ಈ ಕಡೆ ಒಂದಿಷ್ಟ್ ಗುಂಡಿ ಮುಚ್ಚಿಸ್ರಿ…

ಅಶೋಕ ರಸ್ತೆ ರೈಲ್ವೇ ಗೇಟ್ ಬಳಿ ಹಳಿಗಳ ಅಕ್ಕ ಪಕ್ಕ ಫೇವರ್ಸ್

ದಾವಣಗೆರೆ, ಜೂ. 3- ಅಶೋಕ ರಸ್ತೆಯ ರೈಲ್ವೇ ಗೇಟ್ ನಿಂದ ಮಂಡಿಪೇಟೆಯ ಎಸ್‌ಬಿಐ ಎಟಿಎಂ ವರೆಗಿನ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಲಾಗಿದೆ. ಜೊತೆಗೆ ರೈಲ್ವೇ ಗೇಟ್ ಬಳಿ ಹಳಿಗಳ ನಡುವೆ ಫೇವರ್ಸ್ ಹಾಕಿ ಅಲ್ಲಿದ್ದ ಗುಂಡಿಗಳಿಂದ ಮುಕ್ತಿ ನೀಡುವ ಕಾರ್ಯ  ಬಹುತೇಕ ಪೂರ್ಣಗೊಂಡಿದೆ.

ಮಂಡಿಪೇಟೆ ರಸ್ತೆ ಕಾಮಗಾರಿಯಲ್ಲಿನ ಉಳಿದ ಹಣದಲ್ಲಿ ಸಾರ್ವಜನಿಕರ ಒತ್ತಾಯದ ಮೇರೆಗೆ ಮಂಡಿಪೇಟೆ ರಸ್ತೆಯಿಂದ ರೈಲ್ವೇ ಹಳಿವರೆಗಿನ ರಸ್ತೆಗೆ ಕಾಂಕ್ರೀಟ್ ಮಾಡಲಾಗಿದೆ. ರೈಲ್ವೇ ಹಳಿಯ ಅಕ್ಕಪಕ್ಕ ಫೇವರ್ಸ್ ಹಾಕಿಸಲಾಗುತ್ತಿದೆ ಎಂದು ಸ್ಮಾರ್ಟ್ ಸಿಟಿ ಎಇಇ ರವಿಕುಮಾರ್ ಪತ್ರಿಕೆಗೆ ತಿಳಿಸಿದರು.

ಇಲ್ಲಿನ ರೈಲ್ವೇಗೇಟ್ ಬಳಿಯ ಜನದಟ್ಟಣೆಗೆ ಮುಕ್ತಿ ದೊರೆಯದೆ, ಇಲ್ಲಿನ ಗುಂಡಿಗಳನ್ನೂ ಮುಚ್ಚಿಸದೆ ಜನರು ಪರದಾಡುತ್ತಿದ್ದರು. ಮಳೆ ಬಂದಾಗಂತೂ ಗುಂಡಿಗಳಲ್ಲಿ ನೀರು ತುಂಬಿಕೊಂಡು ಸವಾರರು ಬಿದ್ದು ಎದ್ದು ಹೋಗಬೇಕಾಗುತ್ತಿತ್ತು.  ಇದೀಗ  ರೈಲ್ವೇ ಗೇಟ್ ಬಳಿ ಫೇವರ್ಸ್ ಹಾಕಿ ಸುಗಮ ಸಂಚಾರಕ್ಕೆ ಸ್ಮಾರ್ಟ್ ಸಿಟಿ ಅನುವು ಮಾಡಿಕೊಟ್ಟಿದೆ. ಒಂದು ಭಾಗದಲ್ಲಿ ರಸ್ತೆಗೂ ಕಾಂಕ್ರೀಟ್ ಹಾಕಿ ಸವಾರರಿಗೆ ಅನುವು ಮಾಡಿಕೊಟ್ಟಿದೆ.

ಅಂದ ಹಾಗೆ ಈ ಕೆಲಸ ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಡಿಪೇಟೆ ರಸ್ತೆ ಕಾಮಗಾರಿ ವೇಳೆ ಉಳಿದ ಹಣದಿಂದ ನಡೆಸಲಾಗುತ್ತಿರುವ  ಈ ಕಾರ್ಯಕ್ಕೆ ಸ್ಥಳೀಯರಿಂದ ಶ್ಲ್ಯಾಘನೆಯೂ ವ್ಯಕ್ತವಾಗುತ್ತಿದೆ.  ಆದರೆ ಗಾಂಧಿ ವೃತ್ತದಿಂದ ಹಳಿಯ ವರೆಗಿನ ರಸ್ತೆಯೂ ಗುಂಡಿಗಳಿಂದ ತುಂಬಿದೆ. ಮಳೆಗಾಲದಲ್ಲಿ ಓಡಾಡುವುದು ಕಷ್ಟವೇ ಸರಿ. ಆದ್ದರಿಂದ ಆ ರಸ್ತೆಯನ್ನೂ ದುರಸ್ತಿ ಪಡಿಸಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

error: Content is protected !!