ಕೊರೊನಾ: ಇನ್ನೋರ್ವ ವೃದ್ಧೆ ನಿಧನ

ದಾವಣಗೆರೆ, ಜೂ. 4 – ಜಿಲ್ಲೆಯಲ್ಲಿ 13 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಪೈಕಿ ಓರ್ವ ವೃದ್ಧೆ ಮೃತಪಟ್ಟಿದ್ದಾರೆ. ಅಲ್ಲದೇ ನಗರದ ಪಿ.ಜೆ. ಬಡಾವಣೆಯ ಖಾಸಗಿ ಕಣ್ಣಿನ ಆಸ್ಪತ್ರೆಯ ಇಬ್ಬರು ವೈದ್ಯ ದಂಪತಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ದೇವರಬೆಳಕೆರೆಯ 83 ವರ್ಷದ ವೃದ್ಧೆ ಸೋಂಕಿಗೆ ಸಿಲುಕಿ ಮೃತಪಟ್ಟಿದ್ದಾರೆ. ಅವರು ಅಸ್ವಸ್ಥರಾದ ನಂತರ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದರು. ಸಿ.ಜಿ. ಆಸ್ಪತ್ರೆಗೆ ದಾಖಲಾಗಲು ಅವರಿಗೆ ತಿಳಿಸಲಾಗಿತ್ತಾದರೂ, ಅವರು ನಗರದ ಬಸವರಾಜಪೇಟೆಯಲ್ಲಿರುವ ಮಗನ ಮನೆಗೆ ತೆರಳಿದ್ದರು ಎಂದು ಹೇಳಿದ್ದಾರೆ.

ಕಳೆದ ಮೇ 31ರಂದು ಅವರು ತೀವ್ರ ಅಸ್ವಸ್ಥರಾದ ನಂತರ ಮಧ್ಯಾಹ್ನ 3.15ಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದು ರಾತ್ರಿ 11 ಗಂಟೆಗೆ ಅವರು ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಈ ವೃದ್ಧೆಗೆ  ಬಸವರಾಜಪೇಟೆಯ ಸೋಂಕಿತರಾದ ಪಿ – 2560 ದ್ವಿತೀಯ ಸಂಪರ್ಕದಿಂದ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 

ಇಬ್ಬರು ವೈದ್ಯರಿಗೆ ಸೋಂಕು : ನಗರದ ಪಿ.ಜೆ. ಬಡಾವಣೆಯ ಖಾಸಗಿ ಕಣ್ಣಿನ ಆಸ್ಪತ್ರೆಯ ವೈದ್ಯರಾದ ಇಬ್ಬರಿಗೆ ಕೊರೊನಾ ಸೋಂಕು ಕಂಡು ಬಂದಿದೆ. 37 ವರ್ಷದ ಪುರುಷ ಹಾಗೂ 35 ವರ್ಷದ ಮಹಿಳಾ ವೈದ್ಯರನ್ನು ಅವರ ಮನೆಗಳಲ್ಲೇ ಪ್ರತ್ಯೇಕವಾಗಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಈ ವೈದ್ಯರಿಗೆ ಸೋಂಕು ಯಾವ ರೀತಿ ಬಂತು ಹಾಗೂ ಅವರ ಸಂಪರ್ಕಕ್ಕೆ ಯಾರು ಬಂದಿದ್ದಾರೆ ಎಂಬುದನ್ನು ಇನ್ನೂ ಪತ್ತೆ ಮಾಡಲಾಗುತ್ತಿದೆ ಎಂದವರು ತಿಳಿಸಿದ್ದಾರೆ.

ಉಳಿದಂತೆ ಕೊರೊನಾ ಸೋಂಕಿತ ವ್ಯಕ್ತಿ ಪಿ 2819  ಹಾಗೂ ಪಿ 2415 ಸಂಪರ್ಕಕ್ಕೆ ಬಂದ ತಲಾ ಐವರು ಮತ್ತು ಪಿ 2560 ಸಂಪರ್ಕಕ್ಕೆ ಬಂದ ಒಬ್ಬರಿಗೆ ಸೋಂಕು ತಗುಲಿದೆ. ಇವರಲ್ಲಿ ಪಿ – 4088 ಸೋಂಕಿತ ಒಂದು ವರ್ಷದ ಗಂಡು ಮಗುವಾಗಿದೆ. ಗುರುವಾರ ಒಟ್ಟಾರೆ 13 ಜನರಿಗೆ ಸೋಂಕು ಖಚಿತವಾಗಿದೆ.

ಏಳು ಜನರು ಬಿಡುಗಡೆ : ಗುರುವಾರದಂದು ಏಳು ಕೊರೊನಾ ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಬಿಡುಗಡೆಯಾದವರು ಪಿ – 2557, ಪಿ – 2558, ಪಿ – 2559, ಪಿ – 2560, ಪಿ – 2416, ಪಿ – 2820 ಹಾಗೂ ಪಿ – 629 ಸಂಖ್ಯೆಯವರಾಗಿದ್ದಾರೆ. ಬಿಡುಗಡೆಯಾದವರಲ್ಲಿ ಪಿ – 2559 ಸಂಖ್ಯೆ ಪಡೆದ 8 ತಿಂಗಳ ಮಗುವೂ ಸೇರಿದೆ. ಅಲ್ಲದೇ ಆಸ್ಪತ್ರೆಗೆ ದಾಖಲಾಗಿರುವ ಎರಡೂವರೆ ತಿಂಗಳ ಸೋಂಕಿತ ಮಗುವೊಂದು ಚಿಕಿತ್ಸೆಗೆ ಸ್ಪಂದಿಸುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಇದುವರೆಗೂ 141 ಜನರು  ಗುಣಮುಖರಾಗಿ ಬಿಡುಗಡೆಯಾದಂತಾಗಿದೆ. 32 ಜನರು ಸಕ್ರಿಯ ಸೋಂಕಿತರಿದ್ದರೆ, ಆರು ಜನರು ಮೃತಪಟ್ಟಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಎಸ್ಪಿ ಹನುಮಂತರಾಯ, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ,  ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಡಿಎಸ್‍ಓ ಡಾ.ರಾಘವನ್ ಉಪಸ್ಥಿತರಿದ್ದರು.

error: Content is protected !!