ್ನು ರಿಪೇರಿ ಮಾಡಿಸಿ ಗ್ರಾಮೀಣರಿಗೆ ಅನುವು ಮಾಡಿಕೊಡುವರೇ ಎಂಬುದನ್ನು ಕಾದು ನೋಡಬೇಕಿದೆ.